;Resize=(412,232))
ಹುಬ್ಬಳ್ಳಿ: ಇತ್ತೀಚೆಗೆ ಹೃದಯಾಘಾತದಿಂದ ಜನರು ಸಾವನ್ನಪ್ಪುತ್ತಿರುವ ಪ್ರಕರಣಗಳು ನಿಜಕ್ಕೂ ಬೇಸರದ ಸಂಗತಿ. ಇದು ಕೋವಿಡ್ ಲಸಿಕೆಯಿಂದ ಆಗುತ್ತಿದೆ ಎನ್ನುತ್ತಿರುವುದು ಬೇಜವಾಬ್ದಾರಿತನದ ಪರಮಾವಧಿ. ವಿಶ್ವದ 150ಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆ ಹೋಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿತನದ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಸಿಕೆಯಿಂದ ಇಡೀ ವಿಶ್ವವೇ ಭಾರತವನ್ನು ಕೊಂಡಾಡಿದೆ. ಆದರೆ, ಈ ರೀತಿ ಹೇಳಿಕೆ ನೀಡುತ್ತಿರುವುದು ದೇಶಕ್ಕೆ ಮಾಡುವ ಅಪಮಾನ. ಯುದ್ಧದ ಸಮಯದಲ್ಲೂ ಪಾಕಿಸ್ತಾನ ನೀಡಿದಂತಹ ಹೇಳಿಕೆಯನ್ನು ಕಾಂಗ್ರೆಸ್ ನವರು ನೀಡಿದರು. ಚೀನಾ ವಿಚಾರವಾಗಿಯೂ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಾರೆ ಎಂದರು.
ಈಗ ಕೋವಿಡ್ ಲಸಿಕೆ ಹಾಗೂ ಹೃದಯಾಘಾತದ ಬಗ್ಗೆ ವಿಶೇಷ ಕಮಿಟಿ ವರದಿ ನೀಡಿದೆ. ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧವಿಲ್ಲ ಎಂಬ ವರದಿ ನೀಡಿದೆ. ಸಿಎಂ ಸಿದ್ಧರಾಮಯ್ಯ ಅವರು ಈ ಬಗ್ಗೆ ಕ್ಷಮೆ ಕೇಳಬೇಕು. ಸಿದ್ಧರಾಮಯ್ಯ ಅವರೂ ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. ವಿದೇಶದ ವ್ಯಾಕ್ಸಿನ್ ತೆಗೆದುಕೊಂಡಿದ್ದಾರಾ? ಮೋದಿಯವರ ನೇತೃತ್ವ ಎಂಬ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ರಾಜ್ಯ ಸರ್ಕಾರ ರಚನೆ ಮಾಡಿರುವ ಕಮಿಟಿಯೇ ಈಗಾಗಲೇ ವರದಿ ನೀಡಿದೆ. ರಾಜ್ಯ ಸರ್ಕಾರ ರಚನೆ ಮಾಡಿದ ಸಮಿತಿಯೇ ಅಧ್ಯಯನ ಮಾಡಿದೆ. ಯಾವುದೇ ಆಧಾರವಿಲ್ಲದೇ ಈ ರೀತಿ ಮಾತನಾಡುವುದು ಸಮಂಜಸವಲ್ಲ. ಈಗಾಗಲೇ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಇದರಿಂದ ವೈಜ್ಞಾನಿಕ ಸಮೀತಿಗೆ ಅವಮಾನ ಮಾಡಿದಂತಾಗಿದೆ. ಸಿಎಂ ಸಿದ್ಧರಾಮಯ್ಯ ವೈಜ್ಞಾನಿಕ ಕಮಿಟಿಯ ಕ್ಷಮೆ ಕೇಳಬೇಕು ಎಂದರು.