ಕನ್ನಡಪ್ರಭ ವಾರ್ತೆ ಕೋಲಾರ
ಆಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಜ.೨೨ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕೋಲಾರದ ಶ್ರೀರಾಮದೇವರಗುಡಿ ಸೇರಿದಂತೆ ಜಿಲ್ಲಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ಜಿಲ್ಲಾಡಳಿತದ ನಿರ್ಬಂಧದ ನಡುವೆಯೂ ಹಿಂದೂಪರ ಸಂಘಟನೆಗಳು ಪ್ರಮುಖ ರಸ್ತೆಗಳಲ್ಲಿ ಬಂಟಿಂಗ್ ಕಟ್ಟಿ ಕೇಸರಿಮಯವಾಗಿಸಿವೆ.ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲ, ಮನೆಗಳ ಮೇಲೂ ಶ್ರೀರಾಮನಿರುವ ಕೇಸರಿ ಭಗವಧ್ವಜ ರಾರಾಜಿಸುತ್ತಿದ್ದು, ರಾಮಲಲ್ಲಾ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಕಣ್ಣುಗಳಲ್ಲಿ ತುಂಬಿಕೊಳ್ಳಲು ಜನತೆ ಕಾತರರಾಗಿದ್ದಾರೆ. ರಾಮದೇವರಗುಡಿ ಪುಷ್ಪ ಯಾಗಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ಈಗಾಗಲೇ ನಗರದ ಬ್ರಾಹ್ಮಣರ ಬೀದಿಯ ಪುರಾತನ ರಾಮದೇವರ ಗುಡಿಯ ಶಿಥಿಲಗೊಂಡಿದ್ದ ಕಾಂಪೌಂಡ್ ಸಿದ್ದಪಡಿಸಲಾಗಿದೆ, ಇಡೀ ದೇವಾಲಯಕ್ಕೆ ಬಣ್ಣಬಳಿಯಲಾಗಿದ್ದು, ಆವರಣ ಸುಂದರಗೊಳಿಸಲಾಗಿದೆ. ಸಂಸದರ ನೇತೃತ್ವದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ. ಅನೇಕ ಭಕ್ತರು ಸೇರಿ ಶ್ರೀರಾಮನಿಗೆ ಪುಷ್ಪಯಾಗಕ್ಕೂ ಸಿದ್ದತೆ ಮಾಡಿದ್ದು, ಸಾವಿರಾರು ಮಂದಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಡೂಂಲೈಟ್ ವೃತ್ತದಲ್ಲಿ ರಾಮನ ಕಟೌಟ್ ನಗರದ ಡೂಂಲೈಟ್ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ಹಾಗೂ ಓಂಶಕ್ತಿ ಚಲಪತಿ ಮತ್ತಿತರರು ಶ್ರೀರಾಮನ ಬೃಹತ್ ಕಟೌಟ್ ನಿರ್ಮಿಸಿದ್ದು, ಆ ಭಾಗ ಕೇಸರಿಮಯವಾಗಿದೆ ಮತ್ತು ಜ.೨೨ ರಂದು ವೃತ್ತದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಸಾವಿರಾರು ಮಂದಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಬಜರಂಗದಳದ ಮುಖಂಡರಾದ ಬಾಲಾಜಿ, ಬಾಬು, ಅಪ್ಪಿ ಮತ್ತಿತರರು ನಗರದ ಬಸ್ ನಿಲ್ದಾಣಕ್ಕೆ ಹತ್ತಿರವಿರುವ ಗಣೇಶದರ್ಶನ್ ವೃತ್ತವನ್ನು ಕೇಸರಿಮಯವಾಗಿಸಿದ್ದು, ಶ್ರೀರಾಮನ ಭಾವಚಿತ್ರವಿಟ್ಟು ಇಡೀ ದಿನ ಪೂಜೆಯ ವ್ಯವಸ್ಥೆ ಮಾಡಲಾಗಿದೆ, ಸಾವಿರಾರು ಮಂದಿಗೆ ಪ್ರಸಾದ ವಿನಿಯೋಗಕ್ಕೂ ಕ್ರಮವಹಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲೂ ಜ.೨೨ ಅನ್ನು ಅತ್ಯಂತ ಪವಿತ್ರ ದಿನವೆಂದು ಭಾವಿಸಿದ್ದು, ಶ್ರೀರಾಮ,ಹನುಮ ದೇವಾಲಯಗಳೂ ಸೇರಿದಂತೆ ವಿವಿಧೇಡೆ ಪೂಜೆಗೆ ವ್ಯವಸ್ಥೆ ಮಾಡಲಾಗಿದೆ.ಶಂಕರಮಠದಲ್ಲಿ ರಾಮತಾರಕ ಜಪ ಕೋಲಾರದ ಕೋಟೆಯ ಶೃಂಗೇರಿ ಶಂಕರಮಠದಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ‘ನಾವೆಲ್ಲರೂ ಬಹಳ ವರ್ಷಗಳಿಂದ ನಿರೀಕ್ಷಿಸುತ್ತಿದ್ದ, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮರು ಪ್ರತಿಷ್ಠಾಪನೆಯು, ಅತ್ಯಂತ ವೈಭವದಿಂದ, ಭಕ್ತಿ ಶ್ರದ್ಧೆಗಳಿಂದ ಜ.೨೨ ಸೋಮವಾರ ನಡೆಯಲಿದ್ದು ಎಲ್ಲರಿಗೂ ಹರ್ಷ ಉಂಟು ಮಾಡಿದೆ ಎಂದು ತಿಳಿಸಿದೆ.ಕೋಲಾರ ಶೃಂಗೇರಿ ಶಂಕರ ಮಠದಲ್ಲಿ ಸೋಮವಾರ ಬೆಳಗ್ಗೆ ೬ ಗಂಟೆಯಿಂದ ವೇದಪಾರಾಯಣ, ಶತಶ್ಲೋಕಿ ರಾಮಾಯಣ ಪಾರಾಯಣ, ರಾಮತಾರಕ ಜಪ ಮತ್ತು ಅಖಂಡ ‘ಶ್ರೀರಾಮ ಜಯರಾಮ ಜಯಜಯ ರಾಮ’ ರಾಮತಾರಕ ಮಂತ್ರ, ಮಹಾನೀರಾಜನ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಸಂಜೆ ೬ ರಿಂದ ರಾಮದೀಪೋತ್ಸವ ಮತ್ತು ಶ್ರೀ. ಎಂ.ಜಿ. ಶ್ರೀನಿವಾಸ ರಾವ್, ವಕೀಲರು, ಕೋಲಾರ ಮತ್ತು ಸಂಗಡಿಗರಿಂದ ರಾಮಭಜನೋತ್ಸವ, ಮಹಾನೀರಾಜನ ಮತ್ತು ಮಹಾಪ್ರಸಾದ ಏರ್ಪಡಿಸಲಾಗಿದೆ.