ಶಿವಾನಂದ ಗೊಂಬಿ
ಹುಬ್ಬಳ್ಳಿ: "ಬಾಬರಿ ಮಸೀದಿಯ ಗುಮ್ಮಟ ನೆಲಸಮ ಮಾಡಲು ಮೇಲೆ ಏರಿದ ದೇಶದ 100 ಜನರಲ್ಲಿ ನಾನೂ ಒಬ್ಬ. ಗುಮ್ಮಟದ ಮೇಲೆ ಭಗವಾ ಧ್ವಜ ಮೊದಲು ಹಾರಿಸಿದ್ದು ನಾನೇ... "!ಇದು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ನೆಲಸಮವಾದ ವೇಳೆ ಕರಸೇವೆಯಲ್ಲಿ ಭಾಗವಹಿಸಿದ್ದ ಗುರುಸಿದ್ದಪ್ಪ ಶೆಲ್ಲಿಕೇರಿ ಮಾತು.
ಆಗಿನ್ನು ಯುವಕನಾಗಿದ್ದ ನಾನು, ರಾಮಮಂದಿರದ ವಿಷಯವಾಗಿ ಜನಜಾಗೃತಿ ಮೂಡಿಸಲು ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರೆಲ್ಲರೂ ಬಂದಿದ್ದರು. ಅವರ ಭಾಷಣದಿಂದ ಪ್ರೇರಿತನಾಗಿ ಕರಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೆ. 1989, 1991ರಲ್ಲಿ ನಡೆದ ಕರಸೇವೆಯಲ್ಲೂ ಭಾಗವಹಿಸಿದ್ದೆ. ಆದರೆ ಆಗ ಸಾಧ್ಯವಾಗಿರಲಿಲ್ಲ. ಮುಂದೆ 1992ರ ಡಿಸೆಂಬರ್ 6ರಂದು ನಾವು ಯಶಸ್ವಿಯಾದೆವು.ಮಾಜಿ ಶಾಸಕ ಅಶೋಕ ಕಾಟವೆ ಅವರ ನೇತೃತ್ವದಲ್ಲಿ ನಾವು 1992ರಲ್ಲಿ ಹೋಗಿದ್ದೇವು. ನಮಗಾಗಿ ಪ್ರತ್ಯೇಕ ಟೆಂಟ್ ಹಾಕಲಾಗಿತ್ತು. ಅಲ್ಲಿ ನಮಗೆಲ್ಲ ಯಾವ ರೀತಿ ಇರಬೇಕು. ಯಾವ ರೀತಿ ಕಾರ್ಯಾಚರಣೆ ನಡೆಸಬೇಕು ಎಂಬುದನ್ನೆಲ್ಲ ಹಿರಿಯರು ತಿಳಿಸುತ್ತಿದ್ದರು. ಜತೆಗೆ ಡಿ. 6ರಂದು ಯಾರು ಯಾವ ರೀತಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂಬುದರ ವಿವರ ನೀಡಿದ್ದರು. ಗುಮ್ಮಟದ ಮೇಲೆ ಹತ್ತಲು ದೇಶದ 100 ಜನರನ್ನು ಆಯ್ಕೆ ಮಾಡಲಾಗಿತ್ತು. ಆ 100 ಜನರಲ್ಲಿ ನಾನು ಕೂಡ ಒಬ್ಬ. ಗುಮ್ಮಟದ ಮೇಲೆ ಹತ್ತಿ ಭಗವಾಧ್ವಜ ಹಾರಿಸಿದ್ದು ನಾನೇ. ನಮ್ಮ ಹುಬ್ಬಳ್ಳಿಯ ಬೃಹತ್ ಭಗವಾಧ್ವಜ ಹಾರಿಸಿದ್ದೆ ಎಂಬುದು ಈಗಲೂ ನನಗೆ ಹೆಮ್ಮೆಯ ವಿಷಯವೇ.
ತಲೆಕೆಡಿಸಿಕೊಳ್ಳಬೇಡಿ:ಗುಮ್ಮಟ ಕೆಡುವುವಾಗ ಯಾರೇ ಬಿದ್ದರೂ, ಕೈಕಾಲು ಮುರಿದುಕೊಂಡರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸದಲ್ಲಿ ಮಾತ್ರ ನಿಮಗೆ ನಿಗಾ ಇರಬೇಕು ಎಂದು ಹೇಳಿದ್ದರು. ಅದರಂತೆ ನಾವು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದೆವು. ಒಳಗೆ ದೇವಾಲಯಕ್ಕೆ ಸಂಬಂಧಪಟ್ಟಂತಹ ಸಾಕಷ್ಟು ಕುರುಹುಗಳಿದ್ದವು. ರಾಮಲಲ್ಲಾನ ಮೂರ್ತಿ, ಲಕ್ಷ್ಮಣ, ಹನುಮಂತ, ಸೀತಾಮಾತೆಯ ಮೂರ್ತಿ, ದೊಡ್ಡ ಘಂಟೆಗಳಿದ್ದವು ಎಂದು ನೆನಪಿಸಿಕೊಂಡರು ಗುರುಸಿದ್ದಪ್ಪ.ಅಲ್ಲಿನ ಪ್ರತಿ ಘಟನೆಯೂ ಕಣ್ಣಿಗೆ ಕಟ್ಟಿದಂತೆ ಇದೆ. ಉಮಾಭಾರತಿ, ಅಡ್ವಾಣಿ, ಅಶೋಕ ಸಿಂಘಾಲ್, ಯಡಿಯೂರಪ್ಪ ಹೀಗೆ ಪ್ರತಿಯೊಬ್ಬರ ಭಾಷಣ, ನಾವು ಮಾಡಿದ ಕರಸೇವೆ, ಮಸೀದಿ ನೆಲಸಮವಾದ ಬಳಿಕ ಮರುದಿನ ನಡೆದ ರಾಮಲಲ್ಲಾನ ಪೂಜೆ, ಹೀಗೆ ಪ್ರತಿಯೊಂದರ ನೆನಪು ಈಗಲೂ ಹಚ್ಚ ಹಸಿರಾಗಿವೆ.ಮರುದಿನ ಮತ್ತೆ ಅಲ್ಲಿಂದ ಹೊರಟೆವು. ರೈಲಿನಲ್ಲಿ ಪಯಣ. ನಿಲ್ದಾಣ ಬಂದಾಗಲೆಲ್ಲ ನಮ್ಮ ಮೇಲೆ ಕಲ್ಲೆಸೆತ ನಡೆಯುತ್ತಿತ್ತು. ಆದರೂ ಧೃತಿಗೆಡದೆ ಕರಸೇವೆಯಲ್ಲಿ ಭಾಗವಹಿಸಿ ಬಂದೆವು. ಸುರಕ್ಷಿತವಾಗಿ ಮನೆ ತಲುಪಿದೆವು.
ಈಗ ರಾಮಮಂದಿರದ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದೆ. ನಿಜಕ್ಕೂ ಆಗ ಹೋರಾಟ ಮಾಡಿದ್ದು, ಈಗ ಸಾರ್ಥಕ ಎನಿಸುತ್ತದೆ. ಇದು ನಮಗೆ ಹೆಮ್ಮೆಯ ವಿಷಯ. ಸದ್ಯ ಏನೋ ನಾವು ರಾಮಮಂದಿರಕ್ಕೆ ಹೋಗಲು ಸಾಧ್ಯವಾಗಿಲ್ಲ. ಆದರೆ ಮುಂದೆ ರಾಮಮಂದಿರಕ್ಕೆ ಹೋಗಿ ಅಲ್ಲಿನ ದೃಶ್ಯವನ್ನು ಮತ್ತೊಮ್ಮೆ ಕಣ್ತುಂಬಿಕೊಂಡು ಬರುತ್ತೇವೆ. ಕುಟುಂಬ ಸಮೇತರಾಗಿ ಅಯೋಧ್ಯೆಗೆ ಹೋಗಿ ಬರುತ್ತೇವೆ ಎಂದು ಹೆಮ್ಮೆಯಿಂದ ನುಡಿದರು ಗುರುಸಿದ್ದಪ್ಪ.