ಸದಸ್ಯರ ಸಭೆ । ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಅಧ್ಯಕ್ಷ ಅಭಿಮತ
ಕನ್ನಡಪ್ರಭ ವಾರ್ತೆ ಹಾಸನಮಾನವ ಹಕ್ಕುಗಳನ್ನು ಯಾರು ಕೊಡುವುದಿಲ್ಲ, ಅವು ತಮಗೆ ಹುಟ್ಟಿನಿಂದಲೇ ಬಂದಿವೆ. ಹುಟ್ಟಿನಿಂದಲೇ ಎಲ್ಲರೂ ಸಮಾನರು ಎಂದು ಹಾಸನ ವಿಭಾಗ ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯ ಅಧ್ಯಕ್ಷ ಎನ್ ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಪುಷ್ಕರಣಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಭಾರತೀಯ ಮಾನವ ಹಕ್ಕುಗಳ ಮಹಾ ಮೈತ್ರಿ ಹಾಸನ ವಿಭಾಗದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಮಾನವ ಹಕ್ಕು ಸಿದ್ಧಾಂತ ವಿಶ್ವವ್ಯಾಪಿ ಇರುವುದರಿಂದ ಪ್ರತಿಯೊಬ್ಬರೂ ಮಾನವ ಹಕ್ಕುಗಳಿಗೆ ತಲೆಬಾಗಲೇಬೇಕು. ಬದುಕು, ಸ್ವಾತಂತ್ರ್ಯ, ಸಮಾನತೆ, ಘನತೆ ಈ ಮೂಲ ತತ್ವಗಳ ಆಧಾರದ ಮೇಲೆ ಮಾನವ ಹಕ್ಕುಗಳನ್ನು ಸಂವಿಧಾನದ ಅಡಿಯಲ್ಲಿ ಕಾನೂನಾತ್ಮಕವಾಗಿ ಸಂರಕ್ಷಿಸಲಾಗುತ್ತಿದೆ. ೧೯೪೮ರಲ್ಲಿ ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಒಗ್ಗೂಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.ಶಾಂತಿ, ಸುವ್ಯವಸ್ಥೆ ಮತ್ತು ಮೂಲ ನಾಗರಿಕ ಸೌಲಭ್ಯಗಳು ಎಂದು ಎರಡು ಹಂತದಲ್ಲಿ ಹಕ್ಕುಗಳನ್ನು ರಕ್ಷಣೆ ಮಾಡಬಹುದಾಗಿದೆ. ಆದರೆ, ಸರ್ಕಾರಿ ಅಧಿಕಾರಿಗಳಿಂದ ಮತ್ತು ಪ್ರಾಧಿಕಾರದವರಿಂದಲೇ ಅತೀ ಹೆಚ್ಚು ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಚ್ಯುತಿ ಬಂದರೂ ಅವರು ನೇರವಾಗಿ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಬಹುದಾಗಿದೆ. ಇಲ್ಲದಿದ್ದರೆ ಸಮಾನ ಮನಸ್ಕರು ಒಟ್ಟುಗೂಡಿ ಸಂಘಟನೆಗೊಂಡು, ಸಂಘವನ್ನು ರಚಿಸಿಕೊಂಡು ದೂರು ನೀಡಬಹುದಾಗಿದೆ ಎಂದರು.
ರೋಟರಿ ಮಿಡ್ ಟೌನ್ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಸದಸ್ಯರು ಶಿಸ್ತುಬದ್ಧರಾಗಿರಬೇಕು, ಯಾವುದೇ ಪ್ರತಿಫಲ ಬಯಸದೆ, ಅಧಿಕಾರಿಗಳಿಗೆ ತೊಂದರೆ ನೀಡದೇ ಸ್ನೇಹ ಬಾಂಧವ್ಯದೊಂದಿಗೆ ಹಕ್ಕು ವಂಚಿತರ ಪರವಾಗಿ ಕೆಲಸ ಮಾಡುವ ಮನಸ್ಥಿತಿ ಇರುವವರು ತಮ್ಮ ಸಮಿತಿಯ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಇಲ್ಲಿ ಯಾವುದೇ ತಾರತಮ್ಯಗಳಿಲ್ಲ, ಸಂಸ್ಥೆಯ ಉದ್ದೇಶವನ್ನು ಅರ್ಥಮಾಡಿಕೊಂಡರೆ ಸಾಕು ಎಂದರು.ಸಭೆಯಲ್ಲಿ ಅನುಭವಿ ಸದಸ್ಯರಾದ ವೇಣು ಒಂದು ಕೌಟುಂಬಿಕ ಮೊಕದ್ದಮೆ ಬಗ್ಗೆ ವಿವರವಾಗಿ ಹೇಗೆ ಮುಂದುವರಿಯಬೇಕೆಂದು ಸಭೆಯಲ್ಲಿ ಚರ್ಚಿಸಿದರು. ಹಿರಿಯ ಸದಸ್ಯರಾದ ಶಿವಸ್ವಾಮಿ, ಮುಖ್ಯ ಉಪನ್ಯಾಸಕ ರಮಾನಂದ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಯ ಬಗ್ಗೆ, ಸಂಘದ ಉದ್ದೇಶ ಮತ್ತು ಧ್ಯೇಯ ಹಾಗೂ ಅನುಭವಸ್ಥರ ಮಾರ್ಗದರ್ಶನವನ್ನು ಹೇಗೆ ಪಡೆಯಬೇಕೆಂದು ಉಪನ್ಯಾಸ ನೀಡಿದರು. ನಂತರ ಎಲ್ಲಾ ಸದಸ್ಯರ ಅನುಮೋದನೆಯಂತೆ ಜ. ೨೬ ರಂದು ಮುಂದಿನ ಸಭೆಯನ್ನು ಸೇರಲು ನಿರ್ಧರಿಸಲಾಯಿತು.
ಸಭೆಯಲ್ಲಿ ಶಂಕರ್ ನಾರಾಯಣ್, ಉಮೇಶ್, ಶ್ರೀಧರ್, ರಂಗಸ್ವಾಮಿ ಮತ್ತು ಶಶಿಕಾಂತ್ ಹಾಜರಿದ್ದರು.ಪುಷ್ಕರಣಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ನಡೆದ ಭಾರತೀಯ ಮಾನವ ಹಕ್ಕುಗಳ ಮಹಾ ಮೈತ್ರಿ ಹಾಸನ ವಿಭಾಗದ ಸದಸ್ಯರ ಸಭೆ.