ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ‘ಕಳೆದ ಮೂರು ದಿನಗಳಿಂದ ಕೇಳಿಬರುತ್ತಿದ್ದ ಸ್ಫೋಟದ ಸದ್ದು ಮಂಗಳವಾರದ ವೇಳೆಗೆ ಇಳಿಮುಖವಾಗಿದೆ. ಇಡೀ ದಿನದಲ್ಲಿ ಎರಡು ಬಾರಿ ಸದ್ದು ಕೇಳಿದ್ದು ಬಿಟ್ಟರೆ ಯಾವುದೇ ಸೈರನ್ ಎಚ್ಚರಿಕೆ ಕೂಡ ಇರಲಿಲ್ಲ. ಸದ್ಯದ ಮಟ್ಟಿಗೆ ಯುದ್ಧದ ಪರಿಸ್ಥಿತಿ ಸಹಜ ಸ್ಥಿತಿಗೆ ಬರುವಂತೆ ಕಂಡುಬರುತ್ತಿದೆ. ಆದರೆ ಮುಂದೇನು ಆಗಬಹುದು ಎಂದು ಈಗಲೇ ಹೇಳುವಂತಿಲ್ಲ’ ಇದು ಯುದ್ಧಪೀಡಿತ ಇಸ್ರೇಲ್‌ನ ಗಾಜಾಪಟ್ಟಿಯಿಂದ ಕೇವಲ 22 ಕಿ.ಮೀ. ದೂರದ ಕಿಯಾತ್‌ಗಾಟ್‌ನಲ್ಲಿ ಇರುವ ಮಂಗಳೂರು ಮೂಲದ ದೇವದಾಸ್ ಶೆಟ್ಟಿ ಅವರ ಮಾಹಿತಿ. ಶನಿವಾರದಿಂದೀಚೆಗೆ ನಾವು ಇರುವಲ್ಲಿ ದಿನಪೂರ್ತಿ ಸ್ಫೋಟದ್ದೇ ಸದ್ದು. ಅಂದರೆ, ಹಮಾಸ್ ಉಗ್ರರು ಉಡಾಯಿಸುವ ರಾಕೆಟ್‌ನ್ನು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ ಆಗಸದಲ್ಲಿ ಅರ್ಧದಲ್ಲೇ ತುಂಡರಿಸುತ್ತದೆ. ಅದೇ ಸ್ಫೋಟದ ಶಬ್ದವನ್ನು ದಿನಪೂರ್ತಿ ಕೇಳುತ್ತಿದ್ದೆವು. ಆದರೆ ಮಂಗಳವಾರ ಬೆಳಗ್ಗೆ 8 ರಿಂದ 9 ಗಂಟೆ ಅವಧಿಯಲ್ಲಿ ಎರಡು ಬಾರಿ ಸ್ಫೋಟದ ಸದ್ದು ಕೇಳಿದ್ದು ಬಿಟ್ಟರೆ ಉಳಿದಂತೆ ಇಡೀ ದಿನ ಯಾವುದೇ ಸ್ಫೋಟದ ಸದ್ದು ಇಲ್ಲ. ಬಹುಶಃ ವಾಯು ದಾಳಿಯಲ್ಲಿ ಇಸ್ರೇಲ್ ಸೈನ್ಯ ಹಮಾಸ್ ಉಗ್ರರ ವಿರುದ್ಧ ನಿರ್ಣಾಯಕ ಹಂತ ತಲುಪಿರಬೇಕು ಎಂಬ ಮಾಹಿತಿಗಳು ಕೇಳಿಬರುತ್ತಿದೆ ಎನ್ನುತ್ತಾರೆ. ಜನಜೀವನ ಸಹಜತೆಯತ್ತ: ಮೂರು ದಿನಗಳಿಂದ ಬಿಕೋ ಎನ್ನುತ್ತಿದ್ದ ಕಿಯಾತ್‌ಗಾಟ್‌ನಲ್ಲಿ ಜನಜೀವನ ಮಂಗಳವಾರ ಸಹಜ ಸ್ಥಿತಿಗೆ ಬರಲಾರಂಭಿಸಿದೆ. ಶಾಲಾ ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಆದರೆ ಅಗತ್ಯ ಕೆಲಸಗಳಿಗೆ ಮಾತ್ರ ಪೇಟೆಗೆ ಬರುವಂತೆ ಸರ್ಕಾರ ಸೂಚನೆ ನೀಡಿತ್ತು. ಮಂಗಳವಾರ ಅಂಗಡಿ ಮುಂಗಟ್ಟುಗಳು ತೆರೆದಿದ್ದು, ಸಾರ್ವಜನಿಕ ಸಾರಿಗೆ ಕನಿಷ್ಠ ಪ್ರಮಾಣದಲ್ಲಿ ಸಂಚರಿಸತೊಡಗಿದೆ. ಇಲ್ಲಿ ಪ್ರತಿಯೊಬ್ಬರೂ ವಾಹನದಲ್ಲಿ ಸಂಚರಿಸುವುದರಿಂದ ಬೆಳಗ್ಗೆ ಮತ್ತು ಸಂಜೆ ಮಾತ್ರ ವಾಯು ಸಂಚಾರ ನಡೆಸುತ್ತಾರೆ ಎನ್ನುತ್ತಾರೆ. ಗಾಜಾಪಟ್ಟಿಯ 2 ಕಿ.ಮೀ. ದೂರದ ಹಳ್ಳಿ ಪ್ರದೇಶದಲ್ಲಿ ನಮ್ಮ ಯಜಮಾನರ ಸಂಬಂಧಿಕರ ಕೃಷಿ ಫಾರ್ಮ್ ಇದೆ. ಅಲ್ಲಿಗೆ ಕಳೆದ ಮೂರು ದಿನಗಳಲ್ಲಿ ತೆರಳಲು ನಿರ್ಬಂಧ ಇತ್ತು. ಮಂಗಳವಾರ ನಿರ್ಬಂಧ ಸಡಿಲಿಸಿದ್ದು, ಸಂಬಂಧಿಕರು ಫಾರ್ಮ್‌ಗೆ ತೆರಳಿದ್ದಾರೆ. ಗಂಭೀರ ಪರಿಸ್ಥಿತಿ ಇದ್ದರೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎನ್ನುತ್ತಾರೆ. ಆದರೆ ಇದನ್ನೇ ಅಂತಿಮ ಎಂದು ಹೇಳುವಂತಿಲ್ಲ. ಯಾಕೆಂದರೆ ಗಾಜಾಪಟ್ಟಿಯ ಸುತ್ತಮುತ್ತಲಿನ ಪ್ರದೇಶಗಳಿಂದ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗಾಜಾ ಪಟ್ಟಿ ಮೇಲೆ ಇಸ್ರೇಲ್ ಭೂಸೇನೆ ದಾಳಿ ಮುಂದುವರಿಸುವ ಸಾಧ್ಯತೆ ದಟ್ಟವಾಗಿದೆ ಎನ್ನುತ್ತಾರೆ. ದೇಶ ತೊರೆಯುವ ಅಗತ್ಯ ಬಾರದು: 20-22 ವರ್ಷಗಳ ಹಿಂದೆ ಇಸ್ರೇಲ್ ಮೇಲೆ ಸಿರಿಯಾ, ಪಾಲೆಸ್ತೇನ್, ಗಾಜಾಪಟ್ಟಿ ಒಳಗೊಂಡಂತೆ ಭೀಕರ ದಾಳಿ ನಡೆದಿತ್ತು. ಆಗ ಅದನ್ನು ಧೈರ್ಯವಾಗಿ ಇಸ್ರೇಲ್ ಹಿಮ್ಮೆಟ್ಟಿಸಿತ್ತು. ಆಗಲೂ ಇಸ್ರೇಲ್‌ನಲ್ಲಿರುವ ಹೊರದೇಶದವನ್ನು ತಾಯ್ನಾಡಿಗೆ ಕಳುಹಿರಲಿಲ್ಲ, ಈಗಲೂ ಭಾರತೀಯರನ್ನು ಭಾರತಕ್ಕೆ ವಾಪಸ್ ಕಳುಹಿಸುವ ಅನಿವಾರ್ಯತೆ ಇಸ್ರೇಲ್‌ಗೆ ಬಾರದು. ಅಷ್ಟರ ಮಟ್ಟಿಗೆ ಇಸ್ರೇಲ್ ವಿರೋಧಿಗಳನ್ನು ಹತ್ತಿಕ್ಕುವ ಸಾಮರ್ಥ್ಯ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಡೀ ದಿನ ಸೈರನ್ ಇರಲಿಲ್ಲ: ಗಾಜಾಪಟ್ಟಿಯಿಂದ ಸುಮಾರು 70 ಕಿ.ಮೀ, ದೂರದ ಮಧ್ಯ ಇಸ್ರೇಲ್‌ನ ಹಝೀಲಿಯಾ ಎಂಬಲ್ಲಿರುವ ಬೆಳ್ತಂಗಡಿ ಮೂಲದ ದಿನೇಶ್ ಕುಮಾರ್ ಪ್ರಕಾರ, ಕಳೆದ ಮೂರು ದಿನಗಳಿಂದ ಕಂಡುಬಂದ ಆತಂಕದ ವಾತಾವರಣ ಮಂಗಳವಾರ ವೇಳೆಗೆ ತಿಳಿಯಾಗಿದೆ. ಇಡೀ ದಿನ ಸೈರನ್ ಮೊಳಗಿಲ್ಲ. ಅಂದರೆ ಉಗ್ರರ ಅಟ್ಟಹಾಸ ಕಡಿಮೆಯಾಗಿದೆ, ಇಲ್ಲವೇ ಇಸ್ರೇಲ್ ಅವರನ್ನು ದಮನಿಸಿದೆ ಎಂದು ಅರ್ಥ ಎನ್ನುತ್ತಾರೆ. ನಮ್ಮಲ್ಲಿ ವಾಹನ ಸಂಚಾರ ಯಥಾಪ್ರಕಾರ ಇದ್ದು, ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ಸಾರಲಾಗಿದೆ. ಶೇ.20ರಷ್ಟು ಪರಿಸ್ಥಿತಿ ಸಹಜ ಸ್ಥಿತಿಯಲ್ಲಿದೆ ಎನ್ನಬಹುದು ಎನ್ನುತ್ತಾರೆ. ಮಾಜಿ ಸೈನಿಕರು ಸೇವೆಗೆ ವಾಪಸ್: ಇಸ್ರೇಲ್ ಸೈನ್ಯದ ಮಾಜಿ ಸೈನಿಕರು ಸರ್ಕಾರದ ಸೂಚನೆ ಮೇರೆಗೆ ಸೈನ್ಯಕ್ಕೆ ವಾಪಾಸಾಗುತ್ತಿದ್ದಾರೆ. ನಿವೃತ್ತ ಪ್ರಮುಖ ಅಧಿಕಾರಿಗಳನ್ನು ಸೇನೆ ಕರ್ತವ್ಯಕ್ಕೆ ಮರಳಿ ಕರೆಸಿಕೊಂಡಿದೆ. ಹಾಗಾಗಿ ಮುಂದಿನ ಹೋರಾಟ ಏನು, ಹೇಗೆ ಎಂಬುದು ಗೊತ್ತಿಲ್ಲ. ಅಂತೂ ಎಲ್ಲ ಕಡೆಗಳಲ್ಲೂ ಅಲರ್ಟ್ ಆಗಿರುವಂತೆ ಸೂಚನೆ ಇದ್ದೇ ಇದೆ. ಗಾಜಾಪಟ್ಟಿಯ ದಕ್ಷಿಣ ಭಾಗದಲ್ಲಿ ನಾಗರಿಕರನ್ನು ತೆರವು ಮಾಡುವಂತೆ ಸೂಚಿಸಲಾಗಿದೆ. ಅದು ಬಯಲು ಪ್ರದೇಶದಂತಿದ್ದು, ರಾಕೆಟ್‌ಗಳು ನೇರವಾಗಿ ಕೆಳಭಾಗದಿಂದ ಅಪ್ಪಳಿಸುವ ಕಾರಣ ಜೀವಹಾನಿ ತಡೆಗಟ್ಟಲು ಸರ್ಕಾರ ಈ ಸೂಚನೆ ನೀಡಿರಬಹುದು ಎನ್ನುತ್ತಾರೆ ಮಧ್ಯಇಸ್ರೇಲ್‌ನ ತೆಲ್‌ವೀವ್‌ನಲ್ಲಿರುವ ಮಂಗಳೂರಿನ ರಾಜೇಶ್ ಶೆಟ್ಟಿ. ಇಸ್ರೇಲ್‌ನಲ್ಲಿ ರಾಜಕೀಯ ತಾಕಲಾಟಗಳು ಭಾರತಕ್ಕಿಂತಲೂ ಜಾಸ್ತಿ ಇದೆ. ಆದರೆ ದೇಶದ ವಿಚಾರ ಬಂದಾಗ ಅಲ್ಲ ಭಿನ್ನಾಭಿಪ್ರಾಯ ಮರೆತು ಒಂದಾಗುತ್ತಾರೆ. ಇಸ್ರೇಲಿಗರು ಬೇರೆಯವರ ತಂಟೆಗೆ ಹೋಗುವುದಿಲ್ಲ, ವಿನಾ ಕಾರಣ ತಂಟೆಗೆ ಬಂದರೆ ಸುಮ್ಮನೆ ಬಿಡುವುದೂ ಇಲ್ಲ. । ದೇವದಾಸ್ ಶೆಟ್ಟಿ, ಇಸ್ರೇಲ್‌ನಲ್ಲಿರುವ ಮಂಗಳೂರಿಗ.