ಕನ್ನಡಪ್ರಭ ವಾರ್ತೆ ತುಮಕೂರು
ಚಲನ ಪ್ರಕಾಶನ ಸಹಕಾರಿ ಮತ್ತು ಕೆ.ಬಿ. ಗೆಳೆಯರ ಬಳಗದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕೆ.ಬಿ. ಸಿದ್ದಯ್ಯ ಅವರ ಹಸ್ತಪ್ರತಿ ಮತ್ತು ಮುದ್ರಣದ ತೊಗಲ ಮಂಟಪ ಖಂಡಕಾವ್ಯವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೆ.ಬಿ. ಸಿದ್ದಯ್ಯನವರ ಕಾವ್ಯದ ಮಾರ್ಗ ಪ್ರಾರಂಭದಿಂದಲೇ ಭಿನ್ನಮಾರ್ಗವನ್ನು ಹಿಡಿದಿದ್ದನ್ನು ನಾವೆಲ್ಲ ಗುರುತಿಸಬಹುದು. ಇವರ ಕಾವ್ಯದ ಬಗ್ಗೆ ವಿಮರ್ಶಕರು ನಿರ್ಲಕ್ಷ್ಯ, ಅಸಡ್ಡೆ ತೋರಿದರು ಎಂದು ವಿಷಾದಿಸಿದರು.ವಿಮರ್ಶಕ ಡಾ. ರವಿಕುಮಾರ್ ನೀಹ ಅವರು ಕೆ.ಬಿ. ಸಿದ್ದಯ್ಯನವರ ಕಾವ್ಯಕ್ಕೆ ಸರಿಯಾದ ವಿಮರ್ಶೆಯನ್ನು ಬರೆದು ನ್ಯಾಯವನ್ನು, ಪ್ರೀತಿಯನ್ನು, ಗೌರವವನ್ನು ಒದಗಿಸಿದ್ದಾರೆ. ಸಿದ್ದಯ್ಯನವರ ಕಾವ್ಯದ ಬಗ್ಗೆ ಹೆಚ್ಚು ಆಸಕ್ತಿಯಿಂದ ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕ ಕನ್ನಡ ಸಾಹಿತ್ಯದಲ್ಲಿ ದಲಿತ ಕಾವ್ಯದ ವಿಸ್ತಾರ, ಒಳ-ಹೊರಗನ್ನು ಕುರಿತು ಬರೆದಿದ್ದು, ಅದೊಂದು ಮೈಲಿಗಲ್ಲು ಎಂದರು.
ಬಸವಲಿಂಗಪ್ಪ ಸಾಹಿತಿಯಾಗಿಲ್ಲದ ಕಾರಣದಿಂದ ಸಾಹಿತ್ಯ ಕ್ಷೇತ್ರದಲ್ಲಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡಿದೆ. ಅವರು ಮಾಡಿದ ಕೆಲವು ಹೇಳಿಕೆಗಳು ಮತ್ತು ಮಹತ್ತರ ಘೋಷಣೆಗೆಳು ಅವು ಸಾಹಿತ್ಯದ ದಿಕ್ಕನ್ನು ಬದಲಾಗುವಂತೆ ಮಾಡಿದವು. ಹಾಗಾಗಿ ಇನ್ನು ಮುಂದಾದರೂ ಸಾಹಿತ್ಯದಲ್ಲಿ ಬಸವಲಿಂಗಪ್ಪ ಅವರ ಹೆಸರನ್ನು ದಾಖಲಿಸಬೇಕಾಗಿದೆ. ಸಾಂಸ್ಕೃತಿಕ, ಸಾಹಿತ್ಯಕ ವ್ಯಕ್ತಿ ಎಂದೇ ಗುರುತಿಸಬೇಕು ಎಂದರು.
ಕರ್ನಾಟಕದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಮಾತನಾಡಿ, ಕೊಟ್ಟಶಂಕರ್ ಅವರು ಕೆ.ಬಿ. ಸಿದ್ದಯ್ಯ ಅವರ ಕಾವ್ಯವನ್ನು ಪ್ರಕಟಿಸುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ತೊಗಲು ಮಂಟಪ ಕೃತಿಯನ್ನು ಸಿದ್ದಯ್ಯನವರ ಕೈಬರೆಹದ ಜೊತೆಗೆ ಮುದ್ರಣವನ್ನು ಮಾಡಿಸಿರುವುದು ಮೆಚ್ಚಬೇಕಾದ ಸಂಗತಿ ಎಂದರು.
ಕೇಂದ್ರ ವಲಯದ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಕವಿ ಕೆ.ಬಿ. ಸಿದ್ದಯ್ಯ ಅವರಂಥ ಕೆಲವು ಸಾಹಿತಿಗಳು ಲೋಕವಿರೋಧಿಗಳು. ಸಾಮಾನ್ಯರು ಯೋಚಿಸಿದಂತೆ ಅವರು ಯೋಚಿಸುವುದಿಲ್ಲ. ದಲಿತ, ಹಿಂದುಳಿದವನಾದ ನಾನು ಮುಟ್ಟಿದ್ದರಿಂದಲೇ ಅಕ್ಷರ ಬಿಡುಗಡೆಗೊಂಡಿತು ಎಂದು ಕೆ.ಬಿ.ಸಿದ್ದಯ್ಯ ಹೇಳುತ್ತಾರೆ. ಹೀಗಾಗಿ ಅವರು ಭಿನ್ನವಾಗಿ ಆಲೋಚಿಸುವ ವ್ಯಕ್ತಿಯಾಗಿದ್ದರು ಎಂದು ಹೇಳಿದರು.