‘ಮದ್ವೆ ಭರವಸೆ ನೀಡಿ ಸೆ* ಕೇಸಲ್ಲಿ ಅರೆಸ್ಟ್‌ಗೆ ತಡೆ ಅಗತ್ಯ’

KannadaprabhaNewsNetwork |  
Published : Feb 27, 2026, 02:00 AM ISTUpdated : Feb 27, 2026, 11:29 AM IST
marriage

ಸಾರಾಂಶ

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಹೊಂದಿದ ಬಳಿಕ ವಂಚಿಸಿದ ಪ್ರಕರಣಗಳಲ್ಲಿ  ಬಂಧಿಸುವುದು ಕಡ್ಡಾಯವಲ್ಲವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವುದು ಏಕೆಂದು ಪ್ರಶ್ನಿಸಿರುವ ಹೈಕೋರ್ಟ್‌, ಇಂಥ ಬೆಳವಣಿಗೆ ತಡೆಗೆ ಅಗತ್ಯ ಕ್ರಮ ಜರುಗಿಸುವಂತೆ   ಸೂಚಿಸಿದೆ.

  ಬೆಂಗಳೂರು :  ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಹೊಂದಿದ ಬಳಿಕ ವಂಚಿಸಿದ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು ಕಡ್ಡಾಯವಲ್ಲವಾದರೂ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತಿರುವುದು ಏಕೆಂದು ಪ್ರಶ್ನಿಸಿರುವ ಹೈಕೋರ್ಟ್‌, ಇಂಥ ಬೆಳವಣಿಗೆ ತಡೆಗೆ ಅಗತ್ಯ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆ

ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂ*ಕ ಕ್ರಿಯೆ ನಡೆಸಿದ ನಂತರ ಮದುವೆಯಾಗದೆ ವಂಚಿಸಿದ ಆರೋಪ ಸಂಬಂಧ ಅತ್ಯಾ*ರ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆಯಡಿ ತನ್ನ ವಿರುದ್ಧ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಣಕಲ್‌ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದು ಕೋರಿ ಹೊಕ್ಕಳ್ಳಿ ಗ್ರಾಮದ ನಿವಾಸಿ ಎಚ್‌.ಜಿ.ಗಂಗ (29) ಎಂಬಾತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣ ಸಂಬಂಧ ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದ್ದಾರೆ. ಅಧೀನ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದೂರು ದಾಖಲಿಸುವಲ್ಲೂ ದೂರುದಾರೆ 1 ವರ್ಷ 3 ತಿಂಗಳು ವಿಳಂಬ ಮಾಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ಅದಕ್ಕೆ ನ್ಯಾಯಮೂರ್ತಿಗಳು ಯಾಕೆ ಬಂಧಿಸಲಾಗಿದೆ ಎಂದು ಕೇಳಿದಾಗ ಅರ್ಜಿದಾರರ ಪರ ವಕೀಲರು, ಅರ್ಜಿದಾರ ತಲೆಮರೆಸಿಕೊಂಡಿದ್ದರು. ಈಗ ಅವರನ್ನು ಬಂಧಿಸಲಾಗಿದೆ ಎಂದು ಉತ್ತರಿಸಿದರು.

ಬಂಧನ ಮಾಡಬಾರದು ಎಂದು ಕೋರ್ಟ್‌ ಹೇಳುತ್ತಲೇ ಇದೆ

ಆಗ ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಮದುವೆಯಾಗುವುದಾಗಿ ಭರವಸೆ ನೀಡಿ ಲೈಂ*ಕ ಕ್ರಿಯೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂಥ ಪ್ರಕರಣದಲ್ಲಿ ಆರೋಪಿಗಳನ್ನು ಪೊಲೀಸರು ಏಕೆ ಬಂಧಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಆರೋಪಿಯನ್ನು ಬಂಧಿಸುವುದು ಕಡ್ಡಾಯವೇನಿಲ್ಲ. 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಂಧಿಸಲಾಗುತ್ತಿದೆ. ಇಂಥ ಪ್ರಕರಣ ಎದುರಿಸುತ್ತಿರುವ ಎಲ್ಲ ಆರೋಪಿಗಳು ಜೈಲಿನೊಳಗಿದ್ದಾರೆ. ಬಂಧನ ಮಾಡಬಾರದು ಎಂದು ಕೋರ್ಟ್‌ ಹೇಳುತ್ತಲೇ ಇದೆ. ಪೊಲೀಸರು ಮಾತ್ರ ಬಂಧನ ಮಾಡುತ್ತಲೇ ಇದ್ದಾರೆ ಎಂದು ಖಾರವಾಗಿ ನುಡಿದರು.

ಅಲ್ಲದೆ, ಸಂತ್ರಸ್ತೆಯೊಂದಿಗೆ ಐದು, ಆರು ವರ್ಷ ಸಂಬಂಧ ಹೊಂದಿರುವ ಪ್ರಕರಣದಲ್ಲೂ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಪ್ರಕರಣದಲ್ಲಿ ಅರ್ಜಿದಾರ ಆರೋಪಿ, ದೂರುದಾರೆಯೊಂದಿಗೆ ಎರಡೂವರೆ ವರ್ಷ ಸಂಬಂಧ ಹೊಂದಿದ್ದರು. ಕಾನೂನು ದುರ್ಬಳಕೆಗೆ ಈ ಪ್ರಕರಣ ಮತ್ತೊಂದು ಸ್ಪಷ್ಟ ಉದಾಹರಣೆ. ಈ ಅಪರಾಧ ಸಂಬಂಧ ಜಾರಿಗೆ ಬಂದಿರುವ ಹೊಸ ನಿಯಮ ಬಿಎನ್‌ಎಸ್‌ ಸೆಕ್ಷನ್‌ 69 ಅನ್ನು ಸಹ ದುರುಪಯೋಗ ಮಾಡಲಾಗುತ್ತಿದೆ. ಇಂತಹ ಬೆಳವಣಿಗೆ ತಡೆಯಲು ಏನಾದರೂ ಮಾಡಬೇಕು ಎಂದು ಸರ್ಕಾರಿ ಅಭಿಯೋಜಕರಿಗೆ ನ್ಯಾಯಪೀಠ ಸೂಚಿಸಿತು.

ನಂತರ ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ, ದೂರುದಾರೆಯನ್ನು ಅರ್ಜಿದಾರರು ಮದುವೆ ಆಗುತ್ತಾರಾ? ಮದುವೆಯಾಗಿ ನಿಮ್ಮ ಭರವಸೆ ಉಳಿಸಿಕೊಳ್ಳಿ. ಆರೋಪಿ ಜೈಲಿಗೆ ಹೋಗಿದ್ದಾನಲ್ಲವೇ? ಜೈಲಿಗೆ ಹೋಗಿರುವುದರಿಂದ ಮದುವೆ ಆಗುವುದಿಲ್ಲ ಎನ್ನುತ್ತೀರಾ ಎಂದು ಪ್ರಶ್ನಿಸಿತು.

ಸರ್ಕಾರಿ ಅಭಿಯೋಜಕರು, ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಅರ್ಜಿದಾರರನ್ನು ಬಂಧಿಸಲಾಗಿದೆ. ಹಾಗಾಗಿ ಅರ್ಜಿ ಊರ್ಜಿತವಾಗುವುದಿಲ್ಲ. ಜಾಮೀನು ಕೋರಿ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿದಾರರ ಪರ ವಕೀಲರು, ಎಫ್‌ಐಆರ್‌ ರದ್ದು ಕೋರಿ ಈ ಅರ್ಜಿ ಸಲ್ಲಿಸಲಾಗಿದೆ. ಜಾಮೀನು ಅರ್ಜಿ ಸಲ್ಲಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಅರ್ಜಿದಾರರು ಕೂಡಲೇ ಬಿಡುಗಡೆಯಾಗಬೇಕಿದೆ ಎಂದರು.

ಅಂತಿಮವಾಗಿ ಅರ್ಜಿ ಹಿಂಪಡೆಯಲು ಅನುಮತಿ ನೀಡಿದ ನ್ಯಾಯಪೀಠ, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರ ಪರ ವಕೀಲರಿಗೆ ಸೂಚಿಸಿತು. ಅರ್ಜಿದಾರ ಆರೋಪಿ ಜೈಲಿನಿಂದ ಹೊರಬರಬೇಕು ಎಂದು ಮೌಖಿಕವಾಗಿ ಹೇಳಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಹಿಳಾ ಮೀಸಲಿಂದ ರಾಜಕೀಯ ಚಿತ್ರಣವೇ ಬದಲು : ಕುಮಾರಸ್ವಾಮಿ
ಬೀದಿಗಳಲ್ಲಿ ಇಲಿಗಳ ಕಾಟ : ಆರೋಗ್ಯ ಸಮಸ್ಯೆ ಭೀತಿ