ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ನಾಲ್ಕನೇ ಶನಿವಾರ, ಭಾನುವಾರ, ಸೋಮವಾರ ಕ್ರಿಸ್‌ಮಸ್ ಹೀಗೆ ಸಾಲುಸಾಲು ರಜೆಯಿರುವುದರಿಂದ ವೈದ್ಯರೆಲ್ಲರೂ ರಜೆಯಲ್ಲಿದ್ದಾರೆಂಬ ಕಾರಣ ನೀಡಿ, ಆಸ್ಪತ್ರಗೆ ಬಂದ ರೋಗಿಗಳನ್ನು ಮಂಗಳವಾರ ಬರುವಂತೆ ಹೇಳಿ ವಾಪಸ್ ಕಳುಹಿಸಿದ ವಿಲಕ್ಷಣಕಾರಿ ಘಟನೆ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.ಇಲ್ಲಿನ ಉಪಾಹಾರ ಹಾಗೂ ಪಾನೀಯ ಮಾರಾಟ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಉತ್ತರ ಭಾರತದ ಕಾರ್ಮಿಕರಾದ ಶಮೀಮ್ ಹಾಗೂ ರಹೀಂ ಎಂಬಿಬ್ಬರು ಜ್ವರದಿಂದ ಬಳಲುತ್ತಿದ್ದು, ಶುಕ್ರವಾರ ರಾತ್ರಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಔಷಧಿ ಪಡೆದಿದ್ದರು. ಜ್ವರ ಇಳಿಮುಖವಾಗದಿದ್ದರೆ, ಶನಿವಾರ ಬಂದು ರಕ್ತಪರೀಕ್ಷೆ ಮಾಡಿಸಬೇಕೆಂದು ಸೂಚಿಸಲಾಗಿತ್ತು. ಅದರಂತೆ ಶನಿವಾರವೂ ಜ್ವರ ಇದ್ದರಿಂದ ಕಾರ್ಮಿಕರನ್ನು ರಕ್ತ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅಲ್ಲಿನ ಸಿಬ್ಬಂದಿ, ಇಂದು ನಾಲ್ಕನೇ ಶನಿವಾರ, ನಾಳೆ ಭಾನುವಾರ, ನಾಡಿದ್ದು ಕ್ರಿಸ್ಮಸ್ ಇರುವುದರಿಂದ ವೈದ್ಯjfಲ್ಲ. ನೀವು ಮಂಗಳವಾರ ಬಂದು ರಕ್ತಪರೀಕ್ಷೆ ಮಾಡಿಸಿ ಎಂದು ತಿಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಬಗ್ಗೆ ಸಂತ್ರಸ್ತರು ಕ್ಷೇತ್ರದ ಶಾಸಕರಲ್ಲಿ ಹಾಗೂ ಮಾಧ್ಯಮ ಪ್ರತಿನಿಧಿಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪ್ರಕರಣದ ಬಗ್ಗೆ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯವರನ್ನು ಸಂಪರ್ಕಿಸಿದಾಗ , ಘಟನೆಯ ಬಗ್ಗೆ ವಿಚಾರಿಸಲಾಗಿದೆ. ಲ್ಯಾಬ್ ಟೆಕ್ನಿಷಿಯನ್ ಅನಾರೋಗ್ಯದ ಕಾರಣ ನೀಡಿ ರಜೆಯಲ್ಲಿದ್ದಾರೆ. ಆರೋಗ್ಯ ಇಲಾಖೆಗೆ ಎರಡನೇ ಶನಿವಾರ, ನಾಲ್ಕನೇ ಶನಿವಾರ ಎಂದು ರಜೆ ಇರುವುದಿಲ್ಲ. ಉಳಿದ ಹಬ್ಬ ಹರಿದಿನಗಳಲ್ಲಿಯೂ ಸರ್ಕಾರಿ ರಜೆ ಇದ್ದರೂ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ. ಉಪ್ಪಿನಂಗಡಿಯ ಆಸ್ಪತ್ರೆಯಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಕಲಿಕಾ ವೈದ್ಯಕೀಯ ವಿದ್ಯಾರ್ಥಿಗಳು ಕರ್ತವ್ಯದಲ್ಲಿದ್ದು, ಯಾಕೆ ಈ ಘಟನೆ ನಡೆದಿದೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಅವಾಂತರವಾಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.