ಕೋವಿಡ್ ಮುನ್ನೆಚ್ಚರಿಕೆ ಕಟ್ಟುನಿಟ್ಟಾಗಿರಲಿ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork |  
Published : Dec 24, 2023, 01:45 AM IST
23ಕೆಪಿಎಲ್22 ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಇಲಾಖೆಯ ಸಭೆಯ ಅಧ್ಯಕ್ಷತೆಯನ್ನು ಸಚಿವ ಶಿವರಾಜ ತಂಗಡಗಿ ಅವರು ವಹಿಸಿದ್ದರು. | Kannada Prabha

ಸಾರಾಂಶ

ಆಸ್ಪತ್ರೆಗಳಲ್ಲಿ ಔಷಧಿ ಸೇರಿದಂತೆ ಪಿಪಿಇ ಕಿಟ್, ಎನ್-95 ಮಾಸ್ಕ್‌ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಪತ್ರ ಬರೆದು ಅಗತ್ಯ ಪ್ರಮಾಣದಲ್ಲಿ ಔಷಧಿ, ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಎಲ್ಲ ಬಗೆಯ ವೈದ್ಯಕೀಯ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು.

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಇದುವರೆಗೂ ಪತ್ತೆಯಾಗಿಲ್ಲ ಎಂದು ನಿರ್ಲಕ್ಷ್ಯ ಸಲ್ಲದು. ಸೋಂಕು ನಾನಾ ಕಡೆ ಲಗ್ಗೆ ಇಡುತ್ತಿರುವುದರಿಂದ ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟಾನಿಟ್ಟಾಗಿ ಕೈಗೊಳ್ಳಿ ಎಂದು ಸಚಿವ ಶಿವರಾಜ ತಂಗಡಗಿ ತಾಕೀತು ಮಾಡಿದ್ದಾರೆ.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಕಾಲಕಾಲಕ್ಕೆ ಬರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸೂಚಿಸಿದರು.

ಕೋವಿಡ್-19ನೇ ತಳಿಯಾದ ಒಮಿಕ್ರಾನ್ ಸಬ್‌ವೇರಿಯಂಟ್ ಜೆಎನ್.1 ಎನ್ನುವ ವೈರಾಣು ಈಗಾಗಲೇ ಸಿಂಗಾಪುರ, ಇಂಡೋನೇಷ್ಯಾ, ಮಲೇಶಿಯ, ಚೀನಾ ದೇಶಗಳಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ದೇಶದ ಗೋವಾ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಪ್ರಕರಣ ವರದಿಯಾಗಿವೆ. ವೈರಾಣು ಸಮುದಾಯದಲ್ಲಿ ಹರಡುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸನ್ನದ್ಧವಾಗಬೇಕು ಎಂದು ನಿರ್ದೇಶನ ನೀಡಿದರು.

ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ ವಿಳಂಬ ಮಾಡದೇ ಪರೀಕ್ಷೆಗೊಳಪಡಿಸುವ ಕಾರ್ಯ ನಿಯಮಿತವಾಗಿ ನಡೆಸಬೇಕು ಎಂದರು.

ಆಸ್ಪತ್ರೆಗಳಲ್ಲಿ ಔಷಧಿ ಸೇರಿದಂತೆ ಪಿಪಿಇ ಕಿಟ್, ಎನ್-95 ಮಾಸ್ಕ್‌ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಪತ್ರ ಬರೆದು ಅಗತ್ಯ ಪ್ರಮಾಣದಲ್ಲಿ ಔಷಧಿ, ಪಿಪಿಇ ಕಿಟ್, ಮಾಸ್ಕ್, ಹ್ಯಾಂಡ್ ಗ್ಲೌಸ್ ಸೇರಿದಂತೆ ಎಲ್ಲ ಬಗೆಯ ವೈದ್ಯಕೀಯ ಪರಿಕರಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ತೊಂದರೆ ಸೋಂಕಿನ ಲಕ್ಷಣದವರು ಅಗತ್ಯ ವೈದ್ಯಕೀಯ ಸಲಹೆ ಪಡೆಯಬೇಕು ಎಂದರು.

ಜಿಲ್ಲೆಗೆ ಪ್ರತಿನಿತ್ಯ 70 ಪರೀಕ್ಷೆ ನಡೆಸುವ ಗುರಿ ನಿಗದಿಪಡಿಸಿದ್ದಾರೆ. 10 ದಿನಗಳಿಗೆ ಆಗುವಷ್ಟು ಪರಿಕರಗಳನ್ನು ನೀಡಿದ್ದಾರೆ. ಕಳೆದ 10 ದಿನಗಳಲ್ಲಿ 112 ಮಾದರಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಕ್ಕೆಂದು ತಾಲೂಕು ಆಸ್ಪತ್ರೆಗಳಲ್ಲಿ 360 ಹಾಸಿಗೆಗಳು ಸೇರಿ ಒಟ್ಟು 440 ಹಾಸಿಗೆಗಳು ಆಕ್ಸಿಜನ್ ಲಭ್ಯವಿದೆ. ಆಕ್ಸಿಜನ್ ನಿರ್ವಹಣೆಗೆ 4 ಪಿಎಸ್‌ಎ ಪ್ಲಾಂಟ್‌ಗಳು, 513 ಜಂಬೋ ಆಕ್ಸಿಜನ್ ಸಿಲಿಂಡರ್‌ಗಳು, 204 ಬಿಟೈಪ್ ಸಿಲಿಂಡರ್, 11 ಡುರಾ ಆಕ್ಸಿಜನ್ ಸಿಲಿಂಡರ್‌ ವ್ಯವಸ್ಥೆ ಇದೆ. ಜಿಲ್ಲಾಸ್ಪತ್ರೆ ತಾಲೂಕು ಆಸ್ಪತ್ರೆಗಳು ಸೇರಿ ವಿವಿಧ 139 ವೆಂಟಿಲೇಟರ್ ವ್ಯವಸ್ಥೆ ಇದೆ. ಜಿಲ್ಲೆಯಲ್ಲಿ ಔಷಧಿಗಳ ಕೊರೆತಯಾಗದಂತೆ ಕೋವಿಡ್ ನಿರ್ವಹಣೆಗೆ ಬೇಕಿರುವ ಔಷಧಿಗಳನ್ನು ಕಾಯ್ದಿರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜ ತಿಳಿಸಿದರು.

ಸಭೆಯಲ್ಲಿ ಎಸ್ಪಿ ಯಶೋದಾ ವಂಟಿಗೋಡಿ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ನಿರ್ದೇಶಕ ಡಾ.ಇಟಗಿ, ತಹಸೀಲ್ದಾರ ವಿಠ್ಠಲ್ ಚೌಗಲಾ ಇದ್ದರು.

ಜನಸಂಖ್ಯೆಗೆ ತಕ್ಕಂತೆ ಆಸ್ಪತ್ರೆ ಸೇರಿದಂತೆ ಅಗತ್ಯ ವೈದ್ಯಕೀಯ ಸೌಕರ್ಯಗಳು ಇರಬೇಕು. ಈ ನಿಟ್ಟಿನಲ್ಲಿ ಕನಕಗಿರಿ, ಕಾರಟಗಿ, ಕುಕನೂರ ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳು ಕಾರ್ಯಾರಂಭ ಮಾಡಲು ಅಗತ್ಯ ಕ್ರಮ ವಹಿಸಬೇಕು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

15 ದಿನಗಳೊಳಗೆ ಜಿಲ್ಲಾಸ್ಪತ್ರೆಯ ಪ್ರತಿಯೊಂದು ಕಡೆಗೆ ಶುಚಿತ್ವ ಕಾಣಬೇಕು. ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಆರೋಗ್ಯಕರ ವಾತಾವರಣ ಇರಬೇಕು. ಒಡೆದ ಕಿಟಗಿ, ಬಾಗಿಲು, ಲೈಟ್ ಸರಿಪಡಿಸಬೇಕು ಎಂದು ಸಚಿವರು ಬೋಧಕ ಆಸ್ಪತ್ರೆಯ ನಿರ್ದೇಶಕರಿಗೆ ಗಡುವು ನೀಡಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ