ಕನ್ನಡಪ್ರಭ ವಾರ್ತೆ ವಿಜಯಪುರ
ಪಿಂಚಣಿದಾರರ ಸಮಸ್ಯೆಯನ್ನು ಸರ್ಕಾರ ಶೀಘ್ರದಲ್ಲಿಯೇ ಬಗೆ ಹರಿಸಬೇಕು. ಕೇಂದ್ರ ಸಚಿವರು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಲಾಗಿತ್ತು. ಆದರೆ, ಈ ಭರವಸೆ ಭರವಸೆಯಾಗಿಯೇ ಉಳಿದಿದೆ ಹೊರತು ಸ್ಪಂದನೆ ದೊರಕಿಲ್ಲ ಎಂದು ಎನ್‌ಎಸಿ ರಾಜ್ಯ ಘಟಕದ ಉಪಾಧ್ಯಕ್ಷ ವೀರಕುಮಾರ ಗಡಾದ ಹೇಳಿದರು.
ಅವರು ಪಿಂಚಣಿದಾರರ ಸಮಸ್ಯೆ, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶನಿವಾರ ನಗರದ ಭವಿಷ್ಯನಿಧಿ ಕಚೇರಿ ಮುಂದೆ ಸಹಕಾರ ವಲಯದ ನಿವೃತ್ತ ನೌಕರರ ಸಂಘದ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ, ಖಾದಿ ಗ್ರಾಮೋದ್ಯೋಗ, ಬಿ.ಎಲ್.ಡಿ.ಇ.ಸಂಘ, ಡಿ.ಸಿ.ಸಿ.ಬ್ಯಾಂಕ್, ಪಿಎಲ್.ಡಿ.ಇ ಬ್ಯಾಂಕ್, ಸಕ್ಕರೆ ಕಾರ್ಖಾನೆ, ಆಯಿಲ್ ಮಿಲ್ ಮುಂತಾದ ನಿವೃತ್ತ ನೌಕರರು ಧರಣಿ ವೇಳೆ ಮಾತಾಡಿದರು.
ಕಾರ್ಮಿಕ ಮುಖಂಡ ಐ.ಎ.ಮುಶ್ರೀಫ ಮಾತಾನಾಡಿ, ಇ.ಪಿ.ಎಸ್-೯೫ ಪಿಂಚಣಿದಾರರ ಬದುಕು ಹದಗೆಟ್ಟಿದೆ. ₹೨ ಸಾವಿರ ಪಿಂಚಣಿಯಲ್ಲಿ ಜೀವನ ತಿಂಗಳು ಪೂರ್ತಿ ಹೇಗೆ ಸಾಗುತ್ತದೆ. ಈ ಇಳಿ ವಯಸ್ಸಿನಲ್ಲಿ ಆರೋಗ್ಯ ಹದಗೆಟ್ಟರೆ ಚಿಕಿತ್ಸೆ ಪಡೆಯಲು ಸಹ ದುಡ್ಡಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಇಪಿಎಸ್-೯೫ ಯೋಜನೆ ಜಾರಿಗೆ ತಂದು ದೇಶದ ಕೋಟ್ಯಂತರ ಬಡ ವೃದ್ಧ ಪಿಂಚಣಿದಾರರಿಗೆ ಕೇಂದ್ರ ಸರ್ಕಾರ ಮೋಸ ಮಾಡಿದೆ. ಸುಪ್ರೀಂ ಕೋರ್ಟ ತೀರ್ಪು ನೀಡಿದ್ದರೂ ಅದನ್ನು ಜಾರಿಗೆ ತರದೇ ನೆಪ ಒಡ್ಡುತ್ತಾ ವಿಳಂಬ ಮಾಡುತ್ತಿರುವುದು ವೃದ್ಧ ಪಿಂಚಣಿದಾರರ ಮೇಲೆ ಘೋರ ಅನ್ಯಾಯ ಎಸಗುತ್ತಿದೆ ಎಂದು ದೂರಿದರು.
ಕೂಡಲೇ ಸುಪ್ರೀಂ ಕೋರ್ಟ ತೀರ್ಪು ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಕನಿಷ್ಠ ಪಿಂಚಣಿ ₹೭೫ ಸಾವಿರು ಹಾಗೂ ಡಿ.ಎ, ಮೆಡಿಕಲ್ ಕೂಡಲೇ ಈಡೇರಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಮಯದಲ್ಲಿ ದೇಶದ ೭೦ ಲಕ್ಷ ಪಿಂಚಣಿದಾರರು ಹಾಗೂ ಅವರ ಕುಟುಂಬದವರಿಂದ ಉಗ್ರ ವಿರೋಧ ಎದುರಿಸಬೇಕಾದೀತು ಎಂದು ಎಚ್ಚರಿಸಿದರು. ಮುಖಂಡ ಎಸ್.ಕೆ.ಜಹಾಗೀರದಾರ, ಶಾಂತಿನಾಥ ಪಾಟೀಲ, ಪಿ.ಎಸ್.ವಸ್ತ್ರದ, ಆರ್.ಎ.ಫಣಿಬಂದ, ಎಸ್.ಎಸ್.ಜಹಾಗೀರದಾರ, ರಾಜನಾಳ ಮುಂತಾದವರು ಇದ್ದರು.