ಧಾರವಾಡ: ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ ಧಾರವಾಡ ಜಿಲ್ಲೆಯ ರೈತರಿಗೆ ರಸಗೊಬ್ಬರದ ಪೂರೈಕೆ.
ಗುರುವಾರ ನಸುಕಿನಿಂದಲೇ ಇಲ್ಲಿಯ ಹಳೇ ಎಪಿಎಂಸಿಯಲ್ಲಿರುವ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಹಾಗೂ ಕಮಲಾಪೂರ ಸಹಕಾರಿ ಸಂಘದಲ್ಲಿ ರೈತರು ಗೊಬ್ಬರಕ್ಕಾಗಿ ಸರದಿ ಹಚ್ಚಿದ್ದು, ಒಟ್ಟು 500 ಟನ್ ಪೈಕಿ ಒಂದೊಂದು ಸಂಘಕ್ಕೆ 10 ಅಥವಾ 20 ಟನ್‌ನಂತೆ ಹಂಚಿಕೆ ಮಾಡಲಾಗಿದೆ. ಆದರೆ, ನೂರಾರು ರೈತರು ಯೂರಿಯಾ ಗೊಬ್ಬರಕ್ಕೆ ಸರದಿ ಹಚ್ಚಿದ್ದು ಕೆಲ ಹೊತ್ತಿನಲ್ಲಿಯೇ ಯೂರಿಯಾ ಖಾಲಿಯಾಗಿದೆ. ರೈತರು ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದ ಘಟನೆ ಗುರುವಾರ ನಡೆಯಿತು. ಜತೆಗೆ ಕೃಷಿ ಇಲಾಖೆಯನ್ನು ಶಪಿಸಿದ್ದು ಆಯ್ತು.
ಜಿಲ್ಲೆಯ ವಿವಿಧ ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ 1269 ಟನ್ ಇದ್ದು, ಬುಧವಾರ ರಾತ್ರಿ ಮತ್ತೇ 500 ಟನ್ ಬಂದಿದೆ. ಆದರೆ, ರೈತರು ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸುತ್ತಿರುವುದರಿಂದ ಗೊಬ್ಬರದ ಕೊರತೆ ಎದ್ದು ಕಾಣುತ್ತಿದೆ. ಜಿಲ್ಲೆಗೆ ಜುಲೈ ತಿಂಗಳಿಗೆ ಬೇಕಾದಷ್ಟು ಯೂರಿಯಾ ಪೂರೈಕೆಯಾದರೂ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಇಟ್ಟಿದ್ದು ಕೆಲವೇ ದಿನಗಳಲ್ಲಿ ಮತ್ತೇ ಯೂರಿಯಾ ಬರಲಿದೆ. ರೈತರು ಆತಂಕಕ್ಕೆ ಈಡಾಗುವುದು ಬೇಡ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಹೇಳಿದರು.