ಸೋಮವಾರ ಕೂಡ ಅವರ ಬೆಂಬಲಿಗರ ಸಭೆಯನ್ನು ನಡೆಸಿರುವ ಡಾ.ವಿಶ್ವನಾಥ ಪಾಟೀಲ ಅವರು ಬೆಂಬಲಿಗರ ಅಭಿಪ್ರಾಯವನ್ನು ಕೂಡ ಕೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಬೈಲಹೊಂಗಲ ಮತಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಕಳೆದ ವಿಧಾನಸಭೆ ಚುನಾವಣೆ ಟಿಕೆಟ್ ಸಿಗದ್ದಕ್ಕೆ ಬೇಸರಗೊಂಡು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಡಾ.ವಿಶ್ವನಾಥ ಪಾಟೀಲ ಅವರು ಈಗ ಮತ್ತೆ ಬಿಜೆಪಿಯತ್ತ ಮುಖ ಮಾಡಿದರೆ ಎಂಬ ಅನುಮಾನ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಬಿಜೆಪಿಯ ಕೆಲವು ವರಿಷ್ಠರು ಅವರನ್ನು ಸಂಪರ್ಕ ಮಾಡಿದ್ದಾರೆ ಎಂದು ಮೂಲಗಳು ಕೂಡ ಖಚಿತಪಡಿಸಿವೆ. ಮಾತ್ರವಲ್ಲ, ಸೋಮವಾರ ಕೂಡ ಅವರ ಬೆಂಬಲಿಗರ ಸಭೆಯನ್ನು ನಡೆಸಿರುವ ಡಾ.ವಿಶ್ವನಾಥ ಪಾಟೀಲ ಅವರು ಬೆಂಬಲಿಗರ ಅಭಿಪ್ರಾಯವನ್ನು ಕೂಡ ಕೇಳಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಿಂದ ಆಹ್ವಾನ ಬಂದಿದೆ ಎಂದು ಅವರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಹೀಗಾಗಿ ಶಾಸಕ, ಕೆಎಲ್‌ಇ ನಿರ್ದೇಶಕ ಡಾ.ವಿಶ್ವನಾಥ ಪಾಟೀಲ ಸೋಮವಾರ ಸಂಜೆ ತಮ್ಮ ಸ್ವಗ್ರಾಮ ಲಿಂಗದಳ್ಳಿಯಲ್ಲಿ ಬೆಂಬಲಿಗರು ಮತ್ತು ಅಭಿಮಾನಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿದರು.ಬೆಂಬಲಿಗರ ಪರವಾಗಿ ಎಪಿಎಂಸಿ ಮಾಜಿ ಅಧ್ಯಕ್ಷ, ಉದ್ದಿಮೆದಾರ ಸಿ.ಆರ್.ಪಾಟೀಲ, ಮುಖಂಡರಾದ ನಿಂಗಪ್ಪ ಚೌಡಣ್ಣವರ, ಇಂಚಲ ಮಾಜಿ ಚೇರಮನ್‌ರಾದ ಮಲ್ಲನಾಯ್ಕ ರಾಯನಾಯ್ಕರ, ಐ.ಎಲ್.ಪಾಟೀಲ ಮತ್ತಿತರರು ಮಾತನಾಡಿ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬೆಂಬಲಿಗರ ಪಡೆಯೇ ನಿಮ್ಮ ಹಿಂದೆ ಇದೆ. ಕಳೆದ 25 ವರ್ಷಗಳಿಂದ ಕ್ಷೇತ್ರದ ಜನತೆಗಾಗಿ ಶ್ರಮಿಸುತ್ತಿದ್ದಿರಿ. ಪ್ರೀತಿ ವಿಶ್ವಾಸಗಳನ್ನು ಬೆಳೆಸಿಕೊಂಡು ಬಂದಿದ್ದು ಸಂತಸ ತಂದಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ನೋಡಿಕೊಂಡು ಅದರಂತೆ ತಾವು ನಡೆದುಕೊಳ್ಳಿ. ನೀವು ಯಾವುದೇ ತೀರ್ಮಾನ ಕೈಗೊಂಡರೂ ಎಲ್ಲ ಕಾರ್ಯಕರ್ತರು ಬದ್ಧರಿರುವುದಾಗಿ ತಿಳಿಸಿದರು.
ಈ ವೇಳೆ ಬೆಂಬಲಿಗರನ್ನುದ್ದೇಶಿಸಿ ಡಾ.ವಿ.ಐ.ಪಾಟೀಲ ಮಾತನಾಡಿ, ರಾಜಕೀಯ ನಿಂತ ನೀರಲ್ಲ. ಇಲ್ಲಿ ಪ್ರತಿ ದಿನವೂ ಏನಾದರೊಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಸೋಲು ಗೆಲುವು ನಮ್ಮ ವ್ಯಕ್ತಿತ್ವಕ್ಕೆ ಮಾನದಂಡವಾಗುವುದಿಲ್ಲ. ನಾವು ಮಾಡಿರುವ ಉತ್ತಮ ಕೆಲಸಕಾರ್ಯಗಳು ಜನರ ಮನಸಿನಲ್ಲಿ ಉಳಿಯಬೇಕು. ಹೀಗಾಗಿ ಸೂಕ್ತ ವೇಳೆಯಲ್ಲಿ ಎಲ್ಲ ಹಿರಿಯರ ಹಿತೈಷಿಗಳ ಅಭಿಪ್ರಾಯ ಪಡೆದು ಒಳ್ಳೆಯ ತೀರ್ಮಾನಕ್ಕೆ ಬರೋಣ ಎಂದರು.
ಕಳೆದ ಏಳೆಂಟು ತಿಂಗಳಿಂದ ತಟಸ್ಥವಾಗಿ ಉಳಿಯಬೇಕಾಗಿ ಬಂತು. ಈಗ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು, ಮುಖಂಡರು ಸಂಪರ್ಕ ಮಾಡಿ ಪಕ್ಷ ಸೇರುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಹಿತೈಷಿಗಳು ಹಾಗೂ ಬೆಂಬಲಿಗರೆಲ್ಲರ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಬೈಲಹೊಂಗಲ ಮತಕ್ಷೇತ್ರದ ವಿವಿಧ ಗ್ರಾಮಗಳ ಸಾವಿರಕ್ಕೂ ಹೆಚ್ಚು ಬೆಂಬಲಿಗರು ಕಾರ್ಯಕರ್ತರು ಅಭಿಮಾನಿಗಳು ಸಭೆಗೆ ಆಗಮಿಸಿದ್ದರು.
---------
ಕೋಟ್...
ಬೆಂಬಲಿಗರು ಮತ್ತು ಅಭಿಮಾನಿಗಳ ಸಲಹೆಯಂತೆ ನಡೆಯುವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷದಿಂದ ಆಹ್ವಾನ ಇದೆ. ಸಲಹೆ ನೀಡಿದ ತಮಗೆಲ್ಲರಿಗೂ ಕೃತಜ್ಞತೆಗಳು.
- ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರು, ಕೆಎಲ್‌ಇ ನಿರ್ದೇಶಕರು, ಬೈಲಹೊಂಗಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.