- ಧರ್ಮಸ್ಥಳದ ಗ್ರಾ.ಯೋಜನೆಯಿಂದ ರೇಣುಕ ಗಾರ್ಮೆಂಟ್ಸನಲ್ಲಿ 90 ದಿನಗಳ ಹೊಲಿಗೆ ತರಬೇತಿ ಸಮಾರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಹಿಳೆಯರು ಸ್ವ ಉದ್ಯೋಗ ಮಾಡಿದರೆ ಕುಟುಂಬದ ಆರ್ಥಿಕ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಧ.ಗ್ರಾ. ಯೋಜನೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯೆ ಭಾಗ್ಯ ನಂಜುಂಡಸ್ವಾಮಿ ತಿಳಿಸಿದರು.
ಬುಧವಾರ ಪಟ್ಟಣದ ರೇಣುಕಾ ಗಾರ್ಮೆಂಟ್ಸ್ ನಲ್ಲಿ ಧ.ಗ್ರಾ.ಯೋಜನೆಯಿಂದ ಮಹಿಳೆಯರಿಗೆ ಏರ್ಪಡಿಸಿದ್ದ ಹೊಲಿಗೆ ತರಬೇತಿ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಂದು ಸಮಾಜದಲ್ಲಿ ಮಹಿಳೆಯರಿಗೆ ಸ್ವಾವಲಂಭನೆ ಬದುಕು ಅವಶ್ಯಕವಾಗಿದೆ. ಮಹಿಳೆಯರು ಪುರುಷರ ಮೇಲೆ ಅವಲಂಭಿತರಾಗದೆ ಸ್ವಂತ ದುಡಿಮೆ ಮಾಡಿ ಕೊಳ್ಳಬೇಕು. ಇಂದು ಮಾರುಕಟ್ಟೆಯಲ್ಲಿ ಟೈಲರಿಂಗ್ ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಇದೆ. ಮಹಿಳೆಯರು ತಾವು ಪಡೆದ ಹೊಲಿಗೆ ತರಬೇತಿಯನ್ನು ತಾಳ್ಮೆ, ನಿಪುಣತೆ ಹಾಗೂ ಶ್ರದ್ಧೆಯಿಂದ ಹೊಲಿಗೆ ಕಾರ್ಯ ಮುಂದುವರಿಸಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದರು.ರೇಣುಕಾ ಗಾರ್ಮೆಂಟ್ಸ್ ಮಾಲೀಕ ದೇವರಾಜ್ ಮಾತನಾಡಿ, ಹೊಲಿಗೆ ತರಬೇತಿ ಪಡೆದುಕೊಂಡವರು ಸ್ವ ಉದ್ಯೋಗ ಆರಂಭಿಸಿ ಜೀವನಕ್ಕೆ ಆಧಾರವಾಗಿಸಿಕೊಳ್ಳಬಹುದು. ಇತರರಿಗೆ ಮಾದರಿಯಾಗುವಂತೆ ಜೀವನ ಮಾಡಬೇಕು. ಧ.ಗ್ರಾ.ಯೋಜನೆಯಿಂದ ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಹಿಂದಿರುಗಿಸಬೇಕು ಎಂದರು.
ಧ.ಗ್ರಾ.ಯೋಜನೆ ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾ ಮಾತನಾಡಿ,ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನ ಆಶಯದಂತೆ ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಸಹಾಯವಾಗುವಂತೆ ಮಹಿಳೆಯರಿಗೆ ಉಚಿತವಾಗಿ 90 ದಿನಗಳ ಹೊಲಿಗೆ ತರಬೇತಿ ನೀಡಲಾಗಿತ್ತು.ತರಬೇತಿ ಪಡೆದವರಿಗೆ ಇಂದು ಸರ್ಟಿಫಿಕೇಟ್ ನೀಡಲಾಗುತ್ತಿದೆ ಎಂದರು.ತರಬೇತಿ ಪಡೆದ 30 ಮಹಿಳೆಯರಿಗೆ ಸರ್ಟಿಫಿಕೇಟ್ ನೀಡಲಾಯಿತು. ಸಭೆಯಲ್ಲಿ ಧ.ಗ್ರಾ.ಯೋಜನೆ ನ.ರಾ.ಪುರ ಒಕ್ಕೂಟದ ಅಧ್ಯಕ್ಷೆ ಪ್ರಭಾವತಿ,ನಾಗಲಾಪುರ ಗ್ರಾಪಂ ಮಾಜಿ ಅಧ್ಯಕ್ಷೆ ಶೋಭಾ, ಧ.ಗ್ರಾ.ಯೋಜನೆ ನ.ರಾ.ಪುರ ವಲಯ ಮೇಲ್ವಿಚಾರಕ ಸಿದ್ದಲಿಂಗಪ್ಪ, ಸೇವಾ ಪ್ರತಿನಿಧಿಗಳಾದ ಭಾನುಮತಿ, ವಿಮಲ,ಸುನೀತ, ವೀಣಾ,ಶಶಿಕಲಾ ಇದ್ದರು.