ಕನ್ನಡಪ್ರಭ ವಾರ್ತೆ ಹಾಸನ
ನಗರದ ಹನುಮಂತಪುರ ಸಮೀಪ ಇರುವ ನ್ಯೂ ಮಿನರ್ವಾ ಮಿಲ್ ಮತ್ತು ರಾಷ್ಟ್ರೀಯ ಜವಳಿ ನಿಗಮ ಮುಚ್ಚಿರುವುದರಿಂದ ಕಾರ್ಮಿಕರ ಜೀವನ ಸ್ಥಿತಿ ಮತ್ತು ಕುಟುಂಬಗಳು ಅರ್ಥಿಕ ಸ್ಥಿತಿ ಸಮಸ್ಯೆ ಎದುರಿಸುತ್ತಿದ್ದು, ಕೂಡಲೇ ಘಟಕವನ್ನು ಪುನರ್ ಆರಂಭಿಸಲು ಕ್ರಮ ಕೈಗೊಳ್ಳಬೇಕೆಂದು ನ್ಯೂ ಮಿನರ್ವ ಮಿಲ್ ವರ್ಕರ್ಸ್ ಯೂನಿಯನ್‌ನಿಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಲು ತೋಡಿಕೊಂಡರು.ತಾಲೂಕಿನ ನ್ಯೂ ಮಿನರ್ವಾ ಮಿಲ್ ಮತ್ತು ರಾಷ್ಟ್ರೀಯ ಜವಳಿ ನಿಗಮ (ಎನ್‌ಟಿಸಿ) ಘಟಕವು ೨೬-೦೩-೨೦೨೦ರಿಂದ ಮುಚ್ಚಲ್ಪಟ್ಟಿದ್ದು, ಕಾರ್ಮಿಕರ ಬದುಕು ಅಸ್ತವ್ಯಸ್ತವಾಗಿದೆ. ರಾಷ್ಟ್ರೀಯ ಜವಳಿ ನಿಗಮವು ಭಾರತದಲ್ಲಿ ೨೩ ಘಟಕಗಳನ್ನು ಹೊಂದಿದ್ದು, ಸುಮಾರು ೧೮,೦೦೦ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿತ್ತು. ಹಾಸನದ ನ್ಯೂ ಮಿನರ್ವಾ ಮಿಲ್ ಕೂಡ ಅವುಗಳಲ್ಲಿ ಒಂದಾಗಿದೆ. ಘಟಕ ಮುಚ್ಚಿದ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಕುಟುಂಬಗಳನ್ನು ನಿರ್ವಹಿಸಲು ಸಣ್ಣ ಕೆಲಸಗಳನ್ನು ಮಾಡುತ್ತಿದ್ದು, ಅನೇಕ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ೦೧-೦೯-೨೦೨೪ರಿಂದ ಯಾವುದೇ ವೇತನ ನೀಡಲಾಗಿಲ್ಲ, ಇದು ೧೯೩೬ರ ವೇತನ ಪಾವತಿ ಕಾಯ್ದೆಯ ಉಲ್ಲಂಘನೆಯಾಗಿದೆ. ಕಾರ್ಮಿಕರು ತಮ್ಮ ವೇತನದ ವಿವರಗಳನ್ನು ತಿಳಿಯಲು ಸಹ ಸಾಧ್ಯವಾಗುತ್ತಿಲ್ಲ. ೧೯೩೬ರ ಉದ್ಯೋಗ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಉದ್ಯೋಗದಾತರು ಮಾಸಿಕ ಸಂಬಳ ಚೀಟಿಗಳನ್ನು ನೀಡಬೇಕಾದರೂ, ಹಾಸನದ ಮಿಲ್ ಆಡಳಿತವು ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂದು ದೂರಿದರು.ಹಾಸನದ ನ್ಯೂ ಮಿನರ್ವಾ ಮಿಲ್‌ನಲ್ಲಿ ಸುಮಾರು ೧೪೦ ಬದ್ಲಿ ಉದ್ಯೋಗಿಗಳು ಇದ್ದರು, ಅವರಲ್ಲಿ ಹೆಚ್ಚಿನವರು ೧೦ ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಘಟಕ ಮುಚ್ಚಲ್ಪಟ್ಟ ೫ ವರ್ಷಗಳಿಂದ ಅವರಿಗೆ ವೇತನ ಅಥವಾ ಆರ್ಥಿಕ ಪ್ಯಾಕೇಜ್ ನೀಡಲಾಗಿಲ್ಲ. ಸ್ಥಳೀಯರ ಅಹವಾಲಿನಲ್ಲಿ, ಘಟಕವನ್ನು ತಕ್ಷಣ ಪುನಃ ತೆರೆಯುವುದು, ಶಾಶ್ವತ ಉದ್ಯೋಗಿಗಳ ವೇತನವನ್ನು ಪಾವತಿಸುವುದು ಮತ್ತು ಕಾರ್ಮಿಕರಿಗೆ ನಿಯಮಿತ ಸಂಬಳ ಚೀಟಿಗಳನ್ನು ನೀಡುವಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಲಾಗುತ್ತಿದೆ ಎಂದರು. ಸ್ಥಳೀಯ ಕಾರ್ಮಿಕ ಸಂಘಗಳು ಮತ್ತು ಹಿತಾಸಕ್ತರು ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಘಟಕ ಪುನಃ ಆರಂಭವಾಗದೇ ಇದ್ದರೆ, ಕಾರ್ಮಿಕರ ಜೀವನ ಸ್ಥಿತಿ ಮತ್ತು ಕುಟುಂಬಗಳ ಅರ್ಥಿಕ ಸ್ಥಿತಿಗೆ ಗಂಭೀರ ಪರಿಣಾಮ ಬೀರಲಿದೆ ಎಂದು ತಮ್ಮ ಅಳಲು ತೋಡಿಕೊಂಡರು. ಇದೇ ವೇಳೆ ಹಾಸನ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಎಂ. ಮಧು, ಕಾರ್ಖಾನೆಯ ಕಾರ್ಮಿಕರಾದ ಖಜಾಂಚಿ ಶಿವಪ್ರಸಾದ್, ಲೋಕೇಶ್, ಮಂಜುನಾಥ್, ಸಂತೋಷ್ ಇತರರು ಉಪಸ್ಥಿತರಿದ್ದರು.