ಟ್ರಯಲ್ ಬ್ಲಾಸ್ಟ್ ಹೆಸರಲ್ಲಿ ೧.೧೧ ಕೋಟಿ ರು. ಖರ್ಚು..!

KannadaprabhaNewsNetwork |  
Published : May 25, 2026, 01:30 AM IST
೨೪ಕೆಎಂಎನ್‌ಡಿ-೩ಕೆಆರ್‌ಎಸ್ ಬಳಿ ಪರೀಕ್ಷಾರ್ಥ ಸ್ಫೋಟಕ್ಕೆ ಸಿದ್ಧತೆ ನಡೆಸಿದ್ದ ದೃಶ್ಯ. | Kannada Prabha

ಸಾರಾಂಶ

ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ನಡೆಯದೇ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ಹೆಸರಿನಲ್ಲಿ ೧.೧೧ ಕೋಟಿ ರು. ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ. ನಿಗಮದ ಅಧಿಕಾರಿಗಳು ಮಾಡಿರುವ ಖರ್ಚಿನ ಬಗ್ಗೆ ಅನುಮಾನಗಳು ಮೂಡಲಾರಂಭಿಸಿವೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷ್ಣರಾಜಸಾಗರ ಜಲಾಶಯದ ಬಳಿ ಪರೀಕ್ಷಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ನಡೆಯದೇ ಇದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಟ್ರಯಲ್ ಬ್ಲಾಸ್ಟ್ ಹೆಸರಿನಲ್ಲಿ ೧.೧೧ ಕೋಟಿ ರು. ಖರ್ಚು ಮಾಡಿರುವುದು ಆಡಿಟ್ ವರದಿಯಿಂದ ಬೆಳಕಿಗೆ ಬಂದಿದೆ. ನಿಗಮದ ಅಧಿಕಾರಿಗಳು ಮಾಡಿರುವ ಖರ್ಚಿನ ಬಗ್ಗೆ ಅನುಮಾನಗಳು ಮೂಡಲಾರಂಭಿಸಿವೆ.

ಮೊದಲ ಬಾರಿಗೆ ೨೦೧೯ರ ಜ.೨೫ರಂದು ನಡೆಸಲು ಉದ್ದೇಶಿಸಿದ್ದ ಪರೀಕ್ಷಾರ್ಥ ಸ್ಫೋಟಕ್ಕೆ ೪೪,೬೧,೫೩೬ ರು., ಎರಡನೇ ಬಾರಿ ೨೫ ಮೇ ೨೦೨೨ರಲ್ಲಿ ನಡೆಸಲು ನಿರ್ಧರಿಸಿದ್ದ ಟ್ರಯಲ್ ಬ್ಲಾಸ್ಟ್‌ಗೆ ೫೯,೪೮,೭೧೫ ರು. ಹಾಗೂ ೨೦೨೪ರ ಜು.೭ರಂದು ನಡೆಸಲುದ್ದೇಶಿಸಿದ್ದ ಸ್ಫೋಟಕ್ಕೆ ೭,೫೫,೯೩೨ ರು. ಸೇರಿ ಒಟ್ಟು ೧,೧೧,೬೬,೧೮೩ ರು.ಗಳನ್ನು ವೆಚ್ಚ ಮಾಡಿರುವುದಾಗಿ ತಿಳಿಸಿದೆ.

ತೆರಿಗೆ ಕಡಿತ ಮಾಡುವ ವೇಳೆ ಮೊದಲನೇ ಬಾರಿಗೆ ೩,೫೬,೯೨೨ ರು. ಕಡಿತ ಮಾಡುವುದಕ್ಕೆ ೮೯,೨೩೧ ರು., ಎರಡನೇ ಬಾರಿಗೆ ೪,೭೫,೮೯೫ ರು.ಗೆ ಬದಲಾಗಿ ೧,೧೮,೯೭೬ ರು. ಹಾಗೂ ಮೂರನೇ ಬಾರಿ ೬೦,೪೭೪ ರು. ಕಡಿತ ಮಾಡುವ ಬದಲು ೧೫,೧೧೯ ರು.ಗಳನ್ನು ಕಡಿತ ಮಾಡಿರುವುದನ್ನು ಲೆಕ್ಕ ಪರಿಶೋಧಕರು ಗುರುತಿಸಿದ್ದರು. ತೆರಿಗೆ ಹಣ ಕಡಿತ ಮಾಡುವ ವೇಳೆ ೮,೯೩,೨೯೧ ರು.ಗಳಿಗೆ ಬದಲಾಗಿ ೨,೨೩,೩೨೬ ರು. ಹಣವನ್ನು ಮಾತ್ರ ಕಡಿತಗೊಳಿಸಲಾಗಿದೆ. ಇನ್ನೂ ೬,೬೯,೯೬೫ ರು. ಬಾಕಿ ಹಣವನ್ನು ಸಂಬಂಧಿಸಿದ ಏಜೆನ್ಸಿಯವರಿಂದ ವಸೂಲಿ ಮಾಡುವಂತೆ ಸೂಚಿಸಿದ್ದರು. ಅದನ್ನು ಏಜೆನ್ಸಿಯವರಿಂದ ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಲೆಕ್ಕಪರಿಶೋಧಕರು ಆಕ್ಷೇಪವೆತ್ತಿದ್ದಾರೆ.

ಒಮ್ಮೆಯೂ ಪರೀಕ್ಷಾರ್ಥ ಸ್ಫೋಟವೇ ನಡೆಯದಿದ್ದರೂ ಇಷ್ಟೊಂದು ಹಣ ಖರ್ಚಾಗಿದ್ದು ಹೇಗೆ. ಯಾವ್ಯಾವುದಕ್ಕೆ ಈ ಹಣವನ್ನು ಖರ್ಚು ಮಾಡಲಾಗಿದೆ. ವಿಜ್ಞಾನಿಗಳ ತಂಡವನ್ನು ಕರೆಸುವುದಕ್ಕೆ ಮಾಡಲಾದ ಖರ್ಚೆಷ್ಟು ಎಂಬ ವಿವರಗಳನ್ನು ತೋರಿಸಿಲ್ಲ. ಇದರಿಂದ ಸರ್ಕಾರಕ್ಕೆ ಉಂಟಾಗಿರುವ ಒಟ್ಟು ನಷ್ಟದ ವಿವರ ತಿಳಿಯದಂತಾಗಿದೆ.

ಪರೀಕ್ಷಾರ್ಥ ಸ್ಫೋಟ ಯತ್ನ ನಡೆದಿದ್ದು ಯಾವಾಗ?

ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತೆಗೆ ಧಕ್ಕೆಯಾಗಲಿದೆ ಎಂಬ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನು ಆಧರಿಸಿ ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯ ೨೦ ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರ ಕಲ್ಲು ಗಣಿಗಾರಿಕೆ ನಿಷೇಧ ಮಾಡಲಾಗಿತ್ತು. ಅಣೆಕಟ್ಟು ಬಳಿ ಸಿಡಿಮದ್ದು ಸ್ಫೊಟದ ಪರಿಣಾಮವನ್ನು ಅಂದಾಜಿಸಲು ಪ್ರಾಯೋಗಿಕ ಸ್ಫೊಟ (ಟ್ರಯಲ್ ಬ್ಲಾಸ್ಟ್) ಕೈಗೊಳ್ಳಲು ಪುಣೆಯ ಸಿಡಬ್ಲ್ಯುಪಿಆರ್‌ಎಸ್ ವಿಜ್ಞಾನಿಗಳ ತಂಡಕ್ಕೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪತ್ರ ಬರೆದಿದ್ದರು. ಪರೀಕ್ಷಾರ್ಥ ಸ್ಫೋಟ ನಡೆಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಬಳಿಕ ಸಿಡಬ್ಲ್ಯುಪಿಆರ್‌ಎಸ್ ತಂಡ ೨೦೧೮ ಡಿಸೆಂಬರ್ ೬ ರಿಂದ ೧೮ರವರೆಗೆ ಕೆಆರ್‌ಎಸ್ ಅಣೆಕಟ್ಟೆಯ ಸುತ್ತ ಕಲ್ಲುಗಣಿಗಾರಿಕೆ ನಡೆಯುವ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ಜ.೨೪ರಿಂದ ೫ ದಿನಗಳ ಕಾಲ ಕೆಆರ್‌ಎಸ್ ಉತ್ತರ ದಂಡೆಯ ಕಡೆ ಇರುವ ಎಲ್ಲಾ ಕಲ್ಲು ಗಣಿಗಾರಿಕೆ ಕೇಂದ್ರಗಳಲ್ಲಿ ಪ್ರಾಯೋಗಿಕ ಸ್ಫೊಟ ಕೈಗೊಳ್ಳಲು ಜಿಲ್ಲಾಡಳಿತ ಷರತ್ತಿನ ಅನುಮತಿ ನೀಡಿತ್ತು. ಆದರೆ, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ವಿಜ್ಞಾನಿಗಳ ತಂಡ ಬರಲೂ ಇಲ್ಲ, ಪರೀಕ್ಷಾರ್ಥ ಸ್ಫೋಟ ನಡೆಯಲೂ ಇಲ್ಲ.

೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿರುವ ಆದೇಶ ಪ್ರಶ್ನಿಸಿ ೧೭ ಮಂದಿ ಕ್ರಷರ್ ಮಾಲೀಕರು ೨೦೨೧ರಲ್ಲಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ೧೨.೧.೨೦೨೨ರಲ್ಲಿ ಗಣಿಗಾರಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ವೈಜ್ಞಾನಿಕ ವರದಿ ಪಡೆದು, ಟ್ರಯಲ್ ಬ್ಲಾಸ್ಟ್ ನಡೆಸಿ ನಂತರ ಅನುಮತಿ ನೀಡುವಂತೆ ತಿಳಿಸಿತ್ತು.

ಅಣೆಕಟ್ಟು ಸುರಕ್ಷತಾ ಸಮಿತಿ ವರದಿ ಆಧರಿಸಿ ಕಾವೇರಿ ನೀರಾವರಿ ನಿಗಮದವರು ಜಾರ್ಖಂಡ್‌ನ ಧನಾಬಾದ್‌ನಲ್ಲಿರುವ ಸಿಐಎಂಎಫ್‌ಆರ್ ತಂಡವನ್ನು ಕರೆಸಿ ೨೫.೫.೨೦೨೨ರಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಮುಂದಾದಾಗ ರೈತರಿಂದ ವಿರೋಧ ವ್ಯಕ್ತವಾಗಿತ್ತು.

ಮತ್ತೆ ಕೆಆರ್‌ಎಸ್ ಬಳಿ ಗಣಿಗಾರಿಕೆಗೆ ಅನುಮತಿ ನೀಡುವಾಗ ಜಿಲ್ಲಾಧಿಕಾರಿಗಳು ಟ್ರಯಲ್ ಬ್ಲಾಸ್ಟ್ ನಡೆಸಿ ಅನುಮತಿ ನೀಡಬೇಕು ಎಂದು ರಾಜ್ಯಸರ್ಕಾರದ ಅಣೆಕಟ್ಟು ಸುರಕ್ಷಾ ಸಮಿತಿ ನಿರ್ಧಾರ ಕೈಗೊಂಡು ೨೫ ಕಿ.ಮೀ. ವ್ಯಾಪ್ತಿಯಲ್ಲಿ ಗಣಿ ನಿಷೇಧ ಜಾರಿಗೊಳಿಸಿತು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಗಣಿ ಮಾಲೀಕರು ಹೋದಾಗ ೮.೧.೨೦೨೪ರಲ್ಲಿ ಕೆಆರ್‌ಎಸ್ ಅಣೆಕಟ್ಟು ವ್ಯಾಪ್ತಿಯ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿತು. ಅದರ ಮರುದಿನವೇ ೯.೧.೨೦೨೪ರಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದಾಗ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಅದರಂತೆ ಕಾವೇರಿ ನೀರಾವರಿ ನಿಗಮದವರು ಜು.೭ರಂದು ಪರೀಕ್ಷಾರ್ಥ ಸ್ಫೋಟಕ್ಕೆ ಜಾರ್ಖಂಡ್‌ನ ಧನಾಬಾದ್‌ನಲ್ಲಿರುವ ಸಿಐಎಂಎಫ್‌ಆರ್ ತಂಡವನ್ನು ಕರೆಸಿ ಸ್ಫೋಟ ನಡೆಸಲು ಯತ್ನಿಸಿದರೂ ಸಫಲವಾಗಲಿಲ್ಲ.

ಮೂರು ಬಾರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪರೀಕ್ಷಾರ್ಥ ಸ್ಫೋಟಕ್ಕೆ ಯತ್ನ ನಡೆಸಿದರೂ ಒಮ್ಮೆಯೂ ಒಂದು ಕಲ್ಲು ಕೂಡ ಸಿಡಿಯಲಿಲ್ಲ. ಆದರೂ ೧.೧೧ ಕೋಟಿ ರು. ಹಣವನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ. ಒಮ್ಮೆ ೪೪.೬೧ ಲಕ್ಷ ರು., ಇನ್ನೊಮ್ಮೆ ೫೯.೪೮ ಲಕ್ಷ ರು. ಕೊನೆಯ ಬಾರಿ ಕೇವಲ ೭.೫೫ ಲಕ್ಷ ರು. ಖರ್ಚು ಮಾಡಿರುವುದಾಗಿ ತೋರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಏಜೆನ್ಸಿಯವರಿಂದ ವಸೂಲಿಯಾಗಬೇಕಾದ ತೆರಿಗೆ ಕಡಿತ ಹಣದಲ್ಲಿ ೬.೬೯ ಲಕ್ಷ ರು. ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ.

ತನಿಖೆ ಅವಶ್ಯ

ರೈತರ ವಿರೋಧದಿಂದಾಗಿ ಟ್ರಯಲ್‌ ಬ್ಲಾಸ್ಟ್‌ ಮೂರು ಬಾರಿಯೂ ನಡೆದೇ ಇಲ್ಲ. ಆದರೂ, 1.11 ಕೋಟಿ ಖರ್ಚಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಐಟಿ ಕಡಿತದಲ್ಲೂ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ. ಇವೆಲ್ಲವೂ ಸಂದೇಹಾಸ್ಪದ ನಡೆಯಾಗಿದೆ. ಹಾಗಾಗಿ ನಿಗಮದ ಅಧಿಕಾರಿಗಳ ವಿರುದ್ಧ ತನಿಖೆ ನಡೆಯುವುದು ಅವಶ್ಯವಾಗಿದೆ.

- ಕೆ.ಆರ್‌.ರವೀಂದ್ರ, ಸಾಮಾಜಿಕ ಹೋರಾಟಗಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾನುಬಾಳಿನಲ್ಲಿ ಎರಡು ದಿನಗಳ ಕಾರ್‌ ರೇಸ್ ಸ್ಪರ್ಧೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸೇವೆ ಮಾದರಿ ಕಾರ್ಯ