)
ಕನ್ನಡಪ್ರಭ ವಾರ್ತೆ ಬೆಳಗಾವಿ
ಬ್ಯಾಂಕ್ ಅಧಿಕಾರಿಗಳು ವಂಚನೆ ಮಾಡಿರುವ ಬಗ್ಗೆ ಖಾನಾಪುರ ತಾಲೂಕಿನ ರುಮೇವಾಡಿ ಕ್ರಾಸ್ ನಿವಾಸಿ, ಶ್ರೀದತ್ತ ಕ್ಯಾಶೋ ಇಂಡಸ್ಟ್ರೀಸ್‌ನ ಮಾಲೀಕ ಸುರೇಶ ಲಕ್ಷ್ಮಣ ಶಿವನಗೇಕರ ಅವರು ದೂರು ನೀಡಿದ್ದಾರೆ.
ರುಮೇವಾಡಿ ಕ್ರಾಸ್‌ನ ಪ್ಲಾಟ್ ನಂ.273 ಮತ್ತು 273/ಎರಲ್ಲಿ ಗೋಡಂಬಿ ಕಾರ್ಖಾನೆ ನಡೆಸುತ್ತಿರುವ ಅವರು, ಉದ್ಯಮದ ಉದ್ದೇಶಕ್ಕಾಗಿ 2024ರ ಫೆಬ್ರವರಿಯಲ್ಲಿ ಬೆಳಗಾವಿಯ ತಿಳಕವಾಡಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ₹2.86 ಕೋಟಿ ಓವರ್‌ಡ್ರಾಫ್ಟ್ ಹಾಗೂ ಟರ್ಮ್ ಲೋನ್ ಪಡೆದಿದ್ದರು. ಅವರ ಬ್ಯಾಂಕ್ ಖಾತೆಯಿಂದ 2023ರ ಅ.31ರಂದು ₹5 ಲಕ್ಷ , 2024ರ ಫೆ.19ರಂದು ₹27.30 ಲಕ್ಷ ಹಾಗೂ ಫೆ.22ರಂದು ಒಂದು ಕೋಟಿ ರು. ಸೇರಿ ಒಟ್ಟು ₹1.32 ಕೋಟಿ ಹಣವನ್ನು ಅವರ ಅನುಮತಿಯಿಲ್ಲದೆ ಬೇರೆ ಖಾತೆಗಳಿಗೆ ವರ್ಗಾಯಿಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ, ತಪ್ಪಾಗಿ ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಶೀಘ್ರವೇ ಮರಳಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ₹46 ಲಕ್ಷ ಮರುಪಾವತಿಸಿದ್ದು, ಉಳಿದ ₹ 86.30 ಲಕ್ಷ ಹಣವನ್ನು 2 ವರ್ಷಗಳಿಂದಲೂ ಪಾವತಿಸದೆ ಸತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಸಂಬಂಧ ಕೆನರಾ ಬ್ಯಾಂಕ್ ತಿಲಕವಾಡಿ ಶಾಖೆಯ ಮಾಜಿ ಮುಖ್ಯ ವ್ಯವಸ್ಥಾಪಕ ನಿರಜಕುಮಾರ ತಿವಾರಿ, ಮಾಜಿ ವ್ಯವಸ್ಥಾಪಕ ನಿರಜಕುಮಾರ, ಹುಬ್ಬಳ್ಳಿಯ ಉಪ ಪ್ರಧಾನ ವ್ಯವಸ್ಥಾಪಕ ಜಗದೀಶ ಸ್ವಾಮಿ, ಬೆಳಗಾವಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶ್ರೀವಿದ್ಯಾ, ಮಾಜಿ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಿವರಾಮಕೃಷ್ಣ ಹಾಗೂ ಮಾಜಿ ಉಪ ವ್ಯವಸ್ಥಾಪಕ ಕೆ.ವಿಜಯಕುಮಾರ ವಿರುದ್ಧ ಪ್ರಕರಣ ದಾಖಲಾಗಿದೆ.