ಕನ್ನಡಪ್ರಭ ವಾರ್ತೆ ಅಥಣಿತಾಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನಲ್ಲಿ 2 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ 10 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಕೃಷ್ಣಾ ರೈತ ಭವನದಲ್ಲಿ ಕಂದಾಯ ಇಲಾಖೆಯಿಂದ ಹಮ್ಮಿಕೊಂಡಿದ್ದ ನಮ್ಮ ಮನೆ ನಮ್ಮ ಹಕ್ಕು ಯೋಜನೆಯಡಿ ಹಲವು ವರ್ಷಗಳಿಂದ ಮನೆಗಳಿಗೆ ಸೂಕ್ತ ದಾಖಲೆ ಹಾಗೂ ಭದ್ರತೆ ಇಲ್ಲದ 2 ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಶಾಶ್ವತ ಭದ್ರತೆ ಒದಗಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶವಾಗಿದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಮನೆಗಳ ಹಕ್ಕುಪತ್ರ ವಿತರಣೆಯೂ ಆರನೇ ಗ್ಯಾರಂಟಿ ಯೋಜನೆಯಂತಾಗಿದೆ ಎಂದರು.ಅಥಣಿ ಪಟ್ಟಣ ಸೇರಿದಂತೆ ಹಲವು ಗ್ರಾಪಂ ವ್ಯಾಪ್ತಿಗಳಲ್ಲಿ ಬಡ ಕುಟುಂಬಗಳು ಸ್ವಂತ ಸೂರಿಲ್ಲದೆ ಗುಡಿಸಲು ಹಾಗೂ ಪತ್ರಾಸ್ ಮನೆಗಳಲ್ಲಿ ಜೀವನ ಸಾಗಿಸುತ್ತಿವೆ. ಇಂತಹ ಕುಟುಂಬಗಳನ್ನು ಗುರುತಿಸಿ, ಮುಂದಿನ 3 ತಿಂಗಳಲ್ಲಿ ಇನ್ನೂ 3 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಬೀಳಗಿ ವಿಭಾಗೀಯ ಅಧಿಕಾರಿ ಸಿದರಾಯ ಬೋಸಗಿ ಮಾತನಾಡಿ, ಸಚಿವರ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ ಎಂದರು.ಈ ಸಂದರ್ಭದಲ್ಲಿ ತಾಲೂಕು ಆಡಳಿತದಿಂದ ಸಚಿವ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ಅಥಣಿಯಲ್ಲಿ 2 ವರ್ಷ ಜನಪರ ಸೇವೆ ಸಲ್ಲಿಸಿ ವಿಭಾಗೀಯ ಅಧಿಕಾರಿಯಾಗಿ ಪದೋನ್ನತಿ ಹೊಂದಿದ ಸಿದರಾಯ ಬೋಸಗಿ ಅವರನ್ನು ಸಚಿವರು ಗೌರವಿಸಿದರು.
ಅಥಣಿ ಮತ್ತು ಕಾಗವಾಡ ತಹಸೀಲ್ದಾರ್ ರವೀಂದ್ರ ಹಾದಿಮನಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಪಿಐ ಸಂತೋಷ ಹಳ್ಳೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಮಾಜಿ ಸೈನಿಕರಿಗೆ ನಿವೇಶನ
ಅಥಣಿ ಪಟ್ಟಣದ ಹೊರವಲಯದಲ್ಲಿ ಸರ್ಕಾರದ 10 ಎಕರೆ ಜಮೀನಿನಲ್ಲಿ ಮಾಜಿ ಸೈನಿಕರಿಗೆ ನಿವೇಶನ ಹಂಚಿಕೆ ಮಾಡುವ ಸಂಕಲ್ಪ ಹೊಂದಿದ್ದೇನೆ. ಅಥಣಿ ಗ್ರಾಮೀಣದ ಶಿವಯೋಗಿ ನಗರದ ಫಲಾನುಭವಿಗಳಿಗೆ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಹಕ್ಕುಪತ್ರ ವಿತರಣೆಯಾಗದ ಗ್ರಾಮ ಪಂಚಾಯಿತಿಗಳಲ್ಲಿ ಮರುಸರ್ವೆ ನಡೆಸಿ, ಮುಂದಿನ ಎರಡು ತಿಂಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು. ಅಥಣಿ ನಗರದಲ್ಲಿ ಮನೆ ನಿರ್ಮಿಸಿಕೊಳ್ಳಲು ನಿವೇಶನ ಇಲ್ಲದ ಅನೇಕ ಫಲಾನುಭವಿಗಳಿದ್ದು, ಅಲೆಮಾರಿ ಜನಾಂಗದವರಿಗೆ ಈಗಾಗಲೇ 2 ಎಕರೆ ಪ್ರದೇಶದಲ್ಲಿ ಹಕ್ಕುಪತ್ರ ನೀಡಲಾಗಿದೆ. ಅಧಿಕಾರಿಗಳ ಉತ್ತಮ ಕಾರ್ಯದಿಂದ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಗೌರವ ಹೆಚ್ಚುತ್ತದೆ. ಅಧಿಕಾರ, ಅಂತಸ್ತು ಮತ್ತು ಆಯುಷ್ಯ ಶಾಶ್ವತವಲ್ಲ. ಸೇವೆ ಮಾಡುವ ಅವಕಾಶ ದೊರೆತಾಗ ಬಡವರು ಮತ್ತು ನಿರ್ಗತಿಕರ ಸೇವೆ ಸಲ್ಲಿಸಿ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.