ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿಗೆ ಡೀಮ್ಸ್-ಟು-ಬಿ ವಿವಿ ಅಧ್ಯಕ್ಷ ಡಾ.ಚೆನ್‌ರಾಜ್ ರಾಯಚಂದ್ ಅವರ ಭಾವಚಿತ್ರ ಮತ್ತು +91 8070049652 ಸಂಖ್ಯೆಯನ್ನು ಬಳಸಿ ನಕಲಿ ವಾಟ್ಸಸ್ ಆ್ಯಪ್‌ನಲ್ಲಿ ಪ್ರೊಫೈಲ್ ಸೃಷ್ಟಿಸಿ ಆರೋಪಿಗಳು ಹಣ ಸುಲಿಗೆ ಮಾಡಿದ್ದರು. ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು. ಬಳಿಕ ಸೈಬರ್ ಕಮಾಂಡರ್ ಹಾಗೂ ಡಿಜಿಪಿ ಪ್ರಣಣ್ ಮೊಹಂತಿ ಮಾರ್ಗದರ್ಶನದಲ್ಲಿ ಎಸಿಪಿ ನವೀನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಸಿದ್ದಪ್ಪ ಸಾರಥ್ಯದ ತಂಡವು, ತಾಂತ್ರಿಕ ಮಾಹಿತಿ ಆಧರಿಸಿ ನಾಲ್ವರು ಮೋಸಗಾರರನ್ನು ಬಂಧಿಸಿದ್ದಾರೆ.
ಹೇಗೆ ವಂಚನೆ?ಡಾ.ಚೆನ್‌ರಾಜ್ ರಾಯಚಂದ್ ಅವರ ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆಯನ್ನು ಅಕ್ರಮವಾಗಿ ಬಳಸಿ ವಾಟ್ಸಪ್‌ನಲ್ಲಿ ಖಾತೆ ತೆರೆದಿದ್ದರು. ಸೆ.8 ರಂದು ಅಧ್ಯಕ್ಷರ ಸೋಗಿನಲ್ಲಿ ಆ ವಿವಿಯ ಲೆಕ್ಕ ಅಧಿಕಾರಿ ವಿನಯ್ ಭೂಷಣ್ ಅವರಿಗೆ ವಿವಿಯ ಬ್ಯಾಂಕ್ ಖಾತೆಯಲ್ಲಿರುವ ಬಾಕಿ ಹಣ ಬಗ್ಗೆ ವಿಚಾರಿಸಿದ್ದರು. ಇದಾದ ಬಳಿಕ ಅದೇ ದಿನ ಬೆಳಗ್ಗೆ 11.34 ಗಂಟೆಗೆ ಮತ್ತೆ ಲೆಕ್ಕ ಅಧಿಕಾರಿಗೆ 1.40 ಕೋಟಿ ರು. ಹಣವನ್ನು ವರ್ಗಾಯಿಸುವಂತೆ ವಾಟ್ಸಪ್ ಮೂಲಕ ಸೂಚಿಸಿದ್ದ. ಈ ಸಂದೇಶ ನಂಬಿದ ವಿನಯ್, ತಮ್ಮ ಅಧ್ಯಕ್ಷರ ಹೆಸರಿನಲ್ಲಿ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು. ತರುವಾಯ ಈ ಹಣದ ಬಗ್ಗೆ ವಿವಿ ಅಧ್ಯಕ್ಷರಿಗೆ ವಿನಯ್ ಕರೆ ಮಾಡಿದಾಗ ವಂಚನೆ ಕೃತ್ಯ ಬೆಳಕಿಗೆ ಬಂದಿದೆ.
ಈ ವಂಚನೆ ಜಾಲದ ಕಿಂಗ್‌ಪಿನ್ ಸನ್ನಿ ಡೇವಿಡ್ ಆಗಿದ್ದು, ಆತನೇ ವಿವಿ ಅಧ್ಯಕ್ಷರ ಹೆಸರಿನಲ್ಲಿ ವಾಟ್ಸಪ್ ಚಾಟಿಂಗ್ ಮಾಡಿ ಹಣ ದೋಚಿದ್ದಾನೆ. ಇನ್‌ಸ್ಟಾಗ್ರಾಂ ಮೂಲಕ ಅಣ್ಣಯ್ಯ, ಖಾದ್ರಿ, ಅಂಬರಾಯ ಹಾಗೂ ಸೈಯದ್ ನನ್ನು ವಂಚನೆ ಜಾಲಕ್ಕೆ ಸನ್ನಿ ಸೆಳೆದಿದ್ದಾನೆ. ಅಂತೆಯೇ ಸನ್ನಿ ಸೂಚನೆ ಮೇರೆಗೆ ತಮ್ಮ ಸ್ನೇಹಿತರು ಹಾಗೂ ಪರಿಚಿತರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ಅಣ್ಣಯ್ಯ ತೆರೆಸಿದ್ದ. ಬಳಿಕ ಆ ಖಾತೆಗಳ ಚೆಕ್ ಬುಕ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಸಂಗ್ರಹಿಸಿ ಸನ್ನಿಗೆ ಆತ ರವಾನಿಸಿದ್ದ. ಆ ಎಟಿಎಂ ಕಾರ್ಡ್‌ಗಳನ್ನು ಬಳಸಿ ಹೈದ್ರಾಬಾದ್‌ನಲ್ಲಿ ಇನ್ನುಳಿದ ಮೂವರು ಹಣ ಡ್ರಾ ಮಾಡಿದ್ದರು.