ಬಹುನಿರೀಕ್ಷಿತ ಜಿಪಂ ಮತ್ತು ತಾಪಂ ಚುನಾವಣೆಗೆ ವರ್ಗವಾರು ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಹುರುಪು ಶುರುವಾಗಿದೆ. ಯಾವ ಕ್ಷೇತ್ರಕ್ಕೆ ಯಾವ ವರ್ಗದ ಮೀಸಲಾತಿ ಬರಲಿದೆ ಎಂಬ ಕ್ಷೇತ್ರವಾರು ಚಿತ್ರಣ ಇನ್ನೂ ಹೊರಬೀಳಬೇಕಿರುವುದರಿಂದ, ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ತಮ್ಮ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಬಹುನಿರೀಕ್ಷಿತ ಜಿಪಂ ಮತ್ತು ತಾಪಂ ಚುನಾವಣೆಗೆ ವರ್ಗವಾರು ಮೀಸಲಾತಿ ಪ್ರಕಟವಾದ ಬೆನ್ನಲ್ಲೇ ಆಕಾಂಕ್ಷಿಗಳಲ್ಲಿ ಹುರುಪು ಶುರುವಾಗಿದೆ. ಯಾವ ಕ್ಷೇತ್ರಕ್ಕೆ ಯಾವ ವರ್ಗದ ಮೀಸಲಾತಿ ಬರಲಿದೆ ಎಂಬ ಕ್ಷೇತ್ರವಾರು ಚಿತ್ರಣ ಇನ್ನೂ ಹೊರಬೀಳಬೇಕಿರುವುದರಿಂದ, ನಿರೀಕ್ಷೆಯಲ್ಲಿರುವ ಆಕಾಂಕ್ಷಿಗಳು ತಮ್ಮ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ 2021ರ ಏಪ್ರಿಲ್‌, ಮೇ ವೇಳೆಗೆ ಮುಕ್ತಾಯವಾಗಿತ್ತು. 2016ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಗೆದ್ದಿದ್ದ ಸದಸ್ಯರ ಐದು ವರ್ಷದ ಅವಧಿ 2021ರಲ್ಲಿಯೇ ಮುಗಿದಿದೆ. ಆದರೆ, ಹಲವು ಕಾರಣಗಳಿಂದ ಚುನಾವಣೆ ನಡೆದಿರಲಿಲ್ಲ. ಅಂದರೆ, ಇಲ್ಲಿಯವರೆಗೆ ಸುಮಾರು ಐದುವರೆ ವರ್ಷಗಳಿಂದ ಜಿಪಂ–ತಾಪಂಗೆ ಚುನಾಯಿತ ಪ್ರತಿನಿಧಿಗಳಿಲ್ಲ. 2021ರಲ್ಲಿ ಜಿಪಂ–ತಾಪಂ ಸದಸ್ಯರ ಅವಧಿ ಮುಕ್ತಾಯಗೊಂಡ ಬಳಿಕ ಚುನಾವಣೆ ನಡೆದಿಲ್ಲ. ಇದೀಗ ಮೀಸಲಾತಿ ಪ್ರಕ್ರಿಯೆ ಆರಂಭವಾಗಿರುವುದರಿಂದ ಐದು ವರ್ಷಗಳಿಂದ ಚುನಾವಣೆಗಾಗಿ ಕಾಯುತ್ತಿದ್ದ ಆಕಾಂಕ್ಷಿಗಳಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.

34 ಜಿಪಂ, 122 ತಾಪಂ ಸ್ಥಾನ: ರಾಜ್ಯ ಸರ್ಕಾರ ಜಿಪಂ ಹಾಗೂ ತಾಪಂ ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಗೆ 34 ಜಿಪಂ ಹಾಗೂ 122 ತಾಪಂ ಸೇರಿ ಒಟ್ಟು 156 ಸ್ಥಾನಗಳು ನಿಗದಿಯಾಗಿವೆ. ಈ ಪೈಕಿ 80 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ರಾಜ್ಯಾದ್ಯಂತ ಜಿಪಂ–ತಾಪಂ ಚುನಾವಣೆ ಪ್ರಕ್ರಿಯೆಗೆ ಈ ಮೀಸಲಾತಿ ಅಧಿಸೂಚನೆಯೊಂದಿಗೆ ಮತ್ತಷ್ಟು ವೇಗ ಸಿಕ್ಕಿದೆ.

ಜಿಪಂನಲ್ಲಿ 17 ಮಹಿಳಾ ಸ್ಥಾನ: ಜಿಲ್ಲಾ ಪಂಚಾಯಿತಿಯ 34 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 3, ಹಿಂದುಳಿದ ವರ್ಗ ‘ಅ’ಗೆ 7, ಹಿಂದುಳಿದ ವರ್ಗ ‘ಬ’ಗೆ 2 ಹಾಗೂ ಸಾಮಾನ್ಯ ವರ್ಗಕ್ಕೆ 17 ಸ್ಥಾನಗಳು ನಿಗದಿಯಾಗಿವೆ. ಎಸ್ಸಿಗೆ ಮೀಸಲಾಗಿರುವ 5 ಸ್ಥಾನಗಳಲ್ಲಿ 3 ಮಹಿಳೆಯರಿಗೆ, ಎಸ್ಟಿಯ 3ರಲ್ಲಿ 2, ಹಿಂದುಳಿದ ವರ್ಗ ‘ಅ’ದ 7ರಲ್ಲಿ 4, ಹಿಂದುಳಿದ ವರ್ಗ ‘ಬ’ದ 2ರಲ್ಲಿ ಒಂದು ಹಾಗೂ ಸಾಮಾನ್ಯ ವರ್ಗದ 17ರಲ್ಲಿ 7 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ. ಹೀಗಾಗಿ ಜಿಪಂನ ಒಟ್ಟು 34 ಸ್ಥಾನಗಳಲ್ಲಿ 17 ಸ್ಥಾನಗಳು ಮಹಿಳೆಯರ ಪಾಲಾಗಲಿವೆ.

ತಾಪಂಗೆ 122 ಸ್ಥಾನ: ಜಿಲ್ಲೆಯ ಎಂಟು ತಾಲೂಕು ಪಂಚಾಯಿತಿಗಳ 122 ಸದಸ್ಯ ಸ್ಥಾನಗಳಿಗೂ ವರ್ಗವಾರು ಮೀಸಲಾತಿ ನಿಗದಿಯಾಗಿದೆ. ಎಸ್ಸಿಗೆ 18, ಎಸ್ಟಿಗೆ 12, ಹಿಂದುಳಿದ ವರ್ಗ ‘ಅ’ಗೆ 23, ಹಿಂದುಳಿದ ವರ್ಗ ‘ಬ’ಗೆ 6 ಹಾಗೂ ಸಾಮಾನ್ಯ ವರ್ಗಕ್ಕೆ 63 ಸ್ಥಾನಗಳು ನಿಗದಿಯಾಗಿವೆ.

ತಾಲೂಕುವಾರು ನೋಡಿದರೆ ರಾಣಿಬೆನ್ನೂರು ತಾಪಂಗೆ ಗರಿಷ್ಠ 23 ಸ್ಥಾನಗಳು ಇದ್ದರೆ, ಹಾವೇರಿ ಹಾಗೂ ಹಾನಗಲ್ ತಲಾ 20, ಶಿಗ್ಗಾಂವಿ 14, ಸವಣೂರು 13, ಬ್ಯಾಡಗಿ 12, ಹಿರೇಕೆರೂರು 11 ಹಾಗೂ ರಟ್ಟಿಹಳ್ಳಿ 9 ಸ್ಥಾನಗಳನ್ನು ಹೊಂದಿವೆ.

ತಾಪಂನ 122 ಸ್ಥಾನಗಳ ಪೈಕಿ 63 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಎಸ್ಸಿ ವಿಭಾಗದಲ್ಲಿ 11, ಎಸ್ಟಿಯಲ್ಲಿ 8, ಹಿಂದುಳಿದ ವರ್ಗ ‘ಅ’ದಲ್ಲಿ 12, ಹಿಂದುಳಿದ ವರ್ಗ ‘ಬ’ದಲ್ಲಿ 5 ಹಾಗೂ ಸಾಮಾನ್ಯ ವರ್ಗದಲ್ಲಿ 27 ಮಹಿಳಾ ಸ್ಥಾನಗಳಿವೆ.

ಮೀಸಲಾತಿ ಬದಲಾದರೆ ಲೆಕ್ಕಾಚಾರವೂ ಬದಲು: ಇದೀಗ ಆಕಾಂಕ್ಷಿಗಳ ಗಮನ ಕ್ಷೇತ್ರವಾರು ಮೀಸಲಾತಿ ಪಟ್ಟಿಯತ್ತ ನೆಟ್ಟಿದೆ. ಹಲವು ತಿಂಗಳಿಂದ ಜಿಪಂ ಅಥವಾ ತಾಪಂನ ನಿರ್ದಿಷ್ಟ ಕ್ಷೇತ್ರದಲ್ಲಿ ಸ್ಪರ್ಧೆಯ ಸಿದ್ಧತೆ ನಡೆಸುತ್ತಿದ್ದವರು, ಆ ಕ್ಷೇತ್ರದ ಮೀಸಲಾತಿ ತಮ್ಮ ವರ್ಗಕ್ಕೆ ಅನುಕೂಲವಾಗಲಿದೆಯೇ ಎಂಬುದನ್ನು ಎದುರು ನೋಡುತ್ತಿದ್ದಾರೆ.

ಮೀಸಲು ವರ್ಗಕ್ಕೆ ಹೊಂದಿಕೆಯಾಗುವ ಹೊಸ ಆಕಾಂಕ್ಷಿಗಳಿಗೂ ಅವಕಾಶದ ಬಾಗಿಲು ತೆರೆಯಲಿದೆ. ಹೀಗಾಗಿ ಕ್ಷೇತ್ರವಾರು ಮೀಸಲಾತಿ ಪ್ರಕಟಣೆಯೇ ಮುಂದಿನ ಹಂತದ ರಾಜಕೀಯ ಚಟುವಟಿಕೆಗೆ ಪ್ರಮುಖ ತಿರುವಾಗಲಿದೆ.

ಮಹಿಳಾ ಆಕಾಂಕ್ಷಿಗಳಿಗೂ ಅವಕಾಶ: ಜಿಪಂ–ತಾಪಂ ಸೇರಿ ಒಟ್ಟು 156 ಸ್ಥಾನಗಳ ಪೈಕಿ 80 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿರುವುದು ಈ ಬಾರಿಯ ಪ್ರಮುಖ ಅಂಶವಾಗಿದೆ. ಶೇ.51ಕ್ಕೂ ಹೆಚ್ಚು ಸ್ಥಾನಗಳು ಮಹಿಳೆಯರ ಪಾಲಾಗಿರುವುದರಿಂದ, ರಾಜಕೀಯ ಪಕ್ಷಗಳ ಟಿಕೆಟ್‌ ಹಂಚಿಕೆಯಲ್ಲೂ ಮಹಿಳಾ ಅಭ್ಯರ್ಥಿಗಳ ಆಯ್ಕೆಗೆ ಹೆಚ್ಚಿನ ಮಹತ್ವ ಬರಲಿದೆ. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಮಹಿಳಾ ಮುಖಂಡರು, ರಾಜಕೀಯ ಕುಟುಂಬಗಳ ಮಹಿಳಾ ಸದಸ್ಯರು ಹಾಗೂ ಹೊಸ ಮುಖಗಳು ಮೀಸಲು ಕ್ಷೇತ್ರಗಳತ್ತ ಗಮನ ಹರಿಸುವ ಸಾಧ್ಯತೆ ಇದೆ. ಆದರೆ ಯಾವ ಕ್ಷೇತ್ರ ಮಹಿಳೆಯರಿಗೆ, ಯಾವ ಕ್ಷೇತ್ರ ಯಾವ ವರ್ಗಕ್ಕೆ ಎಂಬ ಅಂತಿಮ ಚಿತ್ರಣ ಕ್ಷೇತ್ರವಾರು ಮೀಸಲಾತಿ ಪ್ರಕಟವಾದ ಬಳಿಕವಷ್ಟೇ ಸ್ಪಷ್ಟವಾಗಲಿದೆ.

ಗ್ರಾಮೀಣ ಭಾಗದಲ್ಲಿ ರಾಜಕೀಯ ಚುರುಕು: ಹಲವು ವರ್ಷಗಳಿಂದ ಜಿಪಂ, ತಾಪಂಗಳಿಗೆ ಚುನಾವಣೆ ನಡೆಯದ್ದರಿಂದ ಪ್ರಮುಖ ಪಕ್ಷಗಳ ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿತ್ತು. ಹಿಂದಿನ ಬಿಜೆಪಿ ಸರ್ಕಾರ, ಈಗಿನ ಸರ್ಕಾರ ಸೇರಿದಂತೆ ಯಾವ ಆಡಳಿತಾರೂಢ ಸರ್ಕಾರ ಕೂಡ ಈ ಚುನಾವಣೆ ನಡೆಸುವ ಬಗ್ಗೆ ಆಸಕ್ತಿ ತೋರಿರಲಿಲ್ಲ. ಇದರಿಂದ 2021ರಿಂದಲೇ ಚುನಾವಣೆಗೆ ತೆರೆಮರೆಯಲ್ಲಿ ತಯಾರಿ ನಡೆಸುತ್ತಿದ್ದವರಲ್ಲಿ ನಿರಾಸೆ ಮೂಡಿತ್ತು. ಇದೀಗ ವರ್ಗವಾರು ಮೀಸಲಾತಿ ಪ್ರಕಟವಾಗಿರುವುದರಿಂದ ಶೀಘ್ರದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಹುಟ್ಟುಹಾಕಿದೆ.

ಯಾವ ಕ್ಷೇತ್ರದಲ್ಲಿ ಯಾವ ಸಮುದಾಯದ ಅಭ್ಯರ್ಥಿಗೆ ಅವಕಾಶ, ಮಹಿಳಾ ಮೀಸಲು ಕ್ಷೇತ್ರಗಳಲ್ಲಿ ಯಾರಿಗೆ ಅವಕಾಶ, ಮೀಸಲಾತಿಯಿಂದ ಹೊರಗುಳಿಯುವ ಆಕಾಂಕ್ಷಿಗಳು ಯಾವ ಕ್ಷೇತ್ರದತ್ತ ಮುಖ ಮಾಡಲಿದ್ದಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಅವಲಂಬಿತವಾಗಲಿವೆ.

ಒಟ್ಟಾರೆ, ವರ್ಗವಾರು ಮೀಸಲಾತಿ ಪ್ರಕಟವಾಗಿರುವುದು ಚುನಾವಣಾ ಸಿದ್ಧತೆಗೆ ಚಾಲನೆ ನೀಡಿದ್ದರೆ, ಕ್ಷೇತ್ರವಾರು ಮೀಸಲಾತಿಯೇ ಆಕಾಂಕ್ಷಿಗಳ ಭವಿಷ್ಯದ ಸ್ಪರ್ಧೆಯ ಚಿತ್ರಣವನ್ನು ನಿರ್ಧರಿಸಲಿದೆ. ಹೀಗಾಗಿ ಇದೀಗ ಎಲ್ಲರ ಕಣ್ಣು ಕ್ಷೇತ್ರವಾರು ಮೀಸಲು ಪಟ್ಟಿಯತ್ತ ನೆಟ್ಟಿದೆ.