ಚಂದ್ರಗುತ್ತಿ ಮೂಲಸೌಲಭ್ಯಕ್ಕೆ ₹1.80 ಕೋಟಿ ಪ್ರಸ್ತಾವನೆ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾದೇವಿ ದೇವಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಧನುರ್ ಮಾಸದ ಪ್ರಯುಕ್ತ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಅವರು ರಥಬೀದಿ ಹಾಗೂ ಶೌಚಾಲಯ ಅವ್ಯವಸ್ಥಗಳ ಪರಿಶೀಲನೆ ನಡೆಸಿದರು.

ಸೊರಬ: ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾದೇವಿ ದೇವಸ್ಥಾನಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮಂಗಳವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಧನುರ್ ಮಾಸದ ಪ್ರಯುಕ್ತ ರೇಣುಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಜ.2ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ಟಾಯ್ಲೆಟ್ ಇಲ್ಲದೇ ರೇಣುಕೆ ಭಕ್ತರ ಮಾನ ಹರಾಜು ಎನ್ನುವ ವರದಿ ವೀಕ್ಷಿಸಿ, ರಥಬೀದಿ ಹಾಗೂ ಶೌಚಾಲಯ ಸ್ಥಳ ಪರಿಶೀಲನೆ ನಡೆಸಿದರು.

ಬಳಿಕ ಮುಖಂಡರೊಂದಿಗೆ ಮಾತನಾಡಿದ ಅವರು, ಶ್ರೀ ರೇಣುಕಾಂಬಾ ದೇವಸ್ಥಾನ ಸೇರಿದಂತೆ ಅಜುಬಾಜಿನ ಪ್ರದೇಶ ಪುರಾತತ್ವ ಇಲಾಖೆಗೆ ಒಳಪಡುತ್ತದೆ. ಈ ಕಾರಣದಿಂದ ಭಕ್ತರಿಗೆ ಶೌಚಾಲಯ, ತಂಗುದಾಣ ಮೊದಲಾದ ಮೂಲಭೂತ ಸಮಸ್ಯೆಗಳು ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಪುರಾತತ್ವ ಇಲಾಖೆಯ ನಿಯಮಗಳು ಅಡ್ಡಿಯಾಗಿವೆ. ಇಂಥ ವಿಚಾರ ಜನರ ಅರಿವಿಗೂ ಬರಬೇಕಿದೆ ಎಂದರು.

ಕಳೆದ ಸೆಪ್ಟೆಂಬರ್‌ನಲ್ಲಿ ಪ್ರವಾಸೋದ್ಯಮ ಇಲಾಖೆ ಸಚಿವರಿಗೆ ದೇವಸ್ಥಾನದ ಬಳಿ ಯಾತ್ರಿ ನಿವಾಸ ನಿರ್ಮಾಣ, ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಪ್ರವಾಸಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ₹1.80 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಕಟವಾದ ವರದಿಯ ಕನ್ನಡಪ್ರಭ ಪತ್ರಿಕೆಯನ್ನು ಸಚಿವ ಮಧು ಬಂಗಾರಪ್ಪ ಅವರಿಗೆ ತಲುಪಿಸಿ, ಸಚಿವ ಎಚ್.ಕೆ. ಪಾಟೀಲ್ ಅವರ ಗಮನಕ್ಕೆ ತರುವಂತೆ ಮನವಿ ಮಾಡಲಾಗುವುದು ಎಂದರು.

ಮಾಜಿ ತಾ.ಪಂ. ಸದಸ್ಯ ಎನ್.ಜಿ. ನಾಗರಾಜ, ಗ್ರಾ.ಪಂ. ಸದಸ್ಯೆ ಲಕ್ಷ್ಮೀ ಚಂದ್ರಪ್ಪ, ಶ್ರೀ ರೇಣುಕಾಂಬಾ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ವಿ.ಎಲ್. ಶಿವಪ್ರಸಾದ್ ಮೊದಲಾದವರು ಹಾಜರಿದ್ದರು.

- - - -02ಕೆಪಿಸೊರಬ01:

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ದೇವಸ್ಥಾನಕ್ಕೆ ಅನಿತಾ ಮಧು ಬಂಗಾರಪ್ಪ ಭೇಟಿ ನೀಡಿ ನಂತರ ರಥಬೀದಿ, ಶೌಚಾಲಯ ಸ್ಥಳಗಳನ್ನು ಪರೀಶೀಲನೆ ನಡೆಸಿದರು.

Share this article