ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಮೋದಿ ಸರ್ಕಾರದ ಗ್ಯಾರಟಿ ಕಾರ್ಯಕ್ರಮಗಳು ಅನುಷ್ಠಾನದಲ್ಲಿರುವ ಹಿನ್ನೆಲೆಯಲ್ಲಿ ದೇಶ ವ್ಯಾಪ್ತಿಯಾಗಿ ಹಮ್ಮಿಕೊಂಡಿರುವ ಸಂಕಲ್ಪಯಾತ್ರೆ ಸಂಚಾರ ಮಾಹಿತಿ ಕಾರ್ಯಕ್ರಮ ಮಂಗಳವಾರ ಶನಿವಾರಸಂತೆ ನಾಡ ಕಚೇರಿ ಆವರಣದ ಮುಂಭಾಗದಲ್ಲಿ ನಡೆಯಿತು.ಮಾಹಿತಿ ಕಾರ್ಯಕ್ರಮವನ್ನು ಶನಿವಾರಸಂತೆ ಗ್ರಾ.ಪಂ.ಉಪಾಧ್ಯಕ್ಷ ಸರ್ದಾರ್ ಅಹಮ್ಮದ್ ಉದ್ಘಾಟಿಸಿದರು. ಮೋದಿ ಸರ್ಕಾರದಲ್ಲಿ ಅನುಷ್ಠಾನಗೊಂಡಿರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ಆಯುಷ್ಮಾನ್ ಭಾರತ್, ಗ್ಯಾಸ್ ಸಬ್ಸಿಡಿ, ಆಹಾರ ಭದ್ರತೆ, ಪ್ರಧಾನ ಮಂತ್ರಿ ಜನ್‌ಧನ್ ಯೋಜನೆ, ಸುರಕ್ಷಾ ಭಿಮಾ ಯೋಜನೆ, ಜೀವನ್ ಜ್ಯೋತಿ ಯೋಜನೆ, ಅಟಲ್ ಪಿಂಚಣಿ, ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ, ಉಜ್ವಲ ಯೋಜನೆ, ಮುದ್ರಾ ಯೋಜನೆ, ಗ್ರಾಮೀಣ ಅವಾಜ್ ಯೋಜನೆ, ಸುಕನ್ಯಾ ಸಮೃದ್ದಿ ಯೋಜನೆ, ಸಹಿ ಪೋಷಣ್ ದೇಶ್ ರೋಶನ್, ಮಹಿಳೆಯರ ಸಬಲೀಕರಣದ ಯೋಜನೆಗಳು, ರೈತ ಕಲ್ಯಾಣ ಯೋಜನೆಗಳು, ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಗಳು, ಮಾಹಿತಿ ತಂತ್ರ ಜ್ಞಾನ ಯೋಜನೆಗಳು ಸೇರಿದಂತೆ ಅನುಷ್ಠಾನದಲ್ಲಿರುವ ನೂರಾರು ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಮೋದಿ ಭಾಷಣದಲ್ಲಿ ಪ್ರಸ್ತಾಪಿಸಿರುವ 2047 ರ ಹೊತ್ತಿಗೆ ವಿಕಾಸದತ್ತ ಭಾರತ ಕುರಿತಾದ ಭಾಷಣದ ತುಣುಕು ಹಾಗೂ ಮಾಹಿತಿಗಳನ್ನು ಸಂಚಾರ ವಾಹನದಲ್ಲಿ ಅಳವಡಿಸಿರುವ ಎಲ್‍ಇಡಿ ಮೂಲಕ ಪ್ರದರ್ಶಿಸಲಾಯಿತು.
ಯೂನಿಯನ್ ಬ್ಯಾಂಕ್ ಮೂಲಕ ವಿದ್ಯಾರ್ಥಿಗಳು, ನಿರುದ್ಯೋಗಿ ವಿದ್ಯಾವಂತ ಯುವಕ ಯುವತಿಯರಿಗೆ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಸೇರಿದಂತೆ ರೈತರಿಗೆ, ಬಡ ಜನರಿಗೆ ದೊರೆಯುವ ಸಾಲ ಸೌಲಭ್ಯಗಳ ಬಗ್ಗೆ ಶನಿವಾರಸಂತೆ ಯೂನಿಯನ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಆಶ್ರಯತ್ ಪ್ರಭು ಮಾಹಿತಿ ನೀಡಿದರು. ಕಾವೇರಿ ಗ್ರಾಮೀಣ ಬ್ಯಾಂಕ್‍ನಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಶನಿವಾರಸಂತೆ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ರಂಜಿತ್ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಎಸ್.ಎನ್. ರಘು, ಜಿ.ಪಂ. ಮಾಜಿ ಸದಸ್ಯೆ ಸರೋಜಮ್ಮ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಎಸ್.ಎನ್. ಪಾಂಡು, ಕೆ.ಪಿ. ಜಯಕುಮಾರ್ ಮುಂತಾದವರು ಇದ್ದರು. ಈ ಸಂದರ್ಭದಲ್ಲಿ ಪಟ್ಟಣದ ಪ್ರಜ್ಞಾ ಭಾರತ್ ಗ್ಯಾಸ್ ಏಜೆನ್ಸಿ ಮತ್ತು ಗಜಾನನ ಎಚ್‍ಪಿ ಗ್ಯಾಸ್ ಎಜೆನ್ಸಿ ವತಿಯಿಂದ ಗ್ರಾಹಕರಿಗೆ ಉಚಿತವಾಗಿ ಕೆವೈಸಿ ಮಾಡಿಕೊಡಲಾಯಿತು.