ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ-2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಧಾನ ಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಟಿ.ಆರ್.ಮಂಜುನಾಥ್ ತಿಳಿಸಿದರು
ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ-2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿಧಾನ ಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಟಿ.ಆರ್.ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕ್ಷೇತ್ರದಲ್ಲಿ ಒಟ್ಟು 1,94,330 ಮತದಾರರಿದ್ದಾರೆ. ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 1,92,228 ಮತದಾರರಿದ್ದರು. ಒಟ್ಟು 2,102 ಮತದಾರರು ಅಂತಿಮ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಕರಡು ಮತದಾರರ ಪಟ್ಟಿಯಲ್ಲಿ 94,566 ಪುರುಷರು, 97,661 ಮಹಿಳೆಯರು ಸೇರಿದಂತೆ 1,92,228 ಮತದಾರರಿದ್ದರು. ಅಂತಿಮ ಮತದಾರರ ಪಟ್ಟಿಯಲ್ಲಿ 95,589 ಪುರುಷರು, 98,740 ಮಹಿಳೆಯರು ಸೇರಿದಂತೆ 1,94,330 ಮತದಾರರಿದ್ದಾರೆ. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 31,172 ಮತದಾರರನ್ನು ಎಎಸ್ಡಿಡಿಒ ಪಟ್ಟಿಯಲ್ಲಿ ಗುರುತಿಸಲಾಗಿತ್ತು. ಇವರಲ್ಲಿ 6,497 ಮಂದಿ ಮೃತಪಟ್ಟವರು, 19,298 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 4,280 ಮಂದಿ ಎರಡು ಕಡೆ ನಮೂದಾಗಿರುವವರು, 856 ಮಂದಿ ಗೈರು ಹಾಜರಾದರು ಹಾಗೂ 241 ಮಂದಿ ಇತರೆ ವರ್ಗಕ್ಕೆ ಸೇರಿದವರಾಗಿದ್ದರು ಎಂದು ವಿವರಿಸಿದರು.
ನಮೂನೆ 6ರ ಅಡಿಯಲ್ಲಿ ಹೊಸ ಮತದಾರರಾಗಿ ಸೇರ್ಪಡೆಗೊಳ್ಳಲು 2,217 ಅರ್ಜಿಗಳು ಸ್ವೀಕೃತವಾಗಿದ್ದು, 2,045 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 172 ಅರ್ಜಿಗಳು ತಿರಸ್ಕೃತಗೊಂಡಿವೆ. ನಮೂನೆ 7ರ ಅಡಿಯಲ್ಲಿ 31,439 ಅರ್ಜಿಗಳು ಸ್ವೀಕೃತವಾಗಿದ್ದು, 31,218 ಅರ್ಜಿಗಳು ಸ್ವೀಕೃತ ಹಾಘೂ 221 ಅರ್ಜಿಗಳು ತಿರಸ್ಕೃತಗೊಂಡಿವೆ. ಅದೇ ರೀತಿ ನಮೂನೆ 8ರ ಅಡಿಯಲ್ಲಿ 4,023 ಅರ್ಜಿಗಳು ಸಲ್ಲಿಕೆಯಾಗಿದ್ದು, 3,529 ಅರ್ಜಿಗಳು ಸ್ವೀಕೃತ ಹಾಗೂ 494 ಅರ್ಜಿಗಳು ತಿರಸ್ಕೃತಗೊಂಡಿವೆ. ಒಟ್ಟಾರೆಯಾಗಿ ನಮೂನೆ 6, 7 ಮತ್ತು 8ರ ಅಡಿಯಲ್ಲಿ ಒಟ್ಟು 37,679 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 36,792 ಅರ್ಜಿಗಳು ಸ್ವೀಕೃತ ಮತ್ತು 887 ಅರ್ಜಿಗಳು ತಿರಸ್ಕೃತವಾಗಿವೆ ಎಂದು ತಿಳಿಸಿದರು.
279 ಮತಗಟ್ಟೆಗಳ ಸ್ಥಾಪನೆ:
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 279 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಹಿಂದೆ 276 ಮತಗಟ್ಟೆಗಳಿದ್ದವು. 3 ಮತಗಟ್ಟೆಗಳು ಹೆಚ್ಚುವರಿಯಾಗಿ ಸೇರ್ಪಡೆಗೊಂಡಿವೆ. ಒಟ್ಟು 279 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ ಭಾವಚಿತ್ರವಿಲ್ಲದ ಯಾವುದೇ ಮತದಾರರೂ ಇಲ್ಲ. 18 ರಿಂದ 19 ವರ್ಷದೊಳಗಿನ 3,796 ಯುವ ಮತದಾರರು, 80 ವರ್ಷ ಮೇಲ್ಪಟ್ಟ 4,412 ಹಿರಿಯ ಮತದಾರರು, 3,046 ವಿಕಲಚೇತನ ಮತದಾರರಿದ್ದಾರೆ. 49 ಸೇವಾ ಮತದಾರರು ಕ್ಷೇತ್ರದಲ್ಲಿದ್ದಾರೆ ಎಂದು ಅಂಕಿ-ಅಂಶಗಳನ್ನು ನೀಡಿದರು.
ಇಂದಿನಿಂದಲೇ ಜಾರಿಗೆ ಬರುವಂತೆ ಕ್ಷೇತ್ರದಲ್ಲಿ ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮುಂದುವರೆಯಲಿದೆ. ಹೆಸರು ಬಿಟ್ಟು ಹೋದವರು, ಹೊಸ ಮತದಾರರಾಗಿ ಸೇರ್ಪಡೆಗೊಳ್ಳ ಬಯಸುವ ಅರ್ಹತೆ ಹೊಂದಿರುವ ಯುವಜನರು ಸೇರಿದಂತೆ ಅರ್ಹರೆಲ್ಲರೂ ತಮ್ಮ ಹಕ್ಕು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೆ ಹೆಸರು, ವಿವರ ತಿದ್ದುಪಡಿ, ವಿಳಾಸ ಬದಲಾವಣೆಗಳಿಗೆ ಕೂಡ ಅವಕಾಶವಿದೆ. ಕ್ಷೇತ್ರದಲ್ಲಿ ಎಸ್ಐಆರ್ಗೆ ಸಂಬಂಧಿಸಿದಂತೆ ಮೇಲ್ಮನವಿ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು.
27ಕೆಡಿಬಿಪಿ1-
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿ ಮಂಜುನಾಥ್ ಮಾಹಿತಿ ನೀಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.