ಮಲ್ಲರಬಾಣವಾಡಿಯಲ್ಲಿ ಚಿರತೆ ಮರಿ ಪತ್ತೆ

KannadaprabhaNewsNetwork |  
Published : Oct 28, 2026, 01:15 AM IST
ಪೋಟೋ 8 : ಮಲ್ಲರಬಾಣವಾಡಿ ಗ್ರಾಮದಲ್ಲಿ ಚಿರತೆ ಮರಿ ಪತ್ತೆಯಾಗಿರುವುದು | Kannada Prabha

ಸಾರಾಂಶ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯ ಕೃಷಿ ಜಮೀನಲ್ಲಿ ತಿಂಗಳ ಪ್ರಾಯದ ಗಂಡು ಚಿರತೆ ಮರಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ

ದಾಬಸ್‍ಪೇಟೆ: ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿಯ ಕೃಷಿ ಜಮೀನಲ್ಲಿ ತಿಂಗಳ ಪ್ರಾಯದ ಗಂಡು ಚಿರತೆ ಮರಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ರೈತರು ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಪೊದೆಯೊಂದರ ಮಧ್ಯೆ ಸಣ್ಣ ಪ್ರಾಣಿಯೊಂದು ಶಬ್ದ ಮಾಡುತ್ತಿರುವುದು ಗಮನಕ್ಕೆ ಬಂದು, ಹತ್ತಿರ ಹೋಗಿ ನೋಡಿದಾಗ ಅದು ಚಿರತೆ ಮರಿ ಎಂದು ಖಾತರಿಯಾಗಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಧಾವಿಸಿದ ನೆಲಮಂಗಲ ವಲಯದ ಅರಣ್ಯ ಅಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ, ಚಿರತೆ ಮರಿಯನ್ನು ರಕ್ಷಿಸಿ ಪ್ರಸ್ತುತ ಈ ಮರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಆರೈಕೆ ನೀಡಿ, ಹೆಚ್ಚಿನ ರಕ್ಷಣೆ ಹಾಗೂ ತಪಾಸಣೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪುನರ್ವಸತಿ ಕೇಂದ್ರಕ್ಕೆ ರವಾನಿಸಲು ಕ್ರಮ ಕೈಗೊಳ್ಳಲಾಗಿದೆ.

ಕೇವಲ ಒಂದು ತಿಂಗಳ ಮರಿ ಸಿಕ್ಕಿರುವುದರಿಂದ, ಅದರ ತಾಯಿ ಚಿರತೆ ಜಮೀನಿನ ಸುತ್ತಮುತ್ತಲೇ ಎಲ್ಲೋ ಅಡಗಿರುವ ಸಾಧ್ಯತೆ ದಟ್ಟವಾಗಿದೆ. ಕತ್ತಲಾಗುತ್ತಿದ್ದಂತೆ ತಾಯಿ ಚಿರತೆ ಮರಿಯನ್ನು ಹುಡುಕಿಕೊಂಡು ಕೃಷಿ ಭೂಮಿ ಹಾಗೂ ಗ್ರಾಮದೊಳಗೆ ನುಗ್ಗುವ ಭೀತಿ ಎದುರಾಗಿದೆ. ಗ್ರಾಮದಲ್ಲಿ ಚಿರತೆ ಹಾವಳಿ ತಡೆಗಟ್ಟಲು ಮತ್ತು ತಾಯಿ ಚಿರತೆಯನ್ನು ಸೆರೆಹಿಡಿಯಲು ಸೂಕ್ತ ಜಾಗದಲ್ಲಿ ಬೋನು ಅಳವಡಿಸಬೇಕು ಹಾಗೂ ರಾತ್ರಿ ವೇಳೆ ಅರಣ್ಯ ಸಿಬ್ಬಂದಿ ಗಸ್ತು ತಿರುಗಬೇಕು ಎಂದು ಮಲ್ಲರಬಾಣವಾಡಿ ಗ್ರಾಮಸ್ಥರು ತೀವ್ರವಾಗಿ ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡಿಗರ ನೌಕರಿಗಾಗಿ ಮಹಿಷಿ ವರದಿ ಮಂಡಿಸುವಂತೆ ಒತ್ತಾಯ
ಮಹಿಳೆ, ಮಕ್ಕಳ ಸುರಕ್ಷತೇಲಿ ಬೆಂಗ್ಳೂರು 1ನೇ ಸ್ಥಾನ: ಸೀಮಂತ್‌