ಕುಡಿವ ನೀರಿನ ನಿರ್ವಹಣೆಗೆ ₹ 1ಕೋಟಿ: ಸಚಿವ ಲಾಡ್‌

KannadaprabhaNewsNetwork |  
Published : Apr 28, 2026, 02:00 AM IST
ಜಿಲ್ಲಾ ಪಂಚಾಯಿತಿಯಲ್ಲಿ ಸಭೆ ನಡೆಸಿದ ಸಚಿವ ಸಂತೋಷ ಲಾಡ್‌. | Kannada Prabha

ಸಾರಾಂಶ

ಕುಂದಗೋಳ, ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದ ಪ್ರಮುಖ ಕೆರೆಗಳನ್ನು ಮೇ ತಿಂಗಳಲ್ಲಿ ಪೂರ್ಣ ತುಂಬಿಸಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಸಂತೋಷ ಲಾಡ್‌ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ:

ಜಿಲ್ಲೆಯ 15 ಗ್ರಾಮಗಳಿಗೆ 17 ಬೋರ್‌ವೆಲ್‌ ಮೂಲಕ ಕುಡಿಯುವ ನೀರು ನೀಡಲಾಗುತ್ತಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕೆಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೇಸಿಗೆಯಲ್ಲಿ ಎದುರಾಗಿರುವ ಕುಡಿಯುವ ನೀರಿನ ಅಭಾವ ನೀಗಿಸಲು ಸರ್ಕಾರದಿಂದ ₹ 1 ಕೋಟಿ ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ಅನುದಾನ ಬಳಸಲು ತಿಳಿಸಿದರು.

ಕುಂದಗೋಳ, ನವಲಗುಂದ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದ ಪ್ರಮುಖ ಕೆರೆಗಳನ್ನು ಮೇ ತಿಂಗಳಲ್ಲಿ ಪೂರ್ಣ ತುಂಬಿಸಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ 467 ಶುದ್ಧ ಕುಡಿಯವ ನೀರಿನ ಘಟಕಗಳ ಪೈಕಿ 320 ಸುಸ್ಥಿಯಲ್ಲಿದ್ದು ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆ ಗಮನಕ್ಕೆ ತಂದರು. ಆಗ ಸಚಿವರು, ಉಳಿದ ಘಟಕ ದುರಸ್ತಿಗೆ ಶೀಘ್ರ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಜೆಜೆಎಂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಈ ಕುರಿತು ಎಲ್‌ ಆ್ಯಂಡ್‌ ಟಿ ಕಂಪನಿಗೆ ಎಚ್ಚರಿಕೆ ನೀಡುವ ಜತೆಗೆ ₹ 30 ಕೋಟಿ ದಂಡ ವಿಧಿಸಲಾಗಿದೆ. ಮೇ ಅಂತ್ಯದೊಳಗೆ 28 ಗ್ರಾಮಕ್ಕೆ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಿದ್ದಾರೆ. 2027ರ ಮಾರ್ಚ್‌ನಲ್ಲಿ ಎಲ್ಲ ಕಾಮಗಾರಿ ಮುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಜಲಜೀವನ ಮಿಷನ್ ಕಾಮಗಾರಿ ಗುಣಮಟ್ಟದಿಂದ ಮತ್ತು ಒಪ್ಪಂದದಂತೆ ಅನುಷ್ಠಾನ ಆಗುತ್ತಿವೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸಚಿವರು ಸೂಚಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ 43 ಎಂಎಲ್‌ಡಿ ಪ್ರಮಾಣದ ಕುಡಿಯುವ ನೀರಿನ ಸರಬರಾಜು ಆರಂಭವಾಗಿದ್ದು ಮೇ 10ರೊಳಗೆ ಎಲ್ಲ ವಾರ್ಡ್‌ಗಳಿಗೆ 4-5 ದಿನಕ್ಕೆ ನೀರು ಪೂರೈಸಲಾಗುವುದು ಎಂದು ಪಾಲಿಕೆ ಹಾಗೂ ಎಲ್ ಆ್ಯಂಡ್ ಟಿ ಹೇಳಿದೆ. ಅಧಿಕಾರಿಗಳು ಕಾಮಗಾರಿ ಪ್ರಗತಿ ಪರಿಶೀಲಿಸಿ ಜನರಿಗೆ ನಿಯಮಿತವಾಗಿ ಕುಡಿಯುವ ನೀರು ದೊರೆಯುವಂತೆ ಕ್ರಮವಹಿಸಲು ತಿಳಿಸಿದರು.

ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ, ಪ್ರಸಕ್ತ ಸಾಲಿನ ಶಾಲಾ ಫಲಿತಾಂಶ ಉತ್ತಮಪಡಿಸಿದ ಅಧಿಕಾರಿಗಳನ್ನು ಅಭಿನಂದಿಸಿದರು. ಹುಬ್ಬಳ್ಳಿಯ ಚಲವಾದಿ ಓಣಿಯಲ್ಲಿ ಜನರಿಗೆ ಕುಡಿಯಲು ನಿರಂತರ ನೀರು ವ್ಯವಸ್ಥೆ ಕಲ್ಪಿಸಬೇಕು. ಇದು ಡಾ. ಬಿ.ಆರ್. ಅಂಬೇಡ್ಕರ್ ಭೇಟಿ ನೀಡಿದ ಸ್ಥಳವಾಗಿದ್ದು ಈ ಸ್ಥಳದ ಅಭಿವೃದ್ಧಿ ಪಡಿಸಲು ಮತ್ತು ಇಲ್ಲಿನ ನಿವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಪಾಲಿಕೆ ಕ್ರಮವಹಿಸಬೇಕು ಎಂದು ಹೇಳಿದರು.

ಶಾಸಕರಾದ ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ, ವಿಪ ಸದಸ್ಯರಾದ ಸಲೀಂ ಅಹಮ್ಮದ್‌ ಮಾತನಾಡಿದರು. ಜಿಲ್ಲಾಧಿಕಾರಿ ಸ್ನೇಹಲ್. ಆರ್. ಎಸ್ಪಿ ಗುಂಜನ್‌ ಆರ್ಯ, ಪೊಲೀಸ್‌ ಆಯುಕ್ತ ಎನ್. ಶಶಿಕುಮಾರ, ವಾಯವ್ಯ ಸಾರಿಗೆ ಸಂಸ್ಥೆಯ ಎಂಡಿ ಪ್ರಿಯಾಂಗಾ ಎಂ., ಇದ್ದರು. ಮಹೇಶ ಆಧುನಿಕ ಬಸವಣ್ಣ

ಸಭೆಯಲ್ಲಿ ಅಂತರ್ಜಾತಿ ವಿವಾಹ ಪ್ರಸ್ತಾಪಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ದಂಪತಿಗೆ ತಲುಪಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, 1000 ಅರ್ಜಿ ನೋಂದಣಿ ಆಗಿದ್ದು, 350 ಜೋಡಿಗಳಿಗೆ ಪ್ರೋತ್ಸಾಹಧನ ನೀಡಿದೆ. ಉಳಿದ ಜೋಡಿಗಳ ದಾಖಲಾತಿಗಳ ಪರಿಶೀಲನೆ ಹಂತದಲ್ಲಿವೆ. 3 ವರ್ಷದ ಬಾಕಿ ₹ 10 ಕೋಟಿ ನೀಡಬೇಕಿದೆ ಎಂದರು. ವಿಪ ಸದಸ್ಯ ಎಫ್.ಎಚ್. ಜಕ್ಕಪ್ಪನವರ ಮಾತನಾಡಿ, ಮಹೇಶ ಟೆಂಗಿನಕಾಯಿ ಆಧುನಿಕ ಬಸವಣ್ಣ. ಅಂತರ್ಜಾತಿ ವಿವಾಹಗಳ ಬಗ್ಗೆ ಚರ್ಚೆ ಮಾಡಿದ್ದು ಖುಷಿ ತಂದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ. ಅಂಬೇಡ್ಕರ್‌ ಸಮಾನತೆ ನೀಡಿದ ಮಹಾ ನಾಯಕ: ರಾಘವೇಂದ್ರ ಹಿಟ್ನಾಳ
ಕುಡಿಯುವ ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಶಿವರಾಜ ತಂಗಡಗಿ