ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಅಡ್ಡ ಮತದಾನದ ನಿರೀಕ್ಷೆ ಇದೆ. ಸದಸ್ಯರ ಹಾಜರಾತಿ, ಪಕ್ಷದ ಅಧಿಕೃತ ಅಭ್ಯರ್ಥಿ ಪರ ಮತ ಚಲಾಯಿಸಲು ಪಕ್ಷದ ಜಿಲ್ಲಾ ಘಟಕ ವಿಪ್ ಜಾರಿ ಮಾಡಿದೆ ಎಂದು ಮಂಡಲ ಬಿಜೆಪಿ ಅಧ್ಯಕ್ಷ ಬೆಣಕಲ್ ಪ್ರಕಾಶ್ ತಿಳಿಸಿದರು.
ಮೊದಲ ಆವಧಿಯ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ವಿಪ್ ಜಾರಿಗೊಳಿಸಲಾಗಿರಲಿಲ್ಲ. ಸದಸ್ಯರ ಮೇಲೆ ನಂಬಿಕೆ ಇತ್ತು. ಆದರೆ, ಇಬ್ಬರು ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಚಲಾಯಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಪುನಃ ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಈ ಬಾರಿ ಜಿಲ್ಲಾ ಘಟಕ ವಿಪ್ ಜಾರಿಗೊಳಿಸಿದ್ದು, ಚುನಾವಣೆಯ ದಿನ ಸದಸ್ಯರು ಹಾಜರಾಗಿ, ಅಧಿಕೃತ ಅಭ್ಯರ್ಥಿಯ ಪರ ಮತ ಚಲಾಯಿಸಬೇಕು ಎಂದು ಆದೇಶಿಸಿದರು. ವಿಪ್ ಉಲ್ಲಂಘಿಸುವ ಸದಸ್ಯರ ವಿರುದ್ಧ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಕಾಯಿದೆ ಅಡಿ ದೂರು ದಾಖಲಿಸಿ ಸದಸ್ಯರನ್ನು ಅನರ್ಹಗೊಳಿಸುವ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.ನಗರ ಘಟಕದ ಅಧ್ಯಕ್ಷ ಮಂಜುನಾಥ್ ಹಿರೇಮಠ್, ಪುರಸಭೆಯ ಸದಸ್ಯರಾದ ದೀಪಕ್ ಕಠಾರೆ, ನಾಗರಾಜ್ ಜನ್ನು, ನವೀನ್ ಕುಮಾರ್, ಬಣಕಾರ್ ಸುರೇಶ್, ಜೋಗಿ ಹನಮಂತಪ್ಪ, ಮುಖಂಡರಾದ ಸಂದೀಪ್ ಶಿವಮೊಗ್ಗ ಹಾಗೂ ಅಂಬಳಿ ರವೀಂಧ್ರಗೌಡ್ ಇದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ದಿವಾಕರಗೌಡ ಮತ್ತು ಕೋಗಳಿ ಹನಮಂತಪ್ಪ ನಿರ್ವಹಿಸಿದರು.