ಧಾರವಾಡ:
ರೈತರಿಂದ ಖರೀದಿಲಾದ ಹೆಸರು ಕಾಳು ಉತ್ಪನ್ನದ ಗುಣಮಟ್ಟ ಹಾಗೂ ಕಡಲೆ ಕಾಳಿಗೆ ಖಾಲಿ ಚೀಲಗಳ ಕೊರತೆ ವಿಷಯವಾಗಿ ಶಾಸಕ ಎನ್.ಎಚ್. ಕೋನರೆಡ್ಡಿ, ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಏ. 21ರಂದು ಕನ್ನಡಪ್ರಭದಲ್ಲಿ ಪ್ರಕಟಗೊಂಡ "ಖರೀದಿಸಿ ತಿಂಗಳ ಬಳಿಕ ಹೆಸರು ವಾಪಸ್ " ವರದಿಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕೋನರಡ್ಡಿ, ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ನಂತರ ಅವುಗಳ ಗುಣಮಟ್ಟ ಸರಿ ಇಲ್ಲವೆಂದು ವಾಪಸ್ ಕಳುಹಿಸುವುದು ಯಾವ ನ್ಯಾಯ? ಅಧಿಕಾರಿಗಳು ಖರೀದಿ ಕೇಂದ್ರಗಳಲ್ಲಿ ಸರಿಯಾದ ತಪಾಸಣೆ ನಡೆಸದೆ ರೈತರನ್ನು ಅಲೆದಾಡಿಸುತ್ತಿದ್ದಾರೆ. ಈಗ ಗುಣಮಟ್ಟದ ನೆಪ ಹೇಳಿ ರೈತರಿಗೆ ಅನ್ಯಾಯ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಕಳಪೆ ಗುಣಮಟ್ಟದ ನೆಪದಲ್ಲಿ ರೈತರಿಗೆ ಹಣ ಪಾವತಿ ವಿಳಂಬವಾದರೆ ಅಥವಾ ತೊಂದರೆಯಾದರೆ 81 ರೈತರಿಗೆ ಅಧಿಕಾರಿಗಳ ವೇತನವನ್ನೇ ಕಡಿತಗೊಳಿಸಿ ಆ ಹಣವನ್ನು ರೈತರಿಗೆ ನೀಡುವಂತೆ ಶಾಸಕ ಕೋನರೆಡ್ಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಜತೆಗೆ ರೈತರು ಬೆಳೆ ತಂದಾಗ ಅವರಿಗೆ ನೀಡಲು ಖಾಲಿ ಚೀಲಗಳಿಲ್ಲದ ಬಗ್ಗೆಯೂ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರಶ್ನಿಸಿದರು.ಈ ವಿಷಯದ ಗಂಭೀರತೆ ಅರಿತ ಉಸ್ತುವಾರಿ ಸಚಿವ ಸಂತೋಷ ಲಾಡ್, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯು ಜಿಲ್ಲೆಯ ಎಪಿಎಂಸಿಗಳ ಸುಧಾರಣೆಗೆ ಅಗತ್ಯ ಪ್ರಸ್ತಾವನೆ ರೂಪಿಸಬೇಕು. ಪಿಪಿಟಿ ಮೂಲಕ ಇಲಾಖೆಯಿಂದ ಜನಪ್ರತಿನಿಧಿಗಳ ಮುಂದೆ ಪ್ರದರ್ಶನ ನೀಡಿ, ಎಪಿಎಂಸಿಗಳ ಅಭಿವೃದ್ಧಿಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕೆಂದು ವಿವರಿಸಬೇಕು. ಅಗತ್ಯವಿದ್ದಲ್ಲಿ ಸರ್ಕಾರಿಂದ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುವುದು. ಪ್ರತಿ ಬಾರಿ ರೈತರು ತಮ್ಮ ಉತ್ಪನ್ನ ಮಾರಾಟಕ್ಕೆ ಪರದಾಡಬೇಕಾದ ಸ್ಥಿತಿ ಇದೆ. ಎಪಿಎಂಸಿ ಅಧಿಕಾರಿಗಳು ವ್ಯಾಪಾರಸ್ಥರ ಸ್ಥಾನದಲ್ಲಿ ನಿಂತು ಕೆಲಸ ಮಾಡಿದರೆ, ರೈತರ ಉತ್ಪನ್ನಗಳ ಖರೀದಿಗೆ ಬೇಕಾದ ಸೌಲಭ್ಯ ಕಲ್ಪಿಸಿ ಕೊಡಬಹುದು ಎಂದರು.