ಸೋಮರಡ್ಡಿ ಅಳವಂಡಿ
ಜಾತ್ರೆಯ ದಾಸೋಹ ಮಂಟಪದಲ್ಲಿ ಅಂದು ಪ್ರಸಾದ ಸ್ವೀಕರಿಸಿದವರ ಸಂಖ್ಯೆ ಸುಮಾರು 3 ಲಕ್ಷ ಎಂದು ಅಂದಾಜಿಸಲಾಗಿದೆ. ಮುಂಜಾನೆಯಿಂದಲೂ ನಿರೀಕ್ಷೆಗೂ ಮೀರಿ ಭಕ್ತರು ಹರಿದು ಬರುತ್ತಲೇ ಇದ್ದರು. ಮಧ್ಯ ರಾತ್ರಿಯಾದರೂ ಒಂದಿನಿತು ಬಿಡುವಿರಲಿಲ್ಲ. ಸಾಗೋರಾಪಾದಿಯಲ್ಲಿ ಬರುತ್ತಿದ್ದ ಭಕ್ತರನ್ನು ನಿಯಂತ್ರಿಸಲು ಪೊಲೀಸರು, ಸ್ವಯಂಸೇವಕರು, ಕಾರ್ಯಕರ್ತರು ಹರಸಾಹಸ ಪಡಬೇಕಾಯಿತು. ಇಡೀ ಕೊಪ್ಪಳದ ಯಾವುದೇ ಪ್ರದೇಶಕ್ಕೆ ಹೋದರೂ ಟ್ರಾಫಿಕ್ ಜಾಮ್. ಎಲ್ಲಿ ನೋಡಿದರೂ ಜನವೋ ಜನ, ಜಾತ್ರಾ ಮೈದಾನದಲ್ಲೂ ಕಾಲಿಡಲು ಜಾಗವೇ ಇಲ್ಲದಂತಾಗಿತ್ತು.
ನಗರದ ನಾಲ್ಕು ದಿಕ್ಕುಗಳಲ್ಲಿಯೂ ಟ್ರಾಫಿಕ್ ಜಾಮ್ ಆಗಿದ್ದಲ್ಲದೆ, ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದರ್ಶನ ಪಡೆಯಲು ನಾಲ್ಕಾರು ಗಂಟೆಗಳ ಕಾಲ ಭಕ್ತರು ಸರದಿಯಲ್ಲಿ ನಿಲ್ಲಬೇಕಾಯಿತು. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಭಾನುವಾರ ಗವಿಮಠಕ್ಕೆ ಬಂದ ಭಕ್ತರೆಷ್ಟು ಎನ್ನುವ ಕುರಿತು ಚರ್ಚೆ ಆರಂಭವಾಯಿತು.ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತಿರುವ ಎಸ್ಪಿ ಡಾ. ರಾಮ ಎಲ್. ಅರಸಿದ್ದ ಹೇಳುವ ಪ್ರಕಾರ, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನಿರ್ದಿಷ್ಟ ಲೆಕ್ಕಾಚಾರ ಹಾಕುವುದು ಕಷ್ಟ. ಬೆಳಗ್ಗೆಯಿಂದ ತಡರಾತ್ರಿ ವರೆಗೂ ಸಾಗರದಂತೆ ಭಕ್ತರು ಆಗಮಿಸಿದ್ದರಿಂದ ನಿಯಂತ್ರಣ ಮಾಡುವುದೇ ದೊಡ್ಡ ಸವಾಲು ಆಯಿತು ಎನ್ನುತ್ತಾರೆ.
ಡಿವೈಎಸ್ಪಿ ಮುತ್ತಣ್ಣ ಸವರಗೊಳ್ ಅವರು ಹೇಳುವ ಲೆಕ್ಕಾಚಾರ ಹೀಗೆ-ಬೆಳಗ್ಗೆಯಿಂದ ರಾತ್ರಿಯ ವರೆಗೂ ಜನಸಾಗರವೇ ಇತ್ತು. ಇಡೀ ದಿನದ ಲೆಕ್ಕಾಚಾರ ಮಾಡಿದರೆ 9-10 ಲಕ್ಷ ಆಗಿರಬಹುದು ಎನ್ನುತ್ತಾರೆ. ಮಹಾರಥೋತ್ಸವವದಂದೂ ಈ ಪ್ರಮಾಣದ ಸಂಚಾರ ದಟ್ಟಣೆ ಆಗಿರಲಿಲ್ಲ. ನಿಭಾಯಿಸುವುದು ದೊಡ್ಡ ಸವಾಲು ಆಗಿದ್ದರೂ ಎಲ್ಲವೂ ಸುಗಮವಾಯಿತು ಎನ್ನುತ್ತಾರೆ.3 ಲಕ್ಷಕ್ಕೂ ಅಧಿಕ ಭಕ್ತರಿಂದ ಪ್ರಸಾದ ಸ್ವೀಕಾರ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾನುವಾರ 3 ಲಕ್ಷಕ್ಕೂ ಅಧಿಕ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ ಎಂದು ಅಂದಾಜಿಸಲಾಗುತ್ತದೆ. ಜಾತ್ರೆ ಮತ್ತು ಜಾತ್ರೆಯ ಮರು ದಿನಕ್ಕಿಂತಲೂ ಅಧಿಕ ಅಕ್ಕಿ ಬಳಕೆಯಾಗಿದೆ. ಭಾನುವಾರ 125 ಕ್ವಿಂಟಲ್ ಅಕ್ಕಿಯ ಬಳಕೆಯಾಗಿದೆ, ಎರಡೂವರೆಯಿಂದ ಮೂರು ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.
ಗವಿಸಿದ್ಧೇಶ್ವರ ಶ್ರೀಗಳ ದರ್ಶನಕ್ಕೆ ಭಕ್ತರು ನಾಲ್ಕಾರು ಗಂಟೆಗಳ ಕಾಯಬೇಕಾಯಿತು. ಶ್ರೀಗಳು ದರ್ಶನ ನೀಡುವ ಸ್ಥಳ ಬದಲಾಯಿಸಿ, ಗವಿಮಠದ ಗವಿಯ ಬದಲು ಕೆಳಭಾಗದ ವಿಶಾಲ ಸ್ಥಳಕ್ಕೆ ಆಗಮಿಸಿದರು. ಆದರೂ ಶೇಕಡಾ 40-50ರಷ್ಟು ಭಕ್ತರಿಗೆ ಸಮೀಪ ದರ್ಶನ ಸಾಧ್ಯವಾಗಲಿಲ್ಲ. ದೂರದಿಂದಲೇ ಭಕ್ತರು ಕೈಮುಗಿದು ತೆರಳಿದರು.ವಿಶೇಷ ಬಸ್ಸಿನ ವ್ಯವಸ್ಥೆ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದರಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಳ, ಕುಷ್ಟಗಿ, ಗದಗ, ವಿಜಯನಗರ, ಬಳ್ಳಾರಿ ಜಿಲ್ಲೆಗಳಿಂದಲೂ ವಿಶೇಷ ಬಸ್ ಬಿಡಲಾಗಿದೆ. ರೈಲಿನ ಮೂಲಕವೂ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬಂದಿದ್ದವರು ಮರಳಿ ವಾಪಸಾಗಲು ಸಾಧ್ಯವಾಗದೆ ಕೊಪ್ಪಳ ಬಸ್ ನಿಲ್ದಾಣದಲ್ಲಿಯೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಂಗಿದ್ದಾರೆ.
ಬಂದಿರುವ ಭಕ್ತರ ಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕುವುದು ಕಷ್ಟವಾಗುತ್ತದೆ. ಬೆಳಗ್ಗೆಯಿಂದ ಸಂಜೆ ವರೆಗೆ 8-10 ಲಕ್ಷ ಭಕ್ತರು ಆಗಮಿಸಿರಬಹುದು ಎಂದು ಅಂದಾಜಿಸಿದ್ದೇವೆ ಎಂದು ಕೊಪ್ಪಳ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಹೇಳಿದರು.ಹಿಂದಿನ ಎಲ್ಲ ಜಾತ್ರೆಗಳನ್ನು ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ಭಾನುವಾರವಂತೂ ವಿಪರೀತ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು. ಆದರೂ ಶಕ್ತಿಮೀರಿ ಸದ್ಭಕ್ತರು ಸೇವೆ ಮಾಡುತ್ತಿದ್ದಾರೆ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಕಳೆದ 20 ವರ್ಷಗಳಿಂದ ನಾನು ದಾಸೋಹದ ಉಸ್ತುವಾರಿ ನೋಡಿಕೊಳ್ಳುವ ಸೇವೆ ಮಾಡುತ್ತಿದ್ದೇನೆ. ಹಿಂದಿನ ಎಲ್ಲ ಲೆಕ್ಕಾಚಾರವನ್ನು ಮೀರಿ ಭಾನುವಾರ ಭಕ್ತರು ಆಗಮಿಸಿದ್ದರು ಎಂದು ಗವಿಮಠ ಮಹಾದಾಸೋಹದ ಉಸ್ತುವಾರಿ ಪ್ರಕಾಶ ಚಿನಿವಾಲರ್ ಹೇಳಿದರು.