ಕೃಷಿ ಭೂಮಿಯಲ್ಲಿನ ಮರಗಳ ಕಟಾವಿಗೆ ಸರಳ ನಿಯಮಗಳ ರೂಪಿಸಲು ಆಗ್ರಹ

KannadaprabhaNewsNetwork |  
Published : Jan 13, 2026, 02:45 AM IST
ಹಾನಗಲ್ಲಿನಲ್ಲಿ ತಾಲೂಕು ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಅರ್ಪಿಸಿದ ರೈತ ಸಂಘ. | Kannada Prabha

ಸಾರಾಂಶ

ಕೃಷಿ ಭೂಮಿಯಲ್ಲಿನ ಮರಗಳ ಕಟಾವಿಗೆ ಸರಳ ನಿಯಮಗಳನ್ನು ರೂಪಿಸಿ ರೈತರ ಗೋಳನ್ನು ತಪ್ಪಿಸಬೇಕು, ಕಚೇರಿಯಿಂದ ಕಚೇರಿಗೆ ಅಲೆದಾಡಿ ಬೇಸತ್ತು ಹೋಗುವ ರೈತರ ಪಾಲಿಗೆ ಮುಳುವಾದ ಈ ಕಾನೂನು ಬದಲಾಗಬೇಕು ಎಂದು ಅಖಂಡ ಕರ್ನಾಟಕ ರ್ಯಾತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೋತಂಬರಿ ಆಗ್ರಹಿಸಿದರು.

ಹಾನಗಲ್ಲ: ಕೃಷಿ ಭೂಮಿಯಲ್ಲಿನ ಮರಗಳ ಕಟಾವಿಗೆ ಸರಳ ನಿಯಮಗಳನ್ನು ರೂಪಿಸಿ ರೈತರ ಗೋಳನ್ನು ತಪ್ಪಿಸಬೇಕು, ಕಚೇರಿಯಿಂದ ಕಚೇರಿಗೆ ಅಲೆದಾಡಿ ಬೇಸತ್ತು ಹೋಗುವ ರೈತರ ಪಾಲಿಗೆ ಮುಳುವಾದ ಈ ಕಾನೂನು ಬದಲಾಗಬೇಕು ಎಂದು ಅಖಂಡ ಕರ್ನಾಟಕ ರ‍್ಯತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೋತಂಬರಿ ಆಗ್ರಹಿಸಿದರು.ಸೋಮವಾರ ಪಟ್ಟಣದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿದ ಅವರು, ರೈತನ ಸ್ವಂತ ಜಮೀನಿನಲ್ಲಿನ ಗಿಡಗಳನ್ನು ಕಟಾವು ಮಾಡಿ ಕೃಷಿ ಕಾರ್ಯಕ್ಕೆ ಅನುಕೂಲ ಮಾಡಿಕೊಳ್ಳಲು ಈಗಿರುವ ಅರಣ್ಯ ಇಲಾಖೆಯ ಕಾನೂನು ರೈತರನ್ನು ಉಸಿರುಗಟ್ಟಿಸುತ್ತಿದೆ. ಕಟಾವಿಗೆ ಪರವಾನಗಿ ಪಡೆಯಲು ವರ್ಷಗಳೇ ಬೇಕು. ಪರವಾನಗಿ ಪಡೆದ ಮೇಲೂ ಅದನ್ನು ಸಾಗಣೆ ಮಾಡಲು ಮತ್ತೆ ಮತ್ತೆ ಅರಣ್ಯ ಇಲಾಖೆಯ ಮರ್ಜಿ ಕಾಯಬೇಕು. ಇಲ್ಲ ಸಲ್ಲದ ಕಾನೂನುಗಳನ್ನು ಹೇರಿ ರೈತನಿಗೆ ಕಣ್ಣೀರು ತರಿಸುತ್ತಿರುವ ಕಾನೂನುಗಳು ಬದಲಾಗಿ ಸರಳ ನಿಯಮಗಳಲ್ಲಿ ಕೃಷಿ ಭೂಮಿಯಲ್ಲಿ ಗಿಡಗಳ ಕಟಾವಿಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಯಾವುದೋ ಕಾಲದಲ್ಲಿ ಮಾಡಿದ ಕಾನೂನುಗಳನ್ನೇ ಅದರ ತೊಡಕುಗಳ ಬಗೆಗೆ ಮರುಪರಿಶೀಲನೆ ಮಾಡದೇ ಹೋಗಿರುವುದು ನಿಜಕ್ಕೂ ವಿಷಾದದ ಸಂಗತಿ. ಇಂದು ಕೃಷಿ ಕುಟುಂಬಗಳು ಚಿಕ್ಕ ಚಿಕ್ಕವು ಆಗಿ. ಕೃಷಿ ಭೂಮಿಯೂ ಕೂಡ ಹಂಚಿ ಹೋಗಿದೆ. ಇರುವ ಭೂಮಿಯಲ್ಲಿ ಕಾಡು ಮರಗಳು ಬೆಳೆದು ನಿಂತಿವೆ. ಇದರಿಂದ ಕೃಷಿಗೆ ಅನಾನುಕೂಲವಾಗಿದೆ. ಈ ಮರಗಳಡಿ ಬೆಳೆ ಬೆಳೆಯುತ್ತಿಲ್ಲ. ಕೃಷಿಗೂ ಅನಾನುಕೂಲ. ಗಿಡಗಳಿಂದಾಗುವ ಅನಾನುಕೂಲವನ್ನು ಹೋಗಲಾಡಿಸಿಕೊಳ್ಳಲು ಮನವಿ ಮಾಡಿ ಗಿಡ ಕಟಾವಿಗೆ ಪರವಾನಗಿ ಕೇಳಿದಾಗ ಅರಣ್ಯ, ಕಂದಾಯ, ಸರ್ವೆ ಇಲಾಖೆಗಳಿಗೆ ಓಡಾಡಿ ರೈತ ಸಾಕಾಗಿ ಸುಸ್ತಾಗಿ ಗಿಡ ಕಡಿಯುವುದೂ ಬೇಡ. ಈ ಇಲಾಖೆಗಳಿಗೆ ಎಡತಾಕುವ ಉಸಾಬರಿಯೇ ಬೇಡ ಎಂದು ಉಸಿರು ಹಾಕುತ್ತ ನಿರಾಶನಾಗುತ್ತಿದ್ದಾನೆ.ಕೃಷಿಕನ ಹೊಲದಲ್ಲಿ ಬೆಳೆದ ಸಾಗವಾನಿ, ಬೀಟಿ, ಹೊನ್ನಿ, ಮಾವು ಸೇರಿದಂತೆ ವಿವಿಧ ಕಾಡು ಜಾತಿಯ ಮರಗಳನ್ನು ತೆರವು ಮಾಡಲು ಮೇಲಿನ ಇಲಾಖೆಗಳು ಕೇಳುವ ದಾಖಲೆಗಳನ್ನು ಹುಡುಕಿ ಕೊಡುವುದೇ ದೊಡ್ಡ ಸಾಹಸ. ಅವನ್ನು ಹುಡುಕಿ ಕೊಟ್ಟಾದ ಮೇಲೆ ಇಲಾಖೆಯಿಂದ ಇಲಾಖೆ, ಟೇಬಲ್‌ನಿಂದ ಟೇಬಲ್‌ಗೆ ಫೈಲನ್ನು ಸಾಗಿಸುವಾಗಲೇ ಸುಸ್ತಾಗಿ ಹೋಗುವ ರೈತ ತನ್ನ ದುಡಿಮೆಯನ್ನೂ ಬಿಟ್ಟು ಕೂಲಿ ಕಳೆದುಕೊಂಡು, ನಿತ್ಯ ನೂರಾರು ರೂ ಖರ್ಚು ಮಾಡಿಕೊಂಡು ಸಾಕಾಗಿ ಹೋಗುತ್ತಾನೆ. ಏನೆಲ್ಲ ಪ್ರಯತ್ನಗಳನ್ನು ಮಾಡಿ ಅಧಿಕಾರಿಗಳನ್ನು ಕಂಡು ಮನವಿ ಮಾಡಿ ಬೇಡಿಕೊಂಡರೂ ವರ್ಷಗಟ್ಟಲೇ ಪರವಾನಗಿ ಸಿಗುವುದು ಕಷ್ಟವಾಗಿದೆ. ಹಾವೇರಿ ಜಿಲ್ಲೆಯ ಇತರ ತಾಲೂಕುಗಳಿಗಿಲ್ಲದ ಕಠಿಣ ಕಾನೂನು ಇಲ್ಲೇಕೆ ಎಂಬ ಪ್ರಶ್ನೆಯೂ ಇದೆ.ಮರಗಳ ತೆರವಿಗೆ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಕೂಡಲೇ ಹಳೆ ನಿಯಮಗಳನ್ನು ಬದಲಿಸಿ, ಕೃಷಿಕನಿಗೆ ಅನಾನುಕೂಲವಾಗುವುದನ್ನು ತಪ್ಪಿಸಿ ಸುಲಭವಾಗಿ ಒಂದೇ ವಾರದಲ್ಲಿ ಮರ ಕಟಾವಿಗೆ ಪರವಾನಗಿ ಕೊಡುವಂತಾಗಬೇಕು. ತನ್ನ ಕೃಷಿ ಜಮೀನಿನಲ್ಲಿ ಬೆಳೆದ ಮರಗಳನ್ನು ತೆರವುಗೊಳಿಸಲು ಮುಂದಾಗಿ ಅರಣ್ಯ ಅಥವಾ ಇತರ ಇಲಾಖೆಗಳ ಕೈ ಸಿಕ್ಕರೆ ರೈತನ ವಾಹನವೂ ಸೆರೆಯಾಗಿ ರೈತನೂ ಸೆರೆಯಾಗಿ ದಿವಾಳಿಯಾಗುವ ಸ್ಥಿತಿ ಇದೆ. ಇಂತಹ ಭಯಗಳನ್ನು ತಪ್ಪಿಸಿದರೆ, ಕಾನೂನು ಸರಳವಾಗಿದ್ದರೆ ರೈತನೂ ಕೂಡ ಕಾನೂನು ಗೌರವಿಸುತ್ತಾನೆ. ಪಾಲಿಸುತ್ತಾನೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಸದಾನಂದಗೌಡ ಪಾಟೀಲ, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಸವರಾಜ ಯಲಿ, ಪಮ್ಮಣ್ಣ ಮಂತಗಿ, ಅರುಣಕುಮಾರ ಪಾಟೀಲ, ಪ್ರಹ್ಲಾದಬಾಬು ಗೌಳಿ, ಗುಡ್ಡಪ್ಪ ಚನ್ನಮ್ಮನವರ, ಕೃಷ್ಣ ಡೊಳ್ಳೇಶ್ವರ, ಮಾರುತಿ ಶಿಡ್ಲಾಪೂರ, ಶಿವಪ್ಪ ಹಾವಣಗಿ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ