ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರು, ಕೈಗಾರಿಕೋದ್ಯಮಿಗಳು ಹಾಗೂ ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಈ ಕಾರ್ಮಿಕ ಸಂಹಿತೆಗಳ ಬಗ್ಗೆ ಅತ್ಯಂತ ವಿಸ್ತೃತವಾಗಿ ಚರ್ಚಿಸಲಾಗಿದೆ. ಶೇ. 95 ರಾಜ್ಯಗಳು ಕಾರ್ಮಿಕ ಸಂಹಿತೆಗೆ ಒಪ್ಪಿಗೆ ಸೂಚಿಸಿವೆ ಎಂದು ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್‌ಎಂಇ) ಹಾಗೂ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕೇಂದ್ರ ಸರ್ಕಾರ ಅತ್ಯಂತ ಮುಂದಾಲೋಚನೆ ಮಾಡಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿತರಲು ಮುಂದಾಗಿದೆ. ಈ ಸಂಹಿತೆಗಳು ಕೈಗಾರಿಕಾ ಹಾಗೂ ಕಾರ್ಮಿಕ ವಲಯ ಬಲ ಪಡಿಸುತ್ತದೆ. ಅಸಂಘಟಿತ ಕಾರ್ಮಿಕರಿಗೆ ಭದ್ರತೆ ಕಲ್ಪಿಸಲಿದೆ. ಕಾರ್ಮಿಕರಿಗೆ ಸೇವಾ, ವೇತನ, ಸಾಮಾಜಿಕ ಭದ್ರತೆ ಕಲ್ಪಿಸುತ್ತದೆ.
ನಮ್ಮಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿನ ಕಾನೂನುಗಳಿದ್ದವು. ಅವರು ಗುಲಾಮಗಿರಿ, ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಉದ್ದೇಶದಿಂದ ತಂದಂತಹ ಕಾನೂನುಗಳಾಗಿದ್ದವು. ಅವುಗಳನ್ನು ಬದಲಾಯಿಸಿ ನಾಲ್ಕು ಸಂಹಿತೆ ಮಾಡಲಾಗಿದೆ. ಈ ಸಂಬಂಧ ಟ್ರೇಡ್ ಯೂನಿಯನ್‌ಗಳು, ತಜ್ಞರು, ಕೈಗಾರಿಕಾ ಸಂಸ್ಥೆಗಳು ಹೀಗೆ ಬರೋಬ್ಬರಿ 104 ಸಲ ಸಭೆ ನಡೆಸಲಾಗಿದೆ ಎಂದರು.ಶೇ. 95ರಷ್ಟು ರಾಜ್ಯಗಳು ಸ್ವಾಗತಿಸಿದ್ದು, ಉಳಿದ ರಾಜ್ಯಗಳ ವಿಶ್ವಾಸವನ್ನೂ ಪಡೆಯಲಾಗುವುದು. ದೇಶದಲ್ಲಿ 7.40 ಕೋಟಿ ಎಂಎಸ್‌ಎಂಇ ಉದ್ಯಮಿಗಳು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿದ್ದು, 33 ಕೋಟಿ ನೌಕರರಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಸಂಖ್ಯೆ ಇನ್ನೂ ಹೆಚ್ಚಾಗಬೇಕು ಎಲ್ಲರೂ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಲ್ಲ. ದೇಶದ ಒಟ್ಟು ಉತ್ಪಾದನೆಯಲ್ಲಿ ಎಂಎಸ್‌ಎಂಇ ಕೊಡುಗೆ ಶೇ. 45ರಷ್ಟಿದೆ. ಜಿಡಿಪಿಯಲ್ಲೂ ಸಾಕಷ್ಟು ಪಾತ್ರ ಹೊಂದಿವೆ. ದೇಶ ಒಟ್ಟು ಉತ್ಪಾದನೆಯಲ್ಲಿ ಇನ್ನೂ ರಫ್ತಿನಲ್ಲಿಯೂ ಶೇ. 40ರಷ್ಟು ಎಂಎಸ್‌ಎಂಇಗಳ ಕೊಡುಗೆ ಇದೆ ಎಂದರು.
ಸದ್ಯ ವಿಶ್ವದಲ್ಲಿ ಕೃತಕ ಬುದ್ಧಿ ಮತ್ತೆ(ಎಐ), ರೋಬೋಟಿಕ್, ಏರೋಸ್ಪೇಸ್ ಬಹಳ ಬೇಡಿಕೆಗಳಿದ್ದು, ಈ ನಿಟ್ಟಿನಲ್ಲಿ ಎಂಎಸ್‌ಎಂಇಗಳು ಬದಲಾವಣೆಯಾಗಬೇಕಿದೆ. ಜತೆಗೆ ಯುವ ಸಮೂಹಕ್ಕೆ ಅಗತ್ಯಕ್ಕೆ ತಕ್ಕಂತೆ ಉದ್ಯಮ ಸ್ಥಾಪಿಸಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ದೇಶದ ಆಹಾರಕ್ಕೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಆದ್ದರಿಂದ ಆಹಾರ ಸಂಸ್ಕರಣೆ ಮಾಡುವ ಉದ್ಯಮಿಗಳು ಪ್ಯಾಕಿಂಗ್ ಗುಣಮಟ್ಟ ಹಾಗೂ ಮೌಲ್ಯಗಳ ಉತ್ತಮ ಪಡಿಸಿಕೊಳ್ಳಬೇಕಿದೆ. ಸದ್ಯ ದೇಶದಲ್ಲಿ ಗಿಗ್ 5.5 ಲಕ್ಷ ಕಾರ್ಮಿಕರಿದ್ದಾರೆ. ಇನ್ನೂ ಐದು ವರ್ಷದಲ್ಲಿ 25 ಲಕ್ಷಕ್ಕೆ ಮುಟ್ಟುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಅಸಂಘಟಿತ ಕಾರ್ಮಿಕರಿಗೂ ಭದ್ರತೆ ಒದಗಿಸುವ ಕೆಲಸ ಕಾರ್ಮಿಕ ಸಂಹಿತೆ ಮಾಡಲಿದೆ ಎಂದರು. ಸಂಹಿತೆಯಲ್ಲಿ ಮುಂದೆ ಬದಲಾವಣೆಗೂ ಸಾಕಷ್ಟು ಅವಕಾಶವುಂಟು. ಜತೆಗೆ ಆಯಾ ರಾಜ್ಯಗಳಿಗನುಗುಣವಾಗಿ ಅಲ್ಪಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದೆ. ಕಾರ್ಮಿಕ ಮಕ್ಕಳಿಗೆ ವೈದ್ಯಕೀಯ ಸೀಟು ಪಡೆಯಲು ಶೇ.25ರಷ್ಟು ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.
ಕಾರ್ಮಿಕ ಸಂಹಿತೆಗಳ ಬಗ್ಗೆ ಕೈಗಾರಿಕಾ ವಲಯಗಳಲ್ಲಿನ ಕಾರ್ಮಿಕರಿಗೆ ಮನವರಿಕೆ ಮಾಡಿಕೊಡುವ ಕೆಲಸ ಟ್ರೇಡ್ ಯೂನಿಯನ್, ವಾಣಿಜ್ಯೋದ್ಯಮ ಸಂಸ್ಥೆಗಳು ಮಾಡಬೇಕು ಎಂದರು.ಶಾಸಕ ಮಹೇಶ ಟೆಂಗಿನಕಾಯಿ, ಕೈಗಾರಿಕೆ ಹಾಗೂ ಉದ್ಯಮ ವಾತಾವರಣ ಬಲ ಪಡಿಸುವ ನಿಟ್ಟಿನಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಗೆ ತರಲಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಲಿದೆ. ಪಾರದರ್ಶಕ, ಸ್ಥಿರತೆ, ಅನುಷ್ಠಾನ ಭದ್ರತೆ ಸಿದ್ಧಪಡಿಸಿದೆ ಎಂದು ಹೇಳಿದರು.
ಹಿರಿಯ ಕಾರ್ಮಿಕ ಆಯುಕ್ತ ಎಸ್.ಕೆ. ಮೋಹಂತಿ, ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಆರೀಫ್ ಲೋಹಾನಿ, ಪ್ರವೀಣ ಅಗಡಿ, ಪ್ರಕಾಶ ಶೃಂಗೇರಿ, ಸಚಿನ ಮಹೇಂದ್ರಕರ ಇದ್ದರು.