ಬೆಂಗಳೂರು : ನಾಲ್ಕು ದಿನಗಳ ‘ಇನ್ವೆಸ್ಟ್ ಕರ್ನಾಟಕ’ಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ಒಟ್ಟು 10.27 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಹಾಗೂ 6 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ದೊರೆತಿದೆ. ಆ ಪೈಕಿ 6.23 ಲಕ್ಷ ಕೋಟಿ ರು.ಹೂಡಿಕೆಗೆ ಒಡಂಬಡಿಕೆಯಾಗಿದ್ದರೆ, 4.03 ಲಕ್ಷ ಕೋಟಿ ರು. ಮೊತ್ತದ ಹೂಡಿಕೆಯ ಘೋಷಣೆಯಾಗಿದೆ.
ಕಳೆದ ಮಂಗಳವಾರ ಸಂಜೆ ಉದ್ಘಾಟನೆಗೊಂಡ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನೂರಾರು ಸಂಸ್ಥೆಗಳು, 19 ದೇಶದ ಪ್ರತಿನಿಧಿಗಳು, 5 ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳು, 1,800ಕ್ಕೂ ಹೆಚ್ಚಿನ ಎಂಎಸ್‌ಎಂಇಗಳು ಪಾಲ್ಗೊಂಡಿದ್ದವು. 30ಕ್ಕೂ ಹೆಚ್ಚಿನ ಗೋಷ್ಠಿಗಳು ನಡೆದವು. ಜತೆಗೆ, 2025-30ನೇ ಸಾಲಿಗೆ ಕೈಗಾರಿಕಾ ನೀತಿ, ಕ್ಲೀನ್ ಮೊಬಿಲಿಟಿ ನೀತಿ ಬಿಡುಗಡೆ ಮಾಡಲಾಯಿತು. ಕೈಗಾರಿಕಾ ಸ್ಥಾಪನೆಗೆ ವೇಗ ನೀಡಲು ಅಗತ್ಯವಿರುವ ಏಕಗವಾಕ್ಷಿ ತಂತ್ರಾಂಶ, ಎಸ್‌ಎಂಇ ಕನೆಕ್ಟ್ ತಂತ್ರಾಂಶಗಳನ್ನು ಬಿಡುಗಡೆಗೊಳಿಸಲಾಯಿತು. ಜತೆಗೆ, ರಾಜ್ಯದ ಆರ್ಥಿಕತೆಗೆ ಸಹಕರಿಸಿದ ಕೈಗಾರಿಕೋದ್ಯಮಿಗಳಿಗೆ ಇನ್ವೆಸ್ಟ್ ಕರ್ನಾಟಕ ಪ್ರಶಸ್ತಿ, ಎಸ್‌ಎಂಇ ಕನೆಕ್ಟ್ ಪ್ರಶಸ್ತಿ ಹಾಗೂ ನವೋದ್ಯಮಗಳಿಗೆ ವೆಂಚ್ಯುರೈಸ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.10.27 ಲಕ್ಷ ಕೋಟಿ ರು. ಬಂಡವಾಳ:
ನಾಲ್ಕು ದಿನಗಳ ಇನ್ವೆಸ್ಟ್ ಕರ್ನಾಟಕ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರು. ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಅದರಲ್ಲಿ ವಿವಿಧ ಸಂಸ್ಥೆಗಳು 4.03 ಲಕ್ಷ ಕೋಟಿ ರು.ಹೂಡಿಕೆಯ ಬದ್ಧತೆ ಮತ್ತು ಘೋಷಣೆಯನ್ನು ಮಾಡಿದ್ದರೆ, 6.23 ಲಕ್ಷ ಕೋಟಿ ರು. ಹೂಡಿಕೆಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ಹೀಗೆ ಹೂಡಿಕೆಗೆ ಸಂಬಂಧಿಸಿದಂತೆ ಉತ್ಪಾದನಾ ವಲಯದ ಕೋರ್ ವಿಭಾಗದಲ್ಲಿ ಅತಿ ಹೆಚ್ಚು 1.59 ಲಕ್ಷ ಕೋಟಿ ರು. ಹೂಡಿಕೆ ಮಾಡುವ ಭರವಸೆ ದೊರೆತಿದೆ. ಉಳಿದಂತೆ, ಉತ್ಪಾದನಾ ವಲಯದ ಸನ್‌ರೈಸ್ ವಿಭಾಗದಲ್ಲಿ 1.38 ಲಕ್ಷ ಕೋಟಿ ರು.. ಉತ್ಪಾದನಾ ವಲಯದ ಸಾಮಾನ್ಯ ವಿಭಾಗದಲ್ಲಿ 1.05 ಲಕ್ಷ ಕೋಟಿ ರು., ಮೂಲ ಸೌಕರ್ಯ ಮತ್ತು ಕೈಗಾರಿಕೆ ವಿಭಾಗದಲ್ಲಿ 1.07 ಲಕ್ಷ ಕೋಟಿ ರು. ಹಾಗೂ ಸ್ಟಾರ್ಟ್ ಅಪ್ ಕ್ಯಾಪಿಟಲ್‌ನಲ್ಲಿ 89,868 ಕೋಟಿ ರು. ಹೂಡಿಕೆ ಮಾಡುವುದಾಗಿ ಘೋಷಣೆ ಮತ್ತು ಒಡಂಬಡಿಕೆಗಳಾಗಿವೆ. ಈ ಹೂಡಿಕೆಗಳಿಂದ ರಾಜ್ಯದಲ್ಲಿ ಒಟ್ಟಾರೆ 6 ಲಕ್ಷ ಉದ್ಯೋಗ ಸೃಷ್ಟಿಯಾಗುವ ಅಂದಾಜಿದೆ.
ಹೂಡಿಕೆಯಲ್ಲಿ ಜೆಎಸ್‌ಡಬ್ಲ್ಯೂ ಸಮೂಹ ಮುಂಚೂಣಿಯಲ್ಲಿದ್ದು, 1.20 ಲಕ್ಷ ಕೋಟಿ ರು. ಹೂಡಿಕೆ ಭರವಸೆ ನೀಡಿದೆ. ಉಳಿದಂತೆ, ಬಲ್ಡೋಟಾ ಸ್ಟೀಲ್ ಮತ್ತು ಪವರ್ ಸಂಸ್ಥೆ 54 ಸಾವಿರ ಕೋಟಿ ರು., ಮಹೀಂದ್ರಾ ಸಸ್ಟೈನ್ ಸಂಸ್ಥೆ 36 ಸಾವಿರ ಕೋಟಿ ರು., ಹೀರೋ ಫ್ಯೂಚರ್ ಎನರ್ಜೀಸ್ 22 ಸಾವಿರ ಕೋಟಿ ರು, ಸುಜ್ಲಾನ್ ಎನರ್ಜಿ 21,950 ಕೋಟಿ ರು., ಎಪ್ಸಿಲಾನ್ ಸಂಸ್ಥೆ 15,350 ಕೋಟಿ ರು., ಎಮ್ವಿ ಎನರ್ಜಿ 15 ಸಾವಿರ ಕೋಟಿ ರು. ಹಾಗೂ ಲ್ಯಾಮ್ ರಿಸರ್ಚ್ 10 ಸಾವಿರ ಕೋಟಿ ರು. ಬಂಡವಾಳ ಹೂಡಿಕೆಯ ಭರವಸೆ ನೀಡಿವೆ.
ಬಿಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಿಯಾಂಡ್ ಬೆಂಗಳೂರಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅದರಂತೆ ಹೂಡಿಕೆ ಭರವಸೆ ದೊರೆತಿರುವ ಪೈಕಿ ಶೇ. 75ರಷ್ಟು ಬಂಡವಾಳ ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಹೂಡಿಕೆಯಾಗಲಿವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ. 45ರಷ್ಟು ಹೂಡಿಕೆ ಮಾಡುವ ಕುರಿತು ಉದ್ಯಮಿಗಳು ಘೋಷಿಸಿದ್ದಾರೆ.---
ರಕ್ಷಣಾ ಸಚಿವರಿಂದ ರೈಲ್ವೆ ಸಚಿವರವರೆಗೆ:
ಇನ್ವೆಸ್ಟ್ ಕರ್ನಾಟಕಕ್ಕೆ ಮಂಗಳವಾರ ಸಂಜೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು. ಈ ವೇಳೆ ಅನಾರೋಗ್ಯದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೂಡಿಕೆದಾರರನ್ನು ರಾಜ್ಯಕ್ಕೆ ಆಹ್ವಾನಿಸಿದರು. ನಂತರದ ಮೂರು ದಿನವೂ ಕೇಂದ್ರ ಸಚಿವರು ಇನ್ವೆಸ್ಟ್ ಕರ್ನಾಟಕದಲ್ಲಿ ಪಾಲ್ಗೊಂಡು ರಾಜ್ಯದ ಹಿರಿಮೆ, ಕರ್ನಾಟಕದಲ್ಲಿ ಹೂಡಿಕೆ ಏತಕ್ಕಾಗಿ ಮಾಡಬೇಕು ಎಂಬುದನ್ನು ವಿವರಿಸಿದರು. ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಪಾಲ್ಗೊಂಡು ಹೂಡಿಕೆದಾರರ ಸಮಾವೇಶದ ಮಹತ್ವ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಸಹಕಾರ ಘೋಷಿಸಿದರು.
ನಾಲ್ಕೂ ದಿನವೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮಾವೇಶದಲ್ಲಿ ಪಾಲ್ಗೊಂಡು ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು. ಸಚಿವ ಎಂ.ಬಿ. ಪಾಟೀಲ್ ಇನ್ವೆಸ್ಟ್ ಕರ್ನಾಟಕದ ಯಶಸ್ಸಿಗೆ ಕಾರ್ಯ ನಿರ್ವಹಿಸಿದರು. ಉಳಿದಂತೆ ರಾಜ್ಯ ಸರ್ಕಾರದ ಸಚಿವರು ಪ್ರತಿದಿನವೂ ಸಮಾವೇಶದಲ್ಲಿ ಪಾಲ್ಗೊಂಡು ಚಟುವಟಿಕೆಯಲ್ಲಿ ಪಾಲ್ಗೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಸಂಬಂಧ ಗಟ್ಟಿ
ಇನ್ವೆಸ್ಟ್ ಕರ್ನಾಟಕವು ಹೂಡಿಕೆಯನ್ನಷ್ಟೇ ಆಕರ್ಷಿಸದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ರಾಜ್ಯದ ಸಂಬಂಧ ಗಟ್ಟಿಯಾಗುವಂತೆ ಮಾಡಿತು. ಪ್ರಮುಖವಾಗಿ ಜಪಾನ್, ಆಸ್ಟ್ರೇಲಿಯಾ, ಸ್ವಿಟ್ಜರ್‌ಲ್ಯಾಂಡ್, ಜರ್ಮನಿ ಮತ್ತಿತರ ದೇಶಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಪಾಲ್ಗೊಂಡು, ತಮ್ಮ ಸಹಕಾರವನ್ನು ಘೋಷಿಸಿದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜ್ಯದೊಂದಿಗಿನ ತಮ್ಮ ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುವುದಾಗಿ ಭರವಸೆ ನೀಡಿದರು.
ನೆರೆರಾಜ್ಯಗಳ ಜತೆ ಅಲ್ಲ, ವಿದೇಶಗಳ ಜತೆ ಪೈಪೋಟಿ
ಕರ್ನಾಟಕವು ಅಕ್ಕಪಕ್ಕದ ರಾಜ್ಯಗಳ ನಡುವೆ ಪೈಪೋಟಿ ನಡೆಸುತ್ತಿಲ್ಲ. ನಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ನಡೆಸುತ್ತಿದ್ದೇವೆ. ಅದಕ್ಕೆ ಪೂರಕವಾಗಿ ಇನ್ವೆಸ್ಟ್ ಕರ್ನಾಟಕ ಜರುಗಿದ್ದು, ಸಮಾವೇಶವು ಸಂಪೂರ್ಣ ಯಶಸ್ವಿಯಾಗಿದೆ. ಬೆಂಗಳೂರಿಗಿಂತ ರಾಜ್ಯದ ಇತರ ಭಾಗಗಳಿಗೆ ಹೂಡಿಕೆ ಹೆಚ್ಚಾಗಿ ಬಂದಿದೆ. ಆ ಮೂಲಕ ರಾಜ್ಯದ ಕೈಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತಾಗಿದೆ. ದೇಶದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಮತ್ತಷ್ಟು ಹೆಚ್ಚಲಿದೆ.
- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.
ಆರೇಳ ತಿಂಗಳಿಂದ ತಯಾರಿ ಮಾಡಿದ್ದೆವು
ಇನ್ವೆಸ್ಟ್ ಕರ್ನಾಟಕಕ್ಕೆ ಕಳೆದ ಆರೇಳು ತಿಂಗಳಿನಿಂದ ಕೆಲಸ ಮಾಡಲಾಗುತ್ತಿತ್ತು. ಅಮೆರಿಕ, ಇಂಗ್ಲೆಂಡ್, ಜಪಾನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರೋಡ್ ಶೋ ಮಾಡಿ ಹೂಡಿಕೆದಾರರನ್ನು ಸೆಳೆಯಲಾಗಿತ್ತು. ಅದರ ಫಲವಾಗಿ 10.27 ಲಕ್ಷ ಕೋಟಿ ರು. ಹೂಡಿಕೆ ಆಕರ್ಷಿಸಲಾಗಿದೆ ಮತ್ತು 6 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ದೊರೆತಿದೆ. ಅಲ್ಲದೆ, ನೂತನ ಕೈಗಾರಿಕಾ ನೀತಿ ಘೋಷಿಸುವ ಮೂಲಕ ರಾಜ್ಯದ ಕೈಗಾರಿಕಾ ಕ್ಷೇತ್ರವನ್ನು ಮತ್ತಷ್ಟು ಉತ್ತಮಗೊಳ್ಳುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಾಲ್ಕು ದಿನಗಳ ಸಮಾವೇಶ ಸಂಪೂರ್ಣ ಯಶಸ್ವಿಯಾಗಿದೆ.
- ಎಂ.ಬಿ. ಪಾಟೀಲ್, ಕೈಗಾರಿಕಾ ಸಚಿವ
ಯಾವ ಕಂಪನಿ ಎಷ್ಟು ಬಂಡವಾಳ ಹೂಡಿಕೆ?
ಜೆಎಸ್‌ಡಬ್ಲ್ಯು ಗ್ರೂಪ್ ₹1.20 ಲಕ್ಷ ಕೋಟಿಬಲ್ಡೋಟಾ ಸ್ಟೀಲ್- ಪವರ್₹54000 ಕೋಟಿಮಹೀಂದ್ರಾ ಸಸ್ಟೈನ್₹36000 ಕೋಟಿಹೀರೋ ಫ್ಯೂಚರ್ ಎನರ್ಜೀಸ್₹22000 ಕೋಟಿಸುಜ್ಲಾನ್ ಎನರ್ಜಿ₹21950 ಕೋಟಿಎಪ್ಸಿಲಾನ್₹15350 ಕೋಟಿಎಮ್ವಿ ಎನರ್ಜಿ₹15000 ಕೋಟಿಲ್ಯಾಮ್ ರಿಸರ್ಚ್₹10000 ಕೋಟಿ