ಎಂಟು ತಿಂಗಳಲ್ಲಿ 10 ಬಾಣಂತಿಯರು, 194 ಶಿಶುಗಳ ಸಾವು!

KannadaprabhaNewsNetwork | Published : Dec 11, 2024 12:47 AM

ಸಾರಾಂಶ

ಕಳೆದ ಎಂಟು ತಿಂಗಳಲ್ಲಿ ಧಾರವಾಡ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ತು ಬಾಣಂತಿಯರು ಹಾಗೂ 194 ಶಿಶುಗಳು ಮೃತಪಟ್ಟಿದ್ದಾರೆ.

ಧಾರವಾಡ:

ರಕ್ತಸ್ರಾವ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದೇ ಇರುವುದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಇರುವುದು, ವೈದ್ಯರ ನಿರ್ಲಕ್ಷ್ಯವೂ ಸೇರಿದಂತೆ ಹಲವು ಕಾರಣಗಳಿಂದಾಗಿ ಕಳೆದ ಎಂಟು ತಿಂಗಳಲ್ಲಿ ಧಾರವಾಡ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ಹತ್ತು ಬಾಣಂತಿಯರು ಹಾಗೂ 194 ಶಿಶುಗಳು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಹೌದು. ಹುಬ್ಬಳ್ಳಿಯ ಕೆಎಂಸಿಐಆರ್‌ (ಧಾರವಾಡ ಜಿಲ್ಲೆ ಮಾತ್ರ), ಧಾರವಾಡ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಈ ಹಲವು ಕಾರಣಗಳಿಂದಾಗಿ ಇಷ್ಟು ಸಂಖ್ಯೆಯಲ್ಲಿ ಬಾಣಂತಿಯರು ಹಾಗೂ ಮಕ್ಕಳು ಮೃತಪಟ್ಟಿರುವುದು ಜಿಲ್ಲಾ ಆರೋಗ್ಯ ಇಲಾಖೆ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.

ಹೊರ ಜಿಲ್ಲೆ ಸೇರಿ:

ಹುಬ್ಬಳ್ಳಿಯ ಕೆಎಂಸಿಐಆರ್‌ ಆಸ್ಪತ್ರೆಯ ಪಕ್ಕದ ಹಾವೇರಿ, ಗದಗ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಿಂದಲೂ ಹೆರಿಗೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಾಗುತ್ತಾರೆ. ಈ ಪೈಕಿ ಧಾರವಾಡ ಜಿಲ್ಲೆಯ ಹತ್ತು ಬಾಣಂತಿಯರು ಸೇರಿದಂತೆ ಎಂಟು ತಿಂಗಳಲ್ಲಿ ಒಟ್ಟು 23 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಮಾಧಾನದ ಸಂಗತಿ:

ಬಳ್ಳಾರಿ ಬಾಣಂತಿಯರ ಸಾವಿಗೆ ಕಾರಣ ಎನ್ನಲಾದ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಒಂದೇ ಒಂದು ಬಾಣಂತಿಯರ ಸಾವು ಜಿಲ್ಲೆಯಲ್ಲಿ ಆಗಿಲ್ಲ ಎನ್ನುವುದು ಸಮಾಧಾನದ ಸಂಗತಿ. ಧಾರವಾಡ ಜಿಲ್ಲೆಗೆ ಪಶ್ಚಿಮ ಬಂಗಾಲದ ಫಾರ್ಮಾಸೆಟಿಕಲ್‌ ಕಂಪನಿಯೊಂದರಿಂದ ಸರಬರಾಜು ಆದ ರಿಂಗರ್‌ ಲ್ಯಾಕ್ಟೇಟ್‌ ದ್ರಾವಣದಿಂದ ಯಾವುದೇ ಬಾಣಂತಿ ಸಾವನ್ನಪ್ಪಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾಹಿತಿ ನೀಡಿದರು. ಜತೆಗೆ ಈ ದ್ರಾವಣದ ಗುಣಮಟ್ಟದ ಪರಿಶೀಲನೆಗೆ ಜಿಲ್ಲಾ ಔಷಧ ನಿಯಂತ್ರಣ ಘಟಕದಿಂದ ದ್ರಾವಣದ ಮಾದರಿ ಸಂಗ್ರಹಿಸಿ ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಸಂಪೂರ್ಣ ವರದಿಗಾಗಿ ಕಾಯಲಾಗುತ್ತಿದೆ.

ಬಾಣಂತಿಯರು ಪ್ರಮುಖವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೃತರಾಗುವುದು ರಕ್ತಸ್ರಾವದಿಂದ. ಇದರ ಜತೆಗೆ ಹೆರಿಗೆ ಸಮಯದಲ್ಲಿ ಮನೆಯಲ್ಲಿಯೇ ಪ್ರಯತ್ನ ಪಟ್ಟು ಕೊನೆ ಕ್ಷಣದಲ್ಲಿ ಆಸ್ಪತ್ರೆ ಬರುವುದರಿಂದ ರಕ್ತದೊತ್ತಡ ಹೆಚ್ಚಾಗಿ ಸಾವಾಗುವ ಸಂಭವವೂ ಇದೆ. ಇನ್ನು, ಶಿಶು ಮರಣಕ್ಕೆ ಅವಧಿ ಪೂರ್ವ ಹೆರಿಗೆ ಪ್ರಮುಖ ಕಾರಣ ಎಂದು ಹೆರಿಗೆ ತಜ್ಞರಾದ ಡಾ. ಸಂಜೀವ ಕುಲಕರ್ಣಿ ಪತ್ರಿಕೆಗೆ ತಿಳಿಸಿದರು.

ಒಟ್ಟಾರೆ ಬಾಣಂತಿಯರ ಹಾಗೂ ಶಿಶು ಮರಣದಲ್ಲಿ ಖಾಸಗಿ ಆಸ್ಪತ್ರೆಗಿಂತ ಹೆಚ್ಚು ಸರ್ಕಾರಿ ಆಸ್ಪತ್ರೆ ಎನ್ನುವುದು ಮಾತ್ರ ಸತ್ಯ.

Share this article