ಕುಡಿಯುವ ನೀರು ಪೂರೈಕೆಗಾಗಿ ಪ್ರತಿ ಕ್ಷೇತ್ರಕ್ಕೆ 10 ಕೋಟಿ: ಡಿಕೆಶಿ

KannadaprabhaNewsNetwork |  
Published : Mar 04, 2024, 01:15 AM ISTUpdated : Mar 04, 2024, 11:20 AM IST
DK Shivakumar

ಸಾರಾಂಶ

ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಕೋಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕುಡಿಯುವ ನೀರಿನ ಪೂರೈಸಲು ಬೆಂಗಳೂರಿನ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹10 ಕೋಟಿ ನೀಡಲಾಗಿದೆ. ನೀರಿನ ದಂಧೆ ತಡೆಯಲು ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಸರ್ಕಾರದ ಸುಪರ್ದಿಗೆ ಈಗಾಗಲೇ ತೆಗೆದುಕೊಳ್ಳಲಾಗುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ (ಟ್ವಿಟರ್‌) ಪೋಸ್ಟ್‌ ಮಾಡಿ ನೀರಿನ ಸಮಸ್ಯೆಗೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿರುವ ಅವರು, ಬೆಂಗಳೂರಿಗೆ ಎದುರಾಗಿರುವ ನೀರಿನ ಅಭಾವ ನೀಗಿಸಲು ರಾಜ್ಯ ಸರ್ಕಾರ ಕ್ರಮಕೈಗೊಂಡಿದೆ. 

ಕುಡಿಯುವ ನೀರಿನ ದಂಧೆ ತಡೆಯುವ ನಿಟ್ಟಿನಲ್ಲಿ ಕೊಳವೆಬಾವಿ ನೀರು ಪೂರೈಸುವ ಟ್ಯಾಂಕರ್‌ಗಳನ್ನು ಸರ್ಕಾರದ ವಶಕ್ಕೆ ಪಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರು ಜಲ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಹಾಗೂ ಪಾಲಿಕೆ ಅಧಿಕಾರಿಗಳು ಪ್ರತಿನಿತ್ಯ ಸಭೆ ನಡೆಸುತ್ತಿದ್ದಾರೆ. ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳು ಮಾರ್ಚ್ 7ರ ಒಳಗಾಗಿ ವೆಬ್‌ಸೈಟ್‌: https://bbmp.oasisweb.in/TankerManagement/SelfRegistration.aspx ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. 

ಈ ಸಂಬಂಧ ಮಾ.4ರಂದು ಮಧ್ಯಾಹ್ನ 12ಕ್ಕೆ ಬಿಬಿಎಂಪಿ ಆಯುಕ್ತರು, ಬಿಡಬ್ಲ್ಯೂಎಸ್‌ಎಸ್‌ಬಿ ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳು, ತಹಸೀಲ್ದಾರರು, ಬಿಬಿಎಂಪಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಕುಡಿಯುವ ನೀರಿನ ಪೂರೈಕೆಗೆ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹10 ಕೋಟಿ ನೀಡಲಾಗಿದೆ. ನೀರು ಪೂರೈಸುವ ಟ್ಯಾಂಕರ್‌ಗಳು ಸಾರ್ವಜನಿಕರಿಂದ ಮಿತಿ ಮೀರಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರಿಗೆ ಸಹಾಯವಾಗುವ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಭೆಯನ್ನು ಆಯೋಜಿಸಲಾಗಿದೆ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

ನೀರಿನ ಟ್ಯಾಂಕರ್ ಇದೆಯಾ?,ಬಾಡಿಗೆಗೆ ಕೊಡಿ: ಜಲಮಂಡಳಿ

ಕನ್ನಡಪ್ರಭ ವಾರ್ತೆ ಬೆಂಗಳೂರುಸಾರ್ವಜನಿಕ ಹಿತದೃಷ್ಟಿಯಿಂದ ನಗರದ ಬರ ಪರಿಸ್ಥಿತಿಯನ್ನು ನಿಭಾಯಿಸಲು ಬೆಂಗಳೂರು ಜಲಮಂಡಳಿಯು ಮುಂದಾಗಿದ್ದು, ವಾಟರ್‌ ಟ್ಯಾಂಕರ್‌ಗಳನ್ನು ತಿಂಗಳ ಬಾಡಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲಿದೆ.

ನಗರದಲ್ಲಿ ವಾಟರ್‌ ಟ್ಯಾಂಕರ್‌ ಹೊಂದಿರುವ ಮಾಲೀಕರು ತಮ್ಮಲ್ಲಿ ನೀರು ಲಭ್ಯವಿಲ್ಲದೆ, ನಿರುಪಯುಕ್ತವಾಗಿ ನಿಲ್ಲಿಸಿರುವ ವಾಟರ್‌ ಟ್ಯಾಂಕರ್‌ಗಳನ್ನು ಜಲಮಂಡಳಿಗೆ ನೀಡಲು ಇಚ್ಛಿಸಿದ್ದಲ್ಲಿ ಮಂಡಳಿಯು ಸರ್ಕಾರ ನಿಗದಿಪಡಿಸಿರುವ ದರಗಳನ್ವಯ ತಿಂಗಳ ಬಾಡಿಗೆ ಆಧಾರದಲ್ಲಿ ನಿಯೋಜಿಸಿಕೊಳ್ಳಲಿದೆ. 

ನೀರಿನ ಟ್ಯಾಂಕರ್‌ಗಳನ್ನು ನೀಡಬಯಸುವ ಟ್ಯಾಂಕರ್‌ ಮಾಲೀಕರು ಮಂಡಳಿಯ ನೋಡಲ್‌ ಅಧಿಕಾರಿ ಜಯಶಂಕರ್‌, ಮೊಬೈಲ್‌: 98454 44009 ಸಂಪರ್ಕಿಸುವಂತೆ ಬೆಂಗಳೂರು ಜಲಮಂಡಳಿ ಪ್ರಕಟಣೆ ಕೋರಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಠ್ಯೇತರ ಚಟುವಟಿಕೆಗಳಿಗೆ ವಿಟಿಯು ಆದ್ಯತೆ
ಮಸ್ಟ್ 3ನೇ ಪುಟಕ್ಕೆ.... ನೀರಿನ ಹೊಂಡಕ್ಕೆ ಬಿದ್ದು ಯುವಕ ಸಾವು