ಬ್ಯಾಡಗಿ: ಸಾರ್ವಜನಿಕರ ಉಪಯೋಗಕ್ಕೆ ಶೀಘ್ರದಲ್ಲೆ ರು. 10 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಸುಸಜ್ಜಿತವಾದ ನೂತನ ಬಸ್ ನಿಲ್ದಾಣ (ಹೈಟೆಕ್ ಬಸ್ ಟರ್ಮಿನಲ್) ನಿರ್ಮಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಅಗಲೀಕರಣಕ್ಕೆ ಕೈಜೋಡಿಸುತ್ತಿಲ್ಲ: ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದಲ್ಲಿ ಸುಂದರವಾದ ಬಸ್ ನಿಲ್ದಾಣ ಅವಶ್ಯವಿದೆ ಆದರೆ ಮುಖ್ಯರಸ್ತೆಯಲ್ಲಿನ ವ್ಯಾಪಾರಸ್ಥರು ಅಗಲೀಕರಣಕ್ಕೆ ನಮ್ಮೊಂದಿಗೆ ಕೈಜೋಡಿಸುತ್ತಿಲ್ಲ, ಇದರಿಂದ ಬಸ್‌ಗಳ ಸಂಚಾರಕ್ಕೆ ಬಹಳಷ್ಟು ಅನಾನುಕೂಲವಾಗಿದೆ. ತಾಲೂಕು ಮಟ್ಟದ ಎಲ್ಲ ಕಚೇರಿಗಳು ಬಸ್ ನಿಲ್ದಾಣಕ್ಕೆ ಹತ್ತಿರ ಆಗುವುದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನರ ಅನುಕೂಲಕ್ಕಾಗಿ ಮೊದಲಿದ್ದ ಬಸ್ ನಿಲ್ದಾಣವನ್ನೂ ಸಹ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನಷ್ಟು ಎಕ್ಸಪ್ರೆಸ್ ಬಸ್: ಎಕ್ಸಪ್ರೆಸ್ ಬಸ್‌ಗಳು ಮುಖ್ಯರಸ್ತೆಯಲ್ಲಿ ದಾಟಲು ಹರಸಾಹಸಪಡುತ್ತಿದ್ದು ವಿಳಂಬವಾಗಿ ಸಾಗುತ್ತಿವೆ. ಪಟ್ಟಣದ ಹೊರವಲಯದಲ್ಲಿ ಬಸ್‌ನಿಲ್ದಾಣ ಮಾಡುವುದರಿಂದ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಹುಬ್ಬಳಿಯಿಂದ ಬೆಂಗಳೂರು ಕಡೆಗೆ ಸಂಚರಿಸುವವರಿಗೆ ಕಾಕೋಳ ಹಾಗೂ ಮೋಟೆಬೆನ್ನೂರ ಮೂಲಕ ಇನ್ನಷ್ಟು ಎಕ್ಸಪ್ರೆಸ್ ಬಸ್‌ಗಳನ್ನು ಬ್ಯಾಡಗಿ ಪಟ್ಟಣಕ್ಕೆ ಬಂದು ತೆರಳುವಂತೆ ಮಾಡುವುದಾಗಿ ತಿಳಿಸಿದರು.ಡೆಂಘೀ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ಡೆಂಘೀ ಜ್ವರದ ಬಗ್ಗೆ ಯಾವುದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದರೇ ಕ್ರಮ ಅನಿವಾರ್ಯ, ಡೆಂಘೀ ಜ್ವರದ ಕುರಿತು ಯದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು. ಸದರಿ ವಿಷಯದಲ್ಲಿ ತಜ್ಞ ವೈದ್ಯರು ಅದರಲ್ಲೂ ಫಿಜಿಸಿಯನ್‌ಗಳು ಅನಗತ್ಯವಾಗಿ ರಜೆಗೆ ತೆರಳದೇ ಜನರ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು.
ಸೋಲಾರ ಬೇಡ ವಿದ್ಯುತ್ ಕೊಡಿ: ಕೊಳವೆಬಾವಿ ಹಾಕಿಸಿಕೊಂಡಿರುವ ರೈತರಿಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡಿ, ನಿಯಮದಂತೆ ಸೋಲಾರ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಆದರೆ, ಸುಮಾರು 500 ರಿಂದ 600 ಅಡಿಗಳಷ್ಟು ಆಳಕ್ಕೆ ಬೋರವೆಲ್ ಕೊರೆಸಿದ್ದರಿಂದ ನಮ್ಮಲ್ಲಿ ಸದರಿ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ, ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಾಕೀತು ಮಾಡಿದರು.
ಗಮನಕ್ಕೆ ತಂದು ಲ್ಯಾಪಟಾಪ್ ಕೊಡಿ: ಕಾರ್ಮಿಕ ಇಲಾಖೆಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 150 ಫಲಾನುಭವಿಗಳಿಗೆ ಲ್ಯಾಪಟಾಪ್ ಬಂದಿವೆ. ಆದರೆ ಇನ್ನೂ ಹಂಚಿಕೆಯಾಗಿಲ್ಲ, ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇಲಾಖೆಯ ಕಾರ್ಯವೈಖರಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ನನ್ನ ಗಮನಕ್ಕೆ ತಾರದೇ ಏನೊಂದು ವಿತರಿಸದಂತೆ ಎಚ್ಚರಿಕೆ ನೀಡಿದರು.