ಫುಟ್‌ಪಾತ್‌ ತೆರವು, ಪಾರ್ಕಿಂಗ್‌ ಸರಿಪಡಿಸಲು 10 ದಿನ ಗಡುವು

KannadaprabhaNewsNetwork |  
Published : Oct 10, 2026, 02:00 AM IST
ಹಾನಗಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ವಿಠ್ಠಲ ಚೌಗಲಾ ಮಾತನಾಡಿದರು. ವೈ.ಕೆ. ಜಗದೀಶ್, ಕ್ರೈಂ ವಿಭಾಗದ ಪಿಎಸ್‌ಐ ಆರ್.ಸಿ. ಮಂಜುನಾಥ್, ಪರಶುರಾಮ ಪ್ರಭಾಕರ ಇದ್ದರು. | Kannada Prabha

ಸಾರಾಂಶ

ಬಸ್ ನಿಲ್ದಾಣದ ಬದಿಯ ರಸ್ತೆಯನ್ನೂ ಒಳಗೊಂಡು ಪಟ್ಟಣದಲ್ಲಿ ತಡಸ್-ಗೊಂದಿ ಹಾಗೂ ಇತರ ರಸ್ತೆಗಳಲ್ಲಿನ ಫುಟ್‌ಪಾತ್ ತೆರವು ಹಾಗೂ ವಾಹನಗಳ ಪಾರ್ಕಿಂಗ್‌ಗೆ ಸುವ್ಯವಸ್ಥೆ ಕಲ್ಪಿಸಲು ಹತ್ತು ದಿನಗಳ ಕಾಲಾವಕಾಶ ನೀಡುವ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬದ್ಧತೆ ಘೋಷಿಸಿತು.

ಹಾನಗಲ್ಲ: ಬಸ್ ನಿಲ್ದಾಣದ ಬದಿಯ ರಸ್ತೆಯನ್ನೂ ಒಳಗೊಂಡು ಪಟ್ಟಣದಲ್ಲಿ ತಡಸ್-ಗೊಂದಿ ಹಾಗೂ ಇತರ ರಸ್ತೆಗಳಲ್ಲಿನ ಫುಟ್‌ಪಾತ್ ತೆರವು ಹಾಗೂ ವಾಹನಗಳ ಪಾರ್ಕಿಂಗ್‌ಗೆ ಸುವ್ಯವಸ್ಥೆ ಕಲ್ಪಿಸಲು ಹತ್ತು ದಿನಗಳ ಕಾಲಾವಕಾಶ ನೀಡುವ ಮೂಲಕ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ಬದ್ಧತೆ ಘೋಷಿಸಿತು.

ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ವಿಠ್ಠಲ ಚೌಗಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ್ ಫುಟ್‌ಪಾತ್ ತೆರವು ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ವ್ಯವಸ್ಥೆಯನ್ನು ಸಭೆಯ ಮುಂದಿಟ್ಟರು. ಬಸ್ ನಿಲ್ದಾಣದ ಪಕ್ಕದ ಫುಟ್‌ಪಾತ್ ಗೂಡಂಗಡಿಗಳಿಂದ ಮುಚ್ಚಿಹೋಗಿದೆ. ಮಹಾತ್ಮಾಗಾಂಧಿ ವೃತ್ತದಲ್ಲಿ ಅಸ್ತವ್ಯಸ್ತ ವಾಹನ ಪಾರ್ಕಿಂಗ್ ಹಾಗೂ ವಿವಿಧ ವ್ಯಾಪಾರಿಗಳ ಅಂಗಡಿಗಳಿಂದಾಗಿ ರಸ್ತೆ ಸುಗಮ ಸಂಚಾರಕ್ಕೆ ಲಭ್ಯವಾಗುತ್ತಿಲ್ಲ. ಈಗಾಗಲೇ ಸುವ್ಯವಸ್ಥಿತ ಪಾರ್ಕಿಂಗ್‌ಗಾಗಿ ಲೈನೌಟ್ ಹಾಗೂ ಇದಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಅಳವಡಿಸಲು ಟೆಂಡರ್ ನೀಡಲಾಗಿದೆ. ಈಗಾಗಲೇ ಹಿಂದೆ ನಡೆದ ಸಭೆಗಳ ತೀರ್ಮಾನದಂತೆ ವಾಹನಗಳ ಮಾಲೀಕರು, ಚಾಲಕರು, ಫುಟ್‌ಪಾತ್ ಅಂಗಡಿಗಳ ಮಾಲೀಕರು ಪಾರ್ಕಿಂಗ್‌ನ್ನು ನಿಮಾನುಸಾರವಾಗಿ ಕೈಗೊಳ್ಳುವುದು ಹಾಗೂ ಫುಟ್‌ಪಾತ್ ತೆರವುಗೊಳಿಸುವುದು ಅವಶ್ಯವಾಗಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಿಸಿದವರಿಗೆ ನೀಡಲಾಗಿದೆ ಎಂದು ವಿವರಿಸಿದರು.ತಹಸೀಲ್ದಾರ್ ವಿಠ್ಠಲ ಚೌಗಲಾ ಫುಟ್‌ಪಾತ್ ಅತಿಕ್ರಮಣ ಹಾಗೂ ವಾಹನ ನಿಲುಗಡೆ ಸಮಸ್ಯೆ ಕುರಿತು ಸೂಚಿಸಿ, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ಈ ವಿಷಯ ತರಲಾಗಿದ್ದು, ಶೀಘ್ರ ಈ ಕಾರ್ಯ ಅನುಷ್ಠಾನಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಅನಧಿಕೃತ ಪಾರ್ಕಿಂಗ್ ಹಾಗೂ ರಸ್ತೆ ಹಾಗೂ ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವಿಗೆ ಹತ್ತು ದಿನಗಳ ಕಾಲಾವಕಾಶ ನೀಡಲಾಗಿದೆ. ಅದರ ನಂತರ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಲಾಗುತ್ತದೆ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಹಾಗೂ ಫುಟ್‌ಪಾತ್ ಅಂಗಡಿ ಹಾಗೂ ವಾಹನ ಚಾಲಕರ ಸಂಘಗಳ ಅಧ್ಯಕ್ಷರ ಸಭೆಯನ್ನೂ ನಡೆಸಿ ವಾಸ್ತವದ ಅರಿವು ಮೂಡಿಸಲಾಗಿದೆ. ಇಂದಿನ ಸಭೆಯ ತೀರ್ಮಾನಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದರು.ಮಳಿಗೆ ನಿರ್ಮಾಣ: ಶೀಘ್ರದಲ್ಲಿ ಹಾನಗಲ್ಲ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತೆ ೨೦ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಬೀದಿಬದಿ ವ್ಯಾಪಾರಿಗಳು ಆತಂಕ ಪಡುವ ಅಗತ್ಯವಿಲ್ಲ. ಇಲ್ಲಿ ಬಹುದಿನಗಳಿಂದ ಫುಟ್‌ಪಾತ್ ಮೇಲೆ ವ್ಯಾಪಾರ ನಡೆಸುತ್ತಿರುವವರಿಗೆ ಮೊದಲ ಆದ್ಯತೆಯಾಗಿ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ್ ಸಭೆಗೆ ತಿಳಿಸಿದರು.

ವ್ಯಾಪಾರಿಗಳ ಮನವಿ: ಈ ಸಂದರ್ಭದಲ್ಲಿ ಮಾತನಾಡಿದ ಗೂಡಂಗಡಿ ನಡೆಸುತ್ತಿರುವವರು ನಮಗೆ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಲು ಪುರಸಭೆ ಮುಂದಾಗಬೇಕು. ಅಲ್ಲದೇ ಕೆಲವರು ತಳ್ಳುವ ಗಾಡಿಯಲ್ಲಿ ರಸ್ತೆಗಳಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಾರೆ. ಅಂಥವರ ಬಗ್ಗೆ ಪುರಸಭೆ ಕ್ರಮ ಕೈಗೊಳ್ಳಬೇಕು. ವ್ಯಾಪಾರ ಈಗ ಅಷ್ಟಕ್ಕಷ್ಟೇ, ಅದರಲ್ಲೂ ನಮಗೆ ಸ್ಥಳ ಬದಲಾವಣೆಯಾದರೆ ವ್ಯಾಪಾರಕ್ಕೆ ಅನಾನುಕೂಲವಾಗುತ್ತದೆ. ನಾವು ರಸ್ತೆ ಸುರಕ್ಷತೆಗೆ ಹಾಗೂ ಫುಟ್‌ಪಾತ್ ಮೇಲಿನ ಅಂಗಡಿಗಳ ತೆರವಿಗೆ ಪೂರ್ಣ ಸಹಕಾರ ನೀಡುತ್ತೇವೆ. ನಮ್ಮ ಕಷ್ಟಕ್ಕೂ ಅಧಿಕಾರಿಗಳು ಸ್ಪಂದಿಸಬೇಕು ಎಂದು ಬೀದಿಬದಿ ವ್ಯಾಪಾರಿಗಳು ಮನವಿ ಮಾಡಿದರು.

ಸಭೆಯಲ್ಲಿ ಪೊಲೀಸ್ ಅಪರಾಧ ವಿಭಾಗದ ಪಿಎಸ್‌ಐ ಆರ್.ಸಿ.ಮಂಜುನಾಥ್, ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಪರಶುರಾಮ ಪ್ರಭಾಕರ, ವಾಹನ ಚಾಲಕರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಗೌಸ್‌ಮೊಹಿದ್ದೀನ ಸವಣೂರ, ಅಬ್ದುಲ್ ಅತ್ತಾರ, ಎಸ್.ಆರ್.ಗಾಮನಗಟ್ಟಿ, ಎಂ.ಆರ್.ಮಲಗುಂದ, ಅಬ್ದುಲ್‌ಖಾದರ ಅತ್ತಾರ, ಇಮಾಮಸಾಬ ಹುಲಗೂರ, ಮೋದಿನಸಾಬ ನೆಗಳುರ, ಮಹಮ್ಮದ್ ಸಲೀಂ ಮುಂಡರಗಿ, ಆದಮ್‌ಶಾ ಮುಲ್ಲಾ ಸೇರಿದಂತೆ ವಿವಿಧ ಕಾರ್ಮಿಕರ ಸಂಘದ ಸದಸ್ಯರು ಸಭೆಯ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೆಂಡರ್ ನೆಪದಲ್ಲಿ ಮೀನುಗಾರರಿಗೆ ಎನ್‌ಒಸಿಗೆ ತೊಂದರೆ: ಹೋರಾಟದ ಎಚ್ಚರಿಕೆ
ಸಂಕನೂರ ಪರ ರೂಪಾಲಿ ನಾಯ್ಕ ಮತಯಾಚನೆ