ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ : ಶಿವಗಂಗೆ ಹಾಳ್‌ ತೊರೆದ 10 ಕುಟುಂಬ!

KannadaprabhaNewsNetwork |  
Published : Feb 21, 2025, 12:50 AM ISTUpdated : Feb 21, 2025, 12:05 PM IST
ತಾಲೂಕಿನ ಶಿವಗಂಗೆಹಾಳ್ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ಬೇಸತ್ತು ಮನೆಗೆ ಬೀಗ ಹಾಕಿಕೊಂಡು ಹೋಗಿರುವುದು | Kannada Prabha

ಸಾರಾಂಶ

ತಾಲೂಕಿನ ಶಿವಗಂಗೆಹಾಳ್ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ಭಯಗೊಂಡು ಹೆದರಿ 10 ಮನೆಗಳ ಕೂಲಿ ಕಾರ್ಮಿಕರು ತಮ್ಮ ಮನೆಗಳಿಗೆ ಬೀಗ ಜಡಿದು, ಊರುಬಿಟ್ಟಿರುವ ಘಟನೆ ಗುರುವಾರ ಬಯಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಇದು ಬೆಳಕಿಗೆ ಬಂದಿರುವ ಮೊದಲ ಘಟನೆಯಾಗಿದೆ.

 ಚನ್ನಗಿರಿ : ತಾಲೂಕಿನ ಶಿವಗಂಗೆಹಾಳ್ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರ ಕಿರುಕುಳಕ್ಕೆ ಭಯಗೊಂಡು ಹೆದರಿ 10 ಮನೆಗಳ ಕೂಲಿ ಕಾರ್ಮಿಕರು ತಮ್ಮ ಮನೆಗಳಿಗೆ ಬೀಗ ಜಡಿದು, ಊರುಬಿಟ್ಟಿರುವ ಘಟನೆ ಗುರುವಾರ ಬಯಲಾಗಿದೆ. ಚನ್ನಗಿರಿ ತಾಲೂಕಿನಲ್ಲಿ ಇದು ಬೆಳಕಿಗೆ ಬಂದಿರುವ ಮೊದಲ ಘಟನೆಯಾಗಿದೆ.

ಹಳ್ಳಿಗಳ ಬಡಜನರಿಗೆ ₹10ರಿಂದ ₹30-₹40 ಸಾವಿರವರೆಗೆ ವಾರ ಹಾಗೂ ತಿಂಗಳುಗಳ ಕಂತು ಪಾವತಿ ಪದ್ಧತಿಯಲ್ಲಿ ಸಾಲಗಳನ್ನು ನೀಡಲಾಗಿದೆ. ಸಾಲದ ರೂಪದಲ್ಲಿ ಹಣ ನೀಡಿ, ಸಾಲದ ₹1000ಕ್ಕೆ ತಿಂಗಳಿಗೆ ಶೇ.29ರಂತೆ ಬಡ್ಡಿ ಕಟ್ಟಿಸಿಕೊಳ್ಳುತ್ತಿದ್ದರು. ಅಲ್ಲದೇ, ಹೀಗೆ ಸಾಲ ಕೊಟ್ಟಿರುವುದು ಅನಧಿಕೃತ ಮೈಕ್ರೋ ಫೈನಾನ್ಸ್‌ಗಳು ಎಂಬುದು ವಿಶೇಷವಾಗಿದೆ.

ಶಿವಗಂಗಾಹಾಳ್‌ನಲ್ಲಿ ಗುರುವಾರ ಸಾಲ ಪಡೆದವರ ಮನೆಗಳ ಬಳಿಗೆ ಅನಧಿಕೃತ ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರು ಸಾಲ ಕಟ್ಟಿಸಿಕೊಳ್ಳಲು ಬಂದಿದ್ದಾರೆ. ಈ ಬಗ್ಗೆ ಮೊದಲೇ ಮಾಹಿತಿ ಅರಿತಿದ್ದ ರೈತ ಸಂಘದ ಕಾರ್ಯಕರ್ತರು ಗ್ರಾಮಕ್ಕೆ ಭೇಟಿ ನೀಡಿ, ಮೈಕ್ರೋ ಫೈನಾನ್ಸ್‌ ಸಿಬ್ಬಂದಿಯ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಾಗೂ ರೈತ ಸಂಘ ಸದಸ್ಯರ ಮಧ್ಯೆ ಸಾಲ ವಸೂಲಾತಿ ಸಂಬಂಧ ಮಾತಿನ ಚಕಮಕಿ ನಡೆದಿದೆ. ಆಗ ನಲ್ಲೂರು ಪೊಲೀಸ್‌ ಸಿಬ್ಬಂದಿಯೊಬ್ಬರು ಮಧ್ಯೆ ಪ್ರವೇಶಿಸಿ, ಸಾಲ ವಸೂಲಿಗೆ ಬಂದವರ ಮಾಹಿತಿ ಜಾಲಾಡಿದ್ದಾರೆ. ಸಾಲ ಕೊಟ್ಟಿರುವುದು ಅನಧಿಕೃತ ಮೈಕ್ರೋ ಫೈನಾನ್ಸ್‌ಗಳವರು ಎಂಬುದು ಗೊತ್ತಾಗಿದೆ. ಹಣ ಕೊಡದಿದ್ದರೆ ಪೊಲೀಸರಿಗೆ ದೂರು ಕೊಡಬೇಕು, ಹೀಗೆಲ್ಲ ಮನೆಗಳ ಬಳಿಗೆ ಬಂದು ಒತ್ತಾಯಿಸಬಾರದು ಎಂದು ಹೇಳಿಕಳಿಸಿದ್ದಾರೆ. ಈ ಸಂಬಂಧ ಯಾರಿಂದಲೂ ದೂರು ದಾಖಲಾಗಿಲ್ಲ.

ಸೂಕ್ತ ಕಡಿವಾಣ ಹಾಕಲು ಆಗ್ರಹ:

ಚನ್ನಗಿರಿ ತಾಲೂಕು ರೈತ ಸಂಘ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್ ಮಾತನಾಡಿ, ಶಿವಗಂಗೆಹಾಳ್ ಗ್ರಾಮದಲ್ಲಿ 150 ಕೂಲಿ ಕಾರ್ಮಿಕ ಕುಟುಂಬಗಳಿದ್ದು, ಈ ಮನೆಗಳಿಗೆ ಮೈಕ್ರೋ ಫೈನಾನ್ಸ್‌ನವರು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತೇವೆ ಎಂದು ನಂಬಿಸಿ, ಜನರ ಮನವೊಲಿಸಿ ಸಾಲ ನೀಡಿದ್ದಾರೆ. ₹10 ಸಾವಿರದಿಂದ ₹30-₹40 ಸಾವಿರದ ತನಕ ಸಾಲ ನೀಡಿದ್ದಾರೆ. ಅಲ್ಲದೆ, ವಾರದ ಕಂತು, ತಿಂಗಳ ಕಂತುಗಳಲ್ಲಿ ಹಣ ಕಟ್ಟುವಂಥ ಪದ್ಧತಿಯನ್ನು ಕಳೆದ 4-5 ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದಾರೆ. ಇಂತಹ ಕಾನೂನುಬಾಹಿರ ಫೈನಾನ್ಸ್‌ಗಳ ದೌರ್ಜನ್ಯಕ್ಕೆ ತಾಲೂಕು ಆಡಳಿತ ಸೂಕ್ತ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಗ್ರಾಮದ ಲಕ್ಷ್ಮಮ್ಮ ಮತ್ತು ಇತರ ಮಹಿಳೆಯರು ಮಾತನಾಡಿ, ಕೂಲಿ ಸಿಗದ ಕಾರಣ ಸಾಲ ಪಡೆದವರಿಗೆ ಕಂತು ಹಣ ಕಟ್ಟಲು ತಡವಾಗುತ್ತಿದೆ. ಆದರೆ, ಮೈಕ್ರೋ ಫೈನಾನ್ಸ್‌ನವರ ಕಿರುಕುಳದಿಂದಾಗಿ ಅಪರೂಪಕ್ಕೊಮ್ಮೆ ಸಿಗುವ ಕೆಲಸಕ್ಕೂ ಹೋಗಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಯಿಗೆ ಬಂದಂತೆ ನಿಂದಿಸಿ, ಒತ್ತಾಯಿಸುತ್ತ ಮಾನಸಿಕ ಕಿರುಕಿಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಅನಧಿಕೃತ ಮೈಕ್ರೋ ಫೈನಾನ್ಸ್‌ನವರ ದೌರ್ಜನ್ಯಕ್ಕೆ ಹೆದರಿ ಗ್ರಾಮದ 10 ಕುಟುಂಬಗಳು ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಇಂತಹ ಫೈನಾನ್ಸ್ ಗಳ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದರು.

ತಾಲೂಕಿನಲ್ಲಿ ಅನಧಿಕೃತ ಮೈಕ್ರೋ ಫೈನಾನ್ಸ್‌ಗಳು ಬಹಳಷ್ಟಿವೆ. ಇವರ ಕಿರುಕುಳಕ್ಕೆ ಜನರು ಆತ್ಮಹತ್ಯೆಯಂಥ ಅನಾಹುತ ಮಾಡಿಕೊಳ್ಳುವ ಮೊದಲೇ ಅಕ್ರಮ ಫೈನಾನ್ಸ್‌ ಸಂಸ್ಥೆಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರವಿಕುಮಾರ್ ಸೇರಿದಂತೆ ರೈತ ಸಂಘದ ಕಾರ್ಯಕರ್ತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಎಂ.ಎನ್.ಹಳ್ಳಿಯ ಪೀರಾನಾಯ್ಕ್, ಜಿ.ಕೆ.ಹಳ್ಳಿಯ ಪ್ರಭಾಕರ್, ಗಾಣದಕಟ್ಟೆಯ ಆಂಜನೇಯ, ಈರಪ್ಪ, ಮಂಜು, ಪಾಂಡು ಇನ್ನಿತರರು ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು. 

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ