ಶ್ರೀಮಂತ ದೇಗುಲದ 10% ಆದಾಯ ಸರ್ಕಾರಕ್ಕೆ

KannadaprabhaNewsNetwork | Updated : Feb 22 2024, 12:40 PM IST

ಸಾರಾಂಶ

1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸಲು ಮಂಡಿಸಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಈವರೆಗೆ 25 ಲಕ್ಷಕ್ಕಿಂತ ಹೆಚ್ಚು ನಿವ್ವಳ ಆದಾಯ ಹೊಂದಿರುವ ದೇವಾಲಯಗಳಿಂದ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸುತ್ತಿದ್ದ ನಿಯಮಕ್ಕೆ ತಿದ್ದುಪಡಿ ತಂದು 1 ಕೋಟಿ ರು. ಮೀರಿದ ಆದಾಯವುಳ್ಳ ದೇವಾಲಯಗಳಿಂದ ಮಾತ್ರ ಶೇ.10 ರಷ್ಟು ಹಣವನ್ನು ಧಾರ್ಮಿಕ ಪರಿಷತ್‌ ನಿಧಿಗೆ ಸಂಗ್ರಹಿಸಲು ಮಂಡಿಸಿರುವ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕಕ್ಕೆ ಗುರುವಾರ ಅಂಗೀಕಾರ ದೊರೆತಿದೆ.

ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಈವರೆಗೆ ಯಾವ ಸಂಸ್ಥೆಗಳ ಆದಾಯವು 25 ಲಕ್ಷಕ್ಕಿಂತ ಹೆಚ್ಚಿದೆಯೋ ಅವುಗಳ ಆದಾಯದ ಶೇ.10 ರಷ್ಟು ಹಾಗೂ 25 ಲಕ್ಷಕ್ಕಿಂತ ಕಡಿಮೆ ಇರುವ ಸಂಸ್ಥೆಗಳ ಆದಾಯದಿಂದ ಶೇ.5 ರಷ್ಟನ್ನು ಧಾರ್ಮಿಕ ಪರಿಷತ್‌ಗೆ ಸಂಗ್ರಹಿಸಲಾಗುತ್ತಿತ್ತು. 

ಇದೀಗ ಈ ನಿಯಮವನ್ನು ತಿದ್ದುಪಡಿ ಮಾಡಿ 10 ಲಕ್ಷದಿಂದ 1 ಕೋಟಿ ರು.ವರೆಗೆ ಆದಾಯವುಳ್ಳ ಸಂಸ್ಥೆಗಳಿಂದ ಕೇವಲ ಶೇ.5 ರಷ್ಟು ಸಂಗ್ರಹಿಸುವುದು. 1 ಕೋಟಿ ರು.ಗೂ ಹೆಚ್ಚು ಆದಾಯ ಇರುವ ಸಂಸ್ಥೆಗಳಿಂದ ಶೇ.10 ರಷ್ಟು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದರು.

ಈ ಹಣದಿಂದ 40 ಸಾವಿರ ಅರ್ಚಕರಿಗೆ ನೇರವಾಗಿ ಡಿಬಿಟಿ ಮೂಲಕ ವೇತನ, ಆರೋಗ್ಯ ವಿಮೆ ಸೌಲಭ್ಯ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ 5 ಸಾವಿರ ರು.ಗಳಿಂದ 50 ಸಾವಿರ ರು.ವರೆಗೆ ಶಾಲಾ ಶುಲ್ಕ ಸಹಾಯ ಮಾಡಲು ನಿರ್ಧರಿಸಲಾಗಿದೆ. 

ಜತೆಗೆ ಹಿಂದೂ ಧರ್ಮದ ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಈ ಹಣವನ್ನು ಬಳಸಲಾಗುತ್ತದೆ ಎಂದು ಹೇಳಿದರು.ವಿಧೇಯಕದಲ್ಲಿ ಸಂಯೋಜಿತ ಸಂಸ್ಥೆಯ ಸಂದರ್ಭಧಲ್ಲಿ ಹಿಂದೂ ಮತ್ತು ಇತರೆ ಧರ್ಮಗಳೆರಡರಿಂದಲೂ ಸದಸ್ಯರನ್ನು ನೇಮಕ ಮಾಡುವುದು ಹೊಸ ವಿಚಾರವಲ್ಲ. 

ಇದು ಮೊದಲಿನಿಂದಲೂ ಕಾಯ್ದೆಯಲ್ಲಿರುವ ಅಂಶ. ದತ್ತ ಪೀಠ ಹಾಗೂ ತೀರ್ಥಹಳ್ಳಿಯಲ್ಲಿರುವ ಒಂದು ದೇವಸ್ಥಾನ ಸೇರಿದಂತೆ ಎರಡು ಸಂಸ್ಥೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಈ ಬಗ್ಗೆ ಅಪಪ್ರಚಾರ ತರವಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ದೇಗುಲ ಆದಾಯದ ಮೇಲೆ ಕ್ರೂರ ದೃಷ್ಟಿ: ವಿಜಯೇಂದ್ರ
ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮಾದಾಯ ದತ್ತಿಗಳ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸರಣಿ ರೂಪದಲ್ಲಿ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದು ಇದೀಗ ಬೊಕ್ಕಸ ತುಂಬಿಸಿಕೊಳ್ಳಲು ಹಿಂದೂ ದೇವಾಲಯಗಳ ಆದಾಯದ ಮೇಲೂ ವಕ್ರ ದೃಷ್ಟಿ ಬೀರಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿದೆ. 

ಭಕ್ತರ ಹಣದಲ್ಲಿ ಪಾಲು ಕಸಿಯುವ ಬದಲು ‘ಸರ್ಕಾರ ನಡೆಸಲು ನೆರವಾಗಿ’ ಎಂದು ದೇವಸ್ಥಾನಗಳ ಬಳಿ ಗೋಲಕಗಳನ್ನಿಡಲಿ. ಸಹಾನುಭೂತಿ ಮನಸ್ಸಿನ ಭಕ್ತರು ಸರ್ಕಾರಕ್ಕೆ ಕಾಣಿಕೆ ನೀಡಬಹುದು ಎಂದು ತಿರುಗೇಟು ನೀಡಿದ್ದಾರೆ.

ಒಂದು ಕೋಟಿ ರುಪಾಯಿಗೂ‌ ಆದಾಯ ಮೀರಿದ ದೇವಸ್ಥಾನಗಳ ಆದಾಯದ ಶೇ.10 ರಷ್ಟು ಹಣವನ್ನು ಇನ್ನು ಮುಂದೆ ಸರ್ಕಾರ ಬಾಚಿಕೊಳ್ಳಲಿದೆ, ಇದು ದರಿದ್ರತನವಲ್ಲದೇ ಬೇರೇನೂ ಅಲ್ಲ, ಇತರ ಧರ್ಮಗಳ ಆದಾಯದ ಮೇಲಿಲ್ಲದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಎಂಬುದು ಅಸಂಖ್ಯ ಭಕ್ತರ ಪ್ರಶ್ನೆಯಾಗಿದೆ. 

ದೇವರ ಅರಿಕೆ, ಅಭಿವೃದ್ಧಿಗೆ ಭಕ್ತರು ಸಮರ್ಪಿಸುವ ಕಾಣಿಕೆ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಭಕ್ತರಿಗೆ ಅನುಕೂಲ ಕಲ್ಪಿಸುವ ಕಾರ್ಯಕ್ಕೆ ವಿನಿಯೋಗವಾಗಬೇಕು. 

ಬೇರೆ ಕಾರ್ಯಕ್ಕೆ ವಿನಿಯೋಗವಾದರೆ ಜನರ ದೈವ ನಂಬಿಕೆಗಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ವಂಚನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

Share this article