ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, 25 ಲಕ್ಷ ರೊಟ್ಟಿ ಸಂಗ್ರಹ, 25 ಟನ್ ಮಾದಲಿ, 5 ಲಕ್ಷ ಮಿರ್ಚಿ ಭಜ್ಜಿ, ಹೀಗೆ ಗವಿಸಿದ್ಧೇಶ್ವರ ಮಹಾದಾಸೋಹದಲ್ಲಿ ಖಾದ್ಯಗಳ ಪ್ರಮಾಣ ದಾಖಲೆಗಳ ಮೇಲೆ ದಾಖಲೆ ಮಾಡುತ್ತಿದ್ದು, ಈ ವರ್ಷ ಮತ್ತೊಂದು ಸೇರ್ಪಡೆಯಾಗಿದ್ದು, ಅದುವೇ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಸಿದ್ಧಪಡಿಸಲಾಗುತ್ತಿದೆ. ಶನಿವಾರವೇ ಮೈಸೂರು ಪಾಕ್ ಮಾಡುವ ಕಾರ್ಯ ಪ್ರಾರಂಭವಾಗಿದ್ದು, ಎರಡು ದಿನಗಳ ಕಾಲ ನಡೆಯಲಿದೆ.
ಯಾರಿಂದ ಈ ಸೇವೆ: ಕಳೆದ ವರ್ಷ ಹತ್ತು ಲಕ್ಷ ಜಿಲೇಬಿ ತಯಾರು ಮಾಡಿದ್ದ ಸಿಂಧನೂರು ವಿಜಯಕುಮಾರ ಅವರ ಗೆಳೆಯರ ಬಳಗ ಈ ಬಾರಿ ಮೈಸೂರು ಪಾಕ್ ಮಾಡಲು ಮುಂದಾಗಿದೆ.60 ಕ್ವಿಂಟಲ್ ಸಕ್ಕರೆ, 30 ಕ್ವಿಂಟಲ್ ಕಡಲೆ ಹಿಟ್ಟು, 30 ಬ್ಯಾರಲ್ ಒಳ್ಳೆಣ್ಣೆ, 5 ಕ್ವಿಂಟಲ್ ಮೈದಾ, 1 ಕ್ವಿಂಟಲ್ ಯಾಲಕ್ಕಿ, 3 ಕ್ವಿಂಟಲ್ ತುಪ್ಪ ಸೇರಿದಂತೆ ಬರೋಬ್ಬರಿ 150 ಕ್ವಿಂಟಲ್ ಗೂ ಅಧಿಕ ಸಾಮಗ್ರಿ ಬಳಸಲಾಗುತ್ತದೆ. ಸುಮಾರು 100 ಕ್ವಿಂಟಲ್ ಮೈಸೂರು ಪಾಕ್ ಸಿದ್ಧವಾಗುತ್ತದೆ.
ಇದಕ್ಕಾಗಿ ಆದೋನಿ, ಮಸ್ಕಿ, ತಾವರಗೇರಾ ಹಾಗೂ ಗಬ್ಬೂರು ಗ್ರಾಮಗಳ 70 ನುರಿತ ಬಾಣಸಿಗರು ಕೆಲಸ ಮಾಡುತ್ತಿದ್ದಾರೆ. ಸಹಾಯಕ್ಕಾಗಿ ಬರೋಬ್ಬರಿ 100 ಜನರು ಸೇವೆ ಮಾಡುತ್ತಿದ್ದಾರೆ.
ದಾಖಲೆ: ಈ ಹಿಂದೆ ಐದು ಕ್ವಿಂಟಲ್, ಹತ್ತು ಕ್ವಿಂಟಲ್ ಮೈಸೂರ ಪಾಕ್ ಮಾಡಿ ಕೊಡುತ್ತಿದ್ದರು. ಇದೇ ಮೊದಲ ಬಾರಿಗೆ 150 ಕ್ವಿಂಟಲ್ ಗೂ ಅಧಿಕ ಪದಾರ್ಥ ಬಳಕೆ ಮಾಡಿ, 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಮಾಡುತ್ತಿರುವುದು ಹೊಸ ದಾಖಲೆಯಾಗಿದೆ.
ಕಳೆದ ಅನೇಕ ವರ್ಷಗಳಿಂದ ಸೇವೆ ಮಾಡುತ್ತಿದ್ದು, ಪ್ರತಿ ವರ್ಷವೂ ಒಂದಿಲ್ಲೊದು ವಿನೂತನ ಖಾದ್ಯ ಮಾಡುವ ಸಂಪ್ರದಾಯ ಹಾಕಿಕೊಂಡಿದ್ದೇವೆ. ಸ್ನೇಹಿತರು, ಸಿಂಧನೂರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇದಕ್ಕೆ ಕೈಜೋಡಿಸುತ್ತಾರೆ. ಈ ವರ್ಷ 10 ಲಕ್ಷಕ್ಕೂ ಅಧಿಕ ಮೈಸೂರು ಪಾಕ್ ಮಾಡಲಾಗುತ್ತದೆ ಎಂದು ವಿಜಯಕುಮಾರ ಗುಡಿಯಾಳ ತಿಳಿಸಿದ್ದಾರೆ.