ಕೃಷ್ಣ ಎನ್. ಲಮಾಣಿ ಹಂಪಿ
ರಾಜ್ಯ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಕೇರಳ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಹಂಪಿ ಉತ್ಸವಕ್ಕೆ ಬಲ ನೀಡಿದರು. ದೇಶ, ವಿದೇಶಿ ಪ್ರವಾಸಿಗರೊಂದಿಗೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು ಜಿಲ್ಲೆಗಳಿಂದಲೂ ಜನರು ಆಗಮಿಸಿದ್ದರು. ಅದರಲ್ಲೂ ಹೊಸಪೇಟೆ, ಕಮಲಾಪುರ, ಗಂಗಾವತಿ, ಆನೆಗೊಂದಿ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಗಿಣಿಗೇರಾ, ಕಂಪ್ಲಿ, ಕುರುಗೋಡು, ಸಂಡೂರು, ತೋರಣಗಲ್, ಕುಡುತಿನಿ, ಕುರೇಕುಪ್ಪ, ಪಾಪಿನಾಯಕ ನಹಳ್ಳಿ, ಗಾದಿಗನೂರು, ಸೀತಾರಾಂ ತಾಂಡಾ, ಕೆರೆ ತಾಂಡಾ, ಕಡ್ಡಿರಾಂಪುರ, ಹಂಪಿ, ಹೊಸ ಹಂಪಿ, ಹಂಪಿ ಪ್ರಕಾಶ ನಗರದಿಂದಲೂ ಜನರು ಆಗಮಿಸಿ ಹಂಪಿ ಉತ್ಸವಕ್ಕೆ ಮೆರಗು ತಂದರು.
ಹಂಪಿ ಉತ್ಸವದಲ್ಲಿ ಮೊದಲ ದಿನ 2 ಲಕ್ಷ ಜನ ಸೇರಿದ್ದರೆ, ಎರಡನೆ ದಿನ ಮೂರು ಲಕ್ಷ ಜನ ಸೇರಿದ್ದರು. ಮೂರನೇ ದಿನ ಐದು ಲಕ್ಷ ಜನ ಸೇರಿದ್ದರು. ಹಾಗಾಗಿ ಹಂಪಿ ಉತ್ಸವದಲ್ಲಿ ಮೂರು ದಿನಗಳಲ್ಲಿ ಒಟ್ಟಾರೆ ಹತ್ತು ಲಕ್ಷ ಜನ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಈ ಮೂಲಕ ಜಿಲ್ಲಾಡಳಿತದ ಶ್ರಮಕ್ಕೂ ಫಲ ದೊರೆತಿದೆ.ಜಾನಪದ ವಾಹಿನಿ ವೈಭವ: ಹಂಪಿ ಉತ್ಸವದ ಕೊನೇ ದಿನ ಉದ್ದಾನ ವೀರಭದ್ರೇಶ್ವರ ದೇವಾಲಯದಿಂದ ಆರಂಭಗೊಂಡ ಜಾನಪದ ವಾಹಿನಿಯ ಭವ್ಯ ಮೆರವಣಿಗೆ ಹಂಪಿ ಸ್ಮಾರಕಗಳ ಮಧ್ಯದಲ್ಲಿ ನಡೆಯಿತು. ವಿವಿಧ ಕಲಾ ತಂಡಗಳು ಸಾಗಿ ಬಂದುದ್ದನ್ನು ಜನಸ್ತೋಮ ಕಣ್ಣದುಂಬಿಕೊಂಡಿತು. ವಿಜಯನಗರದ ನೆಲದ ಕಲಾಲೋಕವನ್ನು ಇಡೀ ವಿಶ್ವಕ್ಕೆ ಕಲಾವಿದರು ಉಣಬಡಿಸಿದರು. ದೇಸಿ ಕಲೆ ಹಂಪಿಯಲ್ಲಿ ಅನಾವರಣಗೊಳಿಸಿದರು.
ಹಂಪಿಯಲ್ಲಿ ಟ್ರಾಫಿಕ್ ಜಾಮ್: ಹಂಪಿಗೆ ಬರುವ ಎರಡು ಮಾರ್ಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೊಸಪೇಟೆಯಿಂದ ಹಂಪಿಗೆ ಆಗಮಿಸಲು ಜನರು ಹರಸಾಹಸಪಟ್ಟರು. ಹಂಪಿಯ ಕಡ್ಡಿರಾಂಪುರದಿಂದ ಹಂಪಿಯವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದರಲ್ಲೂ ಕಿಲೋ ಮೀಟರ್ ಗಟ್ಟಲೇ ವಾಹನಗಳು ಸಾಲುಗಟ್ಟಿದ್ದವು. ಕಮಲಾಪುರ ಭಾಗದಲ್ಲೂ ವಾಹನಗಳು ಸಾಲುಗಟ್ಟಿದ್ದವು. ಸುಗಮ ಸಂಚಾರಕ್ಕಾಗಿ ಪೊಲೀಸರು ಹರಸಾಹಸ ಪಟ್ಟರು.
ಬಸವಳಿದ ಪೊಲೀಸರು: ಹಂಪಿಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಹರಿದು ಬಂದ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಲ್ಲಿ ಸರಿಯಾಗಿ ನಿದ್ದೆ ಇಲ್ಲದೇ ಡ್ಯೂಟಿ ಮಾಡಿದ ಪೊಲೀಸರು ಬಸವಳಿದರು.
ಹಂಪಿ ಉತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದು ಯಾರೋ ಬೀಡಿ ಸೇದಿ ಎಸೆದಿರಬಹದು ಎಂದು ಪೊಲೀಸರು ಶಂಕಿಸಿದ್ದಾರೆ.
ಹಂಪಿಯಲ್ಲಿ ನಡೆದ ಜಾನಪದ ವಾಹಿನಿ ಮೆರವಣಿಗೆ ವೇಳೆ ಮುಸ್ಲಿಂ ಮಹಿಳೆಯರು ತಾಯಿ ಭುವನೇಶ್ವರಿ ದೇವಿಗೆ ನಮಿಸಿದರು. ಈ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದರು. ವಿಜಯನಗರ ನೆಲದಲ್ಲಿ ನಡೆದ ಜಾನಪದ ವಾಹಿನಿ ಇಡೀ ಜಗತ್ತಿಗೆ ಭಾತೃತ್ವ ಪಾಠವನ್ನೂ ಮಾಡಿತು.