ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಕೀಯ ಜೀವನದ 50 ವರ್ಷಗಳ ಸಾಧನೆ ಸ್ಮರಿಸುವ ಅಭಿನಂದನೋತ್ಸವ ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದು, ಹತ್ತು ಲಕ್ಷ ಸೇರುವ ನಿರೀಕ್ಷೆ ಇದೆ ಎಂದು ಮಾಜಿ ವಿಪ ಸದಸ್ಯ ಅರುಣ್ ಶಹಪೂರ ಹೇಳಿದ್ದಾರೆ.
ಯಡಿಯೂರಪ್ಪ ಕರ್ನಾಟಕದ ಧೀಮಂತ ನಾಯಕರು. ರಾಜ್ಯದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್ ಮಂಡಿಸಿದವರಾಗಿದ್ದು, ಕೃಷಿ, ತೋಟಗಾರಿಕೆ, ವಿದ್ಯುತ್, ಪಶುಸಂಗೋಪನೆ ಸೇರಿದಂತೆ ಏಳು ಪ್ರಮುಖ ವಲಯಗಳಲ್ಲಿ ಗಮನಹರಿಸಿ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಬಲ ತುಂಬಿದ ನಾಯಕರು. ಭಾಗ್ಯಲಕ್ಷ್ಮಿ ಯೋಜನೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಸೇರಿದಂತೆ ಅನೇಕ ಜನಪರ ಯೋಜನೆ ಜಾರಿಗೆ ತಂದಿದ್ದು, ಉತ್ತರ ಕರ್ನಾಟಕದ ಹಲವು ನೀರಾವರಿ ಯೋಜನೆಗಳಿಗೂ ಆದ್ಯತೆ ನೀಡಿದವರಾಗಿದ್ದಾರೆ. ಯಡಿಯೂರಪ್ಪ ಅವರು ನಡೆದು ಬಂದ ದಾರಿ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.
ಈ ಅಭಿನಂದನೋತ್ಸವವನ್ನು ಬಿಎಸ್‌ವೈ ಅಭಿಮಾನೋತ್ಸವ ಸಮಿತಿಯಿಂದ ಆಯೋಜಿಸಲಾಗುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಹತ್ತು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.ಸಮಾವೇಶದಲ್ಲಿ ಯಡಿಯೂರಪ್ಪ ಸಾಧನೆ ಅನಾವರಣ ಮಾಡುವ ಮತ್ತು ಅವರಂತಹ ವಿಚಾರಧಾರೆ ಬಿತ್ತಿ ಬೆಳೆಯುವಂತಾಗಬೇಕಾಗಿದೆ. ಈ ದಿಸೆಯಲ್ಲಿ ಜಾಗೃತಿಯನ್ನುಂಟು ಮಾಡುವ ಉದ್ಧೇಶ ಹೊಂದಲಾಗಿದೆ ಎಂದರು.
ಎಂಎಲ್ಸಿ ಹೇಮಲತಾ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುಮಾರ ಗುಳಗಣ್ಣವರ, ಡಾ. ಬಸವರಾಜ ಕ್ಯಾವಟರ್, ಶಿವಪ್ಪ ವಾದಿ, ವೀರೇಶ್ ಸಜ್ಜನ್ ಸೇರಿದಂತೆ ಹಲವರು ಇದ್ದರು.