ನವಲಗುಂದ:
ಬಸ್ತಿ ಪ್ಲಾಟ್‍ನ ವಿದ್ಯಾಜ್ಯೋತಿ ವಸತಿ ಶಾಲೆಯ 4ನೇ ತರಗತಿ ವಿದ್ಯಾರ್ಥಿ, ಶಾನವಾಡ ಗ್ರಾಮದ ನಿವಾಸಿ ಆಕಾಶ ವಸಂತ ನೀಲಣ್ಣವರ (10) ಎಂಬಾತನೇ ಶಾಲಾ ಕಟ್ಟಡದಿಂದ ಬಿದ್ದು ಮೃತಪಟ್ಟವನು. ಮೃತ ವಿದ್ಯಾರ್ಥಿಯ ತಂದೆ ವಸಂತ ಅವರು, ತನ್ನ ಮಗ ಶಿಕ್ಷಕರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವಸತಿ ಶಾಲೆಯ ಮುಖ್ಯಸ್ಥ ಭರತೇಶ ಕುರುಬರ ವಿರುದ್ಧ ನವಲಗುಂದ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದೇ ಶೈಕ್ಷಣಿಕ ವರ್ಷದಿಂದ ನವಲಗುಂದ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ತಾಲೂಕಿನ ಶಾನವಾಡ ಗ್ರಾಮದ ಆಕಾಶ ಪ್ರವೇಶ ಪಡೆದಿದ್ದ. ಶಾಲೆಯ ಶಿಕ್ಷಕ ಹಾಗೂ ಮುಖ್ಯಸ್ಥ ಭರತೇಶ ಕುರುಬರ ಮೃತ ಬಾಲಕನ ತಂದೆಗೆ ಫೋನ್ ಮಾಡಿ ತಮ್ಮ ಮಗ ಆಕಾಶ ಶಾಲಾ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದಾನೆ. ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಬನ್ನಿ ಎಂದು ತಿಳಿಸಿದ್ದಾರೆ. ಪಾಲಕರು ಆಗಮಿಸಿ ಸರ್ಕಾರಿ ಆಸ್ಪತ್ರೆಯಿಂದ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಹೀಗೆ ಹೋಗುವಾಗ ಆಕಾಶನ ತಲೆಗೆ ತೀವ್ರ ಪೆಟ್ಟಾಗಿದ್ದನ್ನು ಗಮನಿಸಿ ಏನಾಯಿತು ಏಕೆ ಬಿದ್ದಿಯಾ ಎಂದು ತಂದೆ ಪ್ರಶ್ನಿಸಿದ್ದಾರೆ. ಆಗ ತನ್ನ ತಂದೆ ಎದುರಿಗೆ ಭರತೇಶ ಅವರು ತನಗೆ ಹೊಡೆದಿದ್ದಾರೆ. ಇದರಿಂದ ಪೆಟ್ಟಾಗಿದೆ ಎಂದು ತಿಳಿಸಿದ್ದಾನೆ ಎಂದು ದೂರಿನಲ್ಲಿದೆ ನಂತರ ಬಾಲಕನನ್ನು ಹುಬ್ಬಳ್ಳಿ ಕೆಎಂಸಿಆರ್‌ಐಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾನೆ. ತನ್ನ ಮಗನ ಸಾವಿಗೆ ವಸತಿ ಶಾಲೆಯ ಶಿಕ್ಷಕ ಹಾಗೂ ಮುಖ್ಯಸ್ಥನಾದ ಭರತೇಶ ಅವರೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಮೃತ ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತ ವಿದ್ಯಾರ್ಥಿಯ ಪಾಲಕರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ತಿಳಿಸಿದರು.
ಇದ್ದೊಬ್ಬ ಮಗ ಉತ್ತಮ ಶಿಕ್ಷಣ ಪಡೆಯಲೆಂಬ ಉದ್ದೇಶದಿಂದ ತಾಲೂಕಿನ ಶಾನವಾಡ ಗ್ರಾಮದಿಂದ ನವಲಗುಂದ ಪಟ್ಟಣದ ಖಾಸಗಿ ಶಾಲೆಗೆ ಸೇರಿಸಲಾಗಿತ್ತು, ಆದರೆ, ಶಿಕ್ಷಕರ ಬೇಜವಾಬ್ದಾರಿ ವರ್ತನೆಯಿಂದಾಗಿ ತಮ್ಮ ಮಗ ಮೃತ ಪಟ್ಟಿರುವುದಾಗಿ ಮೃತ ವಿದ್ಯಾರ್ಥಿಯ ತಂದೆ ವಸಂತ, ತಾಯಿ ದೀಪಾ ಹಾಗೂ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು. ಇತ್ತ ವಸತಿ ಶಾಲೆಯಲ್ಲಿನ ಪಾಲಕರಿಂದ ದೂರವಿರುವ ಇತರೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳೂ ಆತಂಕದಿಂದ ಅಳುತ್ತಿರುವ ದೃಶ್ಯ ಕರಳು ಚುರ್ರ ಎನ್ನುವಂತಿತ್ತು.