ಅಂಜನಾದ್ರಿ ಅಭಿವೃದ್ಧಿಗೆ ಪ್ರತಿ ವರ್ಷ 100 ಕೋಟಿ ರೂ.: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Mar 12, 2024 2:02 AM

ಸಾರಾಂಶ

ರಾಮಾಯಣ ಪ್ರಸಿದ್ಧಿ ಪಡೆದ ಆನೆಗೊಂದಿಯ ಅಂಜನಾದ್ರಿ ಅಭಿವೃದ್ಧಿಗೆ ಪ್ರತಿ ವರ್ಷವೂ ₹ನೂರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು.

ಆನೆಗೊಂದಿಯ ಉತ್ಸವಕ್ಕೆ ವಿದ್ಯುಕ್ತ ಚಾಲನೆ

ರಾಜಾ ಶ್ರೀರಂಗದೇವರಾಯಲು ವೇದಿಕೆ, ಆನೆಗೊಂದಿ

ಕನ್ನಡಪ್ರಭ ವಾರ್ತೆ ಗಂಗಾವತಿ/ಕನಕಗಿರಿ

ರಾಮಾಯಣ ಪ್ರಸಿದ್ಧಿ ಪಡೆದ ಆನೆಗೊಂದಿಯ ಅಂಜನಾದ್ರಿ ಅಭಿವೃದ್ಧಿಗೆ ಪ್ರತಿ ವರ್ಷವೂ ₹ನೂರು ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಆನೆಗೊಂದಿಯ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿ ಸೋಮವಾರ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯ ಆಂಜನೇಯಸ್ವಾಮಿ ಪ್ರದೇಶದ ಅಭಿವೃದ್ಧಿಗೆ ವರ್ಷಕ್ಕೆ ₹ನೂರು ಕೋಟಿಯಂತೆ ಐದು ವರ್ಷಕ್ಕೆ 500 ಕೋಟಿ ಅನುದಾನ ಬಜೆಟ್‌ನಲ್ಲಿ ಘೋಷಿಸಲಾಗುವುದು. ಇದಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಸಮ್ಮತಿಸಿದ್ದಾರೆ ಎಂದರು.

ಆನೆಗೊಂದಿ ಐತಿಹಾಸಿಕ ಸ್ಥಳವಾಗಿದೆ. ಜಿಲ್ಲಾಡಳಿತದಿಂದ ಐತಿಹಾಸಿಕ ಪ್ರದೇಶಗಳನ್ನು ಗುರುತಿಸಲಾಗಿದೆ. ಸಿಎಂ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ರೈಸ್ ಟೆಕ್ನಾಲಜಿ ಪಾರ್ಕ್‌ ನಿರ್ಮಾಣವಾಗಿದೆ. ಆನೆಗೊಂದಿ ಉತ್ಸವ ಮಾಡಿದರೆ ಸಾಲದು. ಇಲ್ಲಿಯ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ. ಬರುವ ವರ್ಷ ಕುಷ್ಟಗಿ ತಾಲೂಕಿನ ಪುರ ಉತ್ಸವ ಮಾಡಲಾಗುತ್ತದೆ ಎಂದು ತಿಳಿಸಿದರು.

ವೇದಿಕೆಗೆ ರಾಜವಂಶಸ್ಥರಾಗಿದ್ದ ರಾಜಾ ಶ್ರೀರಂಗದೇವರಾಯಲು ಹೆಸರಿಟ್ಟಿರುವುದು ಶ್ಲಾಘನೀಯ. ಅಂಜನಾದ್ರಿಗೆ ರೋಪ್‌ವೇ ಆಗಬೇಕಾಗಿದೆ ಎಂದರು.

ಐಪಿಎಲ್ ಕ್ರಿಕೆಟಿಗ:

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತಾರೂ ಅವರಿಗೆ ಬೆಂಬಲ ನೀಡುವುದು ನನ್ನ ಧರ್ಮವಾಗಿದ್ದು, ನನ್ನ ರಾಜಕೀಯ ಐಪಿಎಲ್ ಕ್ರಿಕೆಟಿಗನಾಗುವಂತೆ ಮಾಡಿದೆ. ಸಿದ್ದರಾಮಯ್ಯ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ಐದು ವರ್ಷಗಳಲ್ಲಿ ₹500 ಕೋಟಿ ನೀಡುವುದಾಗಿ ಮಾತು ಕೊಟ್ಟಿದೆ. ಆನೆಗೊಂದಿ ಉತ್ಸವ ನಡೆಸಲು ₹2.5 ಕೋಟಿ ನೀಡಿದ್ದಾರೆ. ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಸಹಕರಿಸುತ್ತಿದೆ. ಕೇಂದ್ರ ಸರ್ಕಾರವೂ ಹನುಮನ ಜನ್ಮ ಸ್ಥಳಕ್ಕೆ ₹2 ಸಾವಿರ ಕೋಟಿ ನೀಡಿದರೆ ನಾನು ನರೇಂದ್ರ ಮೋದಿಯವರ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.

ಅಲ್ಲದೇ ನಾನು ಚುನಾವಣೆಗೆ ಮೊದಲು ಆನೆಗೊಂದಿಗೆ ಬಂದು ವಾಸಿಸಲು ಬಂದಿದ್ದೆ. ಆದರೆ ಕೊರೋನಾ ವಕ್ಕರಿಸಿದ್ದರಿಂದ ಇಲ್ಲಿಗೆ ಬರಲಾಗಲಿಲ್ಲ. ಆದರೂ ಮನಸ್ಸು ಈ ಪ್ರದೇಶಕ್ಕೆ ಎಳೆಯುತ್ತಿತ್ತು. ಕೊನೆಗೂ ಹನುಮನ ಪಾದ ಹಿಡಿದು ಚರಿತ್ರೆ ಸೃಷ್ಟಿ ಮಾಡುವ ರೀತಿ ಅನುಗ್ರಹಿಸುವಂತೆ ಪ್ರಾರ್ಥಿಸಿದ್ದೇನೆ. ಅದಾಗ್ಯೂ ನನಗೆ ದೊಡ್ಡ ಅಧಿಕಾರ ಬೇಕಿಲ್ಲ. ಜನಸೇವೆ ಮಾಡಲು ಗಂಗಾವತಿ ಕ್ಷೇತ್ರದ ನನ್ನನ್ನು ಶಾಸಕರನ್ನಾಗಿ ಮಾಡಿದ್ದಾರೆ. ಇನ್ನೂ ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಮತ ಹಾಕಿರುವೆ ಎಂದು ತಿಳಿಸಿದ ರೆಡ್ಡಿ, ಮಾಜಿ ಶಾಸಕರಾಗಿದ್ದ ಶ್ರೀರಂಗದೇವರಾಯಲು ಅವರನ್ನು ನೆನೆದು ಭಾವುಕರಾದರು.

ಸಂಸದ ಕರಡಿ ಸಂಗಣ್ಣ ಮಾತನಾಡಿ, ಆನೆಗೊಂದಿ ವಿಜಯನಗರದ ತೊಟ್ಟಿಲು ಎನಿಸಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಎರಡು ಉತ್ಸವವನ್ನು ಆಚರಿಸಿ ಬೆಳಕಿಗೆ ತಂದಿದ್ದಾರೆ. ರೈಲ್ವೆ ಮಾರ್ಗವಾಗಿದ್ದರಿಂದ ಸಾಕಷ್ಟು ಪ್ರವಾಸಿಗರು ಬರುತ್ತಿದ್ದಾರೆ. ಆನೆಗೊಂದಿ ಪೂಜ್ಯನೀಯ ಸ್ಥಳವಾಗಿದೆ. 34 ಕಿಮೀ ಅಗಳಕೇರಾದಿಂದ ಮರಳಿ ಠೋಲ್ ಗೇಟ್‌ನವರಿಗೂ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತದೆ ಎಂದರು.

ವಿರೋಧ ಪಕ್ಷದ ಮುಖ್ಯ ಸಚಿತೇಕ ದೊಡ್ಡನಗೌಡ ಮಾತನಾಡಿ, ಆನೆಗೊಂದಿ ಐತಿಹಾಸಿಕ ಪ್ರದೇಶವಾಗಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಸಚಿವ ಶಿವರಾಜ ತಂಗಡಗಿ ಉತ್ಸವದಲ್ಲಿ ತಾರತಮ್ಯ ಮಾಡಿದ್ದಾರೆ. ಕನಕಗಿರಿ ಉತ್ಸವಕ್ಕೆ ನೀಡಿದ ಪ್ರಾಧಾನ್ಯತೆ ಆನೆಗೊಂದಿ ಉತ್ಸವಕ್ಕೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ನಲಿನ್ ಅತುಲ್, ಆನೆಗೊಂದಿಯಲ್ಲಿ ಐತಿಹಾಸಿಕ ಕುರುಹುಗಳಿವೆ. ಬಾಳೆ, ತೆಂಗು, ಭತ್ತ ಬೆಳೆಯುವ ಈ ನಾಡು ವಿಜಯ ನಗರದ ರಾಜಧಾನಿ ಎನಿಸಿಕೊಂಡಿತ್ತು. ಇಂತಹ ಐತಿಹಾಸಿಕ ಸ್ಥಳದಲ್ಲಿ ಆನೆಗೊಂದಿ ಉತ್ಸವ ನಡೆಯುತ್ತಿರವುದು ಹೆಮ್ಮೆಯ ವಿಷಯವಾಗಿದೆ. ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಸರ್ವರು ಭಾಗವಹಿಸಬೇಕೆಂದು ಕೋರಿದರು.

ಈ ವೇಳೆ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಎಸ್ಪಿ ಯಶೋದಾ ವಂಟಗೋಡಿ, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ, ಗ್ರಾಪಂ ಅಧ್ಯಕ್ಷೆ ಮಹಾದೇವಿ, ಉಪಾಧ್ಯಕ್ಷೆ ಪೂರ್ಣಿಮಾ ಸೇರಿದಂತೆ ಇತರರು ಇದ್ದರು.

Share this article