ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯ ಸರ್ಕಾರ ಮಾಲಿ ಮತ್ತು ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಿ ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಹೂಗಾರ ಸಮಾಜ ಸೇವಾ ಸಂಘ ನೇತೃತ್ವದಲ್ಲಿ ಮಂಗಳವಾರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಅಖಂಡ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಂಗಮೇಶ ಹೂಗಾರ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಲಿ, ಮಾಲಗಾರ ಹಾಗೂ ಹೂಗಾರ ಅಭಿವೃದ್ಧಿ ನಿಗಮ ಸ್ಥಾಪಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಅಧ್ಯಕ್ಷರನ್ನು ನೇಮಿಸಿಲ್ಲ, ಸಮುದಾಯದ ಅಭಿವೃದ್ಧಿಗಾಗಿ ನಿಗಮಕ್ಕೆ ಅನುದಾನ ಘೋಷಣೆ ಮಾಡಿಲ್ಲ. ವಿವಿಧ ಉಪನಾಮಗಳಿಂದ ಕರೆಯುವ ಹೂಗಾರ ಪೂಜಾರ, ಪೂಜಾರಿ, ಪುಲಾರಿ, ಮಾಲಿ, ಮಾಲಗಾರ, ಗುರವ, ಹೂವಾಡಿಗ, ಪುಷ್ಪದತ್ತ, ತಾಂಬೋಳಿ ಸಮಾಜ ಅತ್ಯಂತ ಹಿಂದುಳಿದ ಸಮಾಜ. ಅದರಲ್ಲಿ ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದೆ ಹೂಗಾರ ಸಮುದಾಯದ ಅನೇಕರು ಇಂದಿಗೂ ಮೂಲ ವೃತ್ತಿ ಅವಲಂಬಿಸಿದ್ದಾರೆ. ಸಮಾಜದ ಹಿರಿಯರು ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನ ಮಂಡಲದ ಅಧಿವೇಶನ ಆರಂಭವಾಗಿದ್ದು ಹೂಗಾರ ಸಮಾಜದ ಯಾವುದೇ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು. ಬೇಡಿಕೆ ಈಡೇರಿಸಬೇಕು, ಇಲ್ಲದಿದ್ದರೆ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.ಮುಖಂಡರು ಮನವಿ ಪತ್ರವನ್ನು ಗ್ರೇಡ್ 2 ತಹಸೀಲ್ದಾರ್ ಎ.ಕೆ.ಇಂಡಿಕರ ಅವರಿಗೆ ಸಲ್ಲಿಸಿದರು. ಈ ವೇಳೆ ಹೂಗಾರ ಸಮಾಜ ಸೇವಾ ಸಂಘದ ಪ್ರ.ಕಾರ್ಯದರ್ಶಿ ಚಂದ್ರಶೇಖರ ಪೂಜಾರ ಮಾತನಾಡಿ, ಪ್ರತಿ ತಾಲೂಕಿಗೆ ಹೂಗಾರ ಸಮುದಾಯದ ಭವನ ನಿರ್ಮಾಣವಾಗಲಿ, ಹೂಗಾರ ಮಾದಯ್ಯ ಜಯಂತಿ ಆಚರಿಸಿ,ಸಮಾಜದ ಅರ್ಚಕರಿಗೆ ತಸ್ತಿಕ್ ಭತ್ಯೆ, ಪೂಜಾ ವೇತನ ಹೆಚ್ಚಿಸುವಂತೆ ಮನವಿ ಮಾಡಿದರು.
ತಾಲೂಕ ಅಧ್ಯಕ್ಷ ಶ್ರೀಶೈಲ ಗುರವ, ಉಪಾಧ್ಯಕ್ಷ ಹಣಮಂತ ಗುರವ, ಅಶೋಕ ಪೂಜಾರ, ಅಪ್ಪಣ್ಣ ಹೂಗಾರ, ಮಾದೇವ ಪೂಜಾರಿ, ಕಲ್ಲಪ್ಪ ಹೂಗಾರ, ಅಶೋಕ ತಾಬೋಳಿ, ಸಂತೋಷ ಗುರವ, ಮಾದೇವ ತಾಬೋಳಿ ಇತರರು ಇದ್ದರು.