ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲ್ಪುರತಾಲೂಕಿನಲ್ಲಿ ಹದವಾಗಿ ಮಳೆ ಆಗುತ್ತಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಜೀವಕಳೆ ಬಂದಿದೆ. ಈ ಬಾರಿಯ ಹಂಗಾಮಿನಲ್ಲಿ ಉತ್ತಮ ಫಸಲು ಪಡೆಯುವ ನಿರೀಕ್ಷೆಯಲ್ಲಿರುವ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಮಳೆ ಬಿತ್ತಿದ ಬೆಳೆಗಳಿಗೆ ಪೂರಕವಾಗಿದೆ. ಸಕಾಲಕ್ಕೆ ಮುಂಗಾರು ಬಿತ್ತನೆ ಆರಂಭದ ಜೊತೆಗೆ ಉತ್ತಮ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.ಹೆಸರು, ಉದ್ದು ಮತ್ತು ತೊಗರಿ, ಹತ್ತಿ, ಸೇರಿದಂತೆ ವಿವಿಧ ಬೆಳೆಗಳಲ್ಲಿನ ಕಳೆ ತೆಗೆಯುವಲ್ಲಿ ರೈತರು ತೊಡಗಿಸಿಕೊಂಡಿದ್ದಾರೆ.
ತಾಲೂಕಿನ ಮಣ್ಣೂರ ಹೊಸೂರ ಶೇಷಗಿರಿ ರಾಮನಗರ ಶಿವಬಾಳನಗರ ಉಪ್ಪಾರವಾಡಿ ದೇವಪ್ಪನಗರ ದಯಾನಂದನಗರ ಕುಡಗನೂರ ಶಿವೂರ ಉಡಚಣ ಮಾಶಾಳ ಕರಜಗಿ ಭೋಸಗಾ ದುದ್ದುಣಗಿ ಮಂಗಳೂರ ಹಿರಿಯಾಳ ಉಡಚಣ ಅಫಜಲ್ಪುರ ಪಟ್ಟಣ ದಿಕ್ಸಂಗಾ ಕೆ., ತೆಲ್ಲೂಣಗಿ, ಹಿರೇ ಜೇವರ್ಗಿ, ಭಂಕಲಗಾ, ಅಳ್ಳಗಿ, ಬಿ ಗೌರ, ಬಿ ಘತ್ತರಗಾ, ಹಿಂಚಗೇರಾ, ಹವಳಗಾ, ಬಳೂರ್ಗಿ, ಬಡದಾಳ, ರೇವೂರ, ಆನೂರ, ಬಿಲ್ವಾಡ, ತೆಲ್ಲೂರ, ದೇವಲ ಗಾಣಗಾಪುರ ಬಂದರವಾಡ ಹಸರಗುಂಡಗಿ ಅತನೂರ ಚವಡಾಪುರ ಗೊಬ್ಬೂರ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳೆಗಳು ಬೆಳೆದು ನಿಂತಿವೆ.ಬಿತ್ತನೆ ಕಾರ್ಯ ಶೇ.76.8 ರಷ್ಟು ಪೂರ್ಣ: ತಾಲೂಕಿನಾದ್ಯಂತ ಜು.12ನೇ ತಾರೀಕಿನವರೆಗೆ ಮುಂಗಾರು ಬಿತ್ತನೆ ಶೇ.76ರಷ್ಟು ಪೂರ್ಣಗೊಂಡಿದೆ. ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ 106220 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 81652 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 76.8 ರಷ್ಟು ಬಿತ್ತನೆಯಾಗಿದದು, ತೊಗರಿ 65000 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 49762 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ತೊಗರಿ (ನೀರಾವರಿ) 4300 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 700 ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ.
ಹತ್ತಿ (ಖುಷ್ಕಿ) 19074 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 18730 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಹತ್ತಿ ನೀರಾವರಿ 976 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 614 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಬ್ಬು 12800 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಗುರಿ ಹೊಂದಲಾಗಿತ್ತು ಇದರಲ್ಲಿ 14874 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.ಉದ್ದು 200 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 128 ಹೆಕ್ಟೇರ್ ಬಿತ್ತನೆಯಾಗಿದೆ. ಹೆಸರು 925 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 432 ಹೆಕ್ಟೇರ್ ಬಿತ್ತನೆಯಾಗಿದೆ. ಮೆಕ್ಕೆಜೋಳ 490 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು ಇದರಲ್ಲಿ 251 ಹೆಕ್ಟೇರ್ ಬಿತ್ತನೆಯಾಗಿದೆ. ತಾಲೂಕಿನಲ್ಲಿ ಜ.1ರಿಂದ ಜು.12ರ ವರೆಗೆ ವಾಡಿಕೆ ಮಳೆ 190 ಮಿಲಿ ಮೀಟರ್ ಮಳೆ ಬರಬೇಕಾಗಿತ್ತು. ಆದರೆ 354.7 ಮಿಲಿ ಮೀಟರ್ ಮಳೆ ಬಂದಿದೆ. ತಾಲೂಕಿನಲ್ಲಿ ಜು.12ನೇ ತಾರೀಖಿನವರೆಗೆ ವಾಡಿಕೆಗಿಂತ 164 ಮಿಲಿ ಮೀಟರ್ ಹೆಚ್ಚು ಮಳೆ ಬಂದಿದೆ.
ತಾಲೂಕಿನ ಕರಜಗಿ, ಅಫಜಲ್ಪುರ, ಅತನೂರ, ಗೊಬ್ಬೂರ, ರೈತ ಸಂಪರ್ಕ ಕೇಂದ್ರಗಳಲ್ಲಿರುವ ಕೃಷಿ ಅಧಿಕಾರಿಗಳು ರೈತರಿಗೆ ಸಕಾಲಕ್ಕೆ ಬೇಕಾದ ಮಾಹಿತಿ ಮತ್ತು ಸಲಹೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಬೀಜಗಳನ್ನು ಸರ್ಕಾರದ ನಿಯಮದ ಅನ್ವಯ ನೀಡಿದ್ದು, ಬೆಳೆಗಳು ಹೊಲಗಳಲ್ಲಿ ನಳನಳಿಸುತ್ತಿವೆ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಎಸ್ ಎಚ್ ಗಡಗಿಮನಿ..
ಈ ವರ್ಷ ಮುಂಗಾರು ಮಳೆ ಸಕಾಲಕ್ಕೆ ಸುರಿದಿದ್ದರಿಂದ ರೈತರು ಬೇಗನೆ ಬಿತ್ತನೆ ಮಾಡಿದ್ದಾರೆ. ಬೆಳೆಗೆ ತಕ್ಕಂತೆ ಮಳೆಯಾಗಿದ್ದರಿಂದ ಹೊಲಗಳಲ್ಲಿ ಬೆಳೆಗಳು ಚೆನ್ನಾಗಿ ಬೆಳೆಯುತ್ತಿವೆ.- ಅಣ್ಣಪ್ಪ ಬಿಜಾಪುರ, ಭೀಮಣ್ಣ ಹಡಲಗಿ, ರಾಮನಗರ ಗ್ರಾಮದ ರೈತರು