ಅಂಬೇಡ್ಕರ್‌ ನಿಗಮಕ್ಕೆ 100 ರು.ಕೋಟಿ ಕಡಿತ: ಬಿಜೆಪಿ ತೀವ್ರ ಆಕ್ರೋಶ

KannadaprabhaNewsNetwork |  
Published : Mar 06, 2025, 12:32 AM IST

ಸಾರಾಂಶ

ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರು. ಅನುದಾನ ಕಡಿತ ಮಾಡಿರುವ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವಿಧಾನಸಭೆಯಲ್ಲಿ ಬುಧವಾರ ಗದ್ದಲ ಸೃಷ್ಟಿಸಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರು. ಅನುದಾನ ಕಡಿತ ಮಾಡಿರುವ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ವಿಧಾನಸಭೆಯಲ್ಲಿ ಬುಧವಾರ ಗದ್ದಲ ಸೃಷ್ಟಿಸಿತು.

ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್‌ ಕುಮಾರ್‌, ಕಳೆದ 2 ವರ್ಷದಲ್ಲಿ ಅಂಬೇಡ್ಕರ್‌ ನಿಗಮಕ್ಕೆ ಮಂಜೂರು ಮಾಡಿರುವ ಅನುದಾನ ಹಾಗೂ ಬಿಡುಗಡೆ ಮಾಡಿರುವ ಅನುದಾನ ಗಮನಿಸಿದರೆ ದಲಿತರ ಬಗ್ಗೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂಬುದು ಸಾಬೀತಾಗುತ್ತದೆ. 2022-23ರಲ್ಲಿ ನಮ್ಮ ಬಿಜೆಪಿ ಸರ್ಕಾರ 219.75 ಕೋಟಿ ರು. ಬಿಡುಗಡೆ ಮಾಡಿತ್ತು. ಆದರೆ, 2023-24ಕ್ಕೆ ಕಾಂಗ್ರೆಸ್ ಸರ್ಕಾರ ಕೇವಲ 124 ಕೋಟಿ ರು. ಮಂಜೂರು ಮಾಡಿ ಬಿಡುಗಡೆ ಮಾಡಿದೆ. ಇಷ್ಟು ಅನುದಾನ ಕೊರತೆಯಾದರೆ ಯಾವ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.

ಈ ವೇಳೆ ಬಿಜೆಪಿಯ ಹಲವು ಸದಸ್ಯರು ದನಿಗೂಡಿಸಿ, ಅಂಬೇಡ್ಕರ್‌ ನಿಗಮದಂಥ ಪ್ರಮುಖ ನಿಗಮಕ್ಕೆ 100 ಕೋಟಿ ರು. ಅನುದಾನ ಕಡಿತವಾದರೆ ಬೇರೆ ನಿಗಮಗಳ ಪಾಡೇನು? ಎಂದು ಕಿಡಿಕಾರಿದರು.

ವಿಜಯಪುರದಲ್ಲಿ ಭೂ ಒಡೆತನ ಯೋಜನೆ ನೀಡುವಲ್ಲಿಯೇ ಅವ್ಯವಹಾರ ಆಗಿದೆ. 16 ಕೋಟಿ ರು. ಅವ್ಯವಹಾರ ಆಗಿದೆ. ಇಷ್ಟೆಲ್ಲ ಅವ್ಯವಹಾರವಾದರೆ ದಲಿತರು ಹೇಗೆ ಸಹಿಸಬೇಕು

ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ನಿಗಮಗಳಿಗೆ ಹಣವನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಲ್ಲ. ಸೂಕ್ತ ಅನುದಾನ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಇನ್ನು ವಿಜಯಪುರದಲ್ಲಿ ಭೂ ಒಡೆತನ ನೀಡುವ ಕುರಿತು ಸುವರ್ಣ ನ್ಯೂಸ್ ವರದಿ ನೋಡುತ್ತಿದ್ದೇನೆ. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಭೂ ಖರೀದಿ ಪರಿಹಾರ ಹೆಚ್ಚಳಕ್ಕೆ ಕ್ರಮ: ಇನ್ನು ದಲಿತರು ಭೂಮಿ ಒಡೆಯನಾಗುವ ಸಲುವಾಗಿ ಸರ್ಕಾರ 20 ಲಕ್ಷ ರು. ನಿಗದಿ ಮಾಡಿದೆ. ಈಗ 20 ಲಕ್ಷ ರು.ಗಳಿಗೆ ಎಲ್ಲಿ ಜಮೀನು ಖರೀದಿಗೆ ಸಿಗುತ್ತದೆ. ಮಾರ್ಗಸೂಚಿ ದರ ಹೆಚ್ಚಳದಿಂದ ಬೇಕಾಬಿಟ್ಟಿ ಬೆಲೆ ಹೆಚ್ಚಳ ಆಗಿದೆ ಎಂದು ಸುನಿಲ್‌ಕುಮಾರ್‌ ಹೇಳಿದರು.

ಮಹದೇವಪ್ಪ, ಈ ಸಲಹೆ ಸರಿಯಾಗಿದೆ. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹೊರತುಪಡಿಸಿ ಉಳಿದ ಕಡೆ 20 ಲಕ್ಷ ರು. ಮಿತಿ ಹಾಕಲಾಗಿದೆ. ಇದನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ