ಧಾರವಾಡದಲ್ಲಿ ರಸ್ತೆಗಿಳಿಯಲಿವೆ 100 ಇ ಬಸ್‌

KannadaprabhaNewsNetwork |  
Published : Jun 12, 2025, 02:03 AM IST
ಹುಬ್ಬಳ್ಳಿ-ಧಾರವಾಡ ರಸ್ತೆಗಿಳಿಯಲಿರುವ ಇಲೆಕ್ಟ್ರಿಕ್‌ ಬಸ್‌. | Kannada Prabha

ಸಾರಾಂಶ

ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಎಲ್ಲ ಅಂದುಕೊಂಡಂತೆ ಆದರೆ ಕೆಲವೇ ತಿಂಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಇಲೆಕ್ಟ್ರಿಕ್‌ ಬಸ್‌ಗಳು ರಸ್ತೆಗಿಳಿಯಲಿವೆ. ಆ ಮೂಲಕ ಈಗ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಆಗುವ ನಷ್ಟ ತಗ್ಗಲಿದ್ದು, ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ.

ಪ್ರಧಾನ ಮಂತ್ರಿ ಇ-ಬಸ್ (ಪಿಎಂ ಇ-ಬಸ್) ಸೇವಾ ಯೋಜನೆಯಡಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (ವಾಕರಸಾ) ಸಂಸ್ಥೆಯ ಹುಬ್ಬಳ್ಳಿ ಮತ್ತು ಬೆಳಗಾವಿ ನಗರ ಆಯ್ಕೆಯಾಗಿದೆ. ಈ ಎರಡು ನಗರಗಳಿಗೆ ತಲಾ 100 ವಿದ್ಯುತ್ ಬ್ಯಾಟರಿ ಚಾಲಿತ ಬಸ್‌ಗಳ ಪೂರೈಕೆಯಾಗಲಿವೆ. ಎಲೆಕ್ಟ್ರಿಕ್ ಬಸ್‌ಗಳು ಹುಬ್ಬಳ್ಳಿ - ಬೆಳಗಾವಿ ನಗರಗಳಲ್ಲಿ ಸಂಚರಿಸಲಿವೆ. 2017-18 ರಿಂದಲೂ ವಾಕರಸಾ ಸಂಸ್ಥೆ ಇ ಬಸ್ ರಸ್ತೆಗಿಳಿಸುವ ಯೋಜನೆ ರೂಪಿಸಿತ್ತಾದರೂ ಸಾಧ್ಯವಾಗಿರಲಿಲ್ಲ.

ಈ ನಿಟ್ಟಿನಲ್ಲಿ ವಾಕರಸಾ ಸಂಸ್ಥೆ 2023-24ರಲ್ಲಿ ಟೆಂಡ‌ರ್ ಪ್ರಕ್ರಿಯೆ ಕೈಗೊಂಡಿತ್ತಾದರೂ ದರಗಳಲ್ಲಿ ಭಾರಿ ವ್ಯತ್ಯಾಸ ಉಂಟಾಗಿದ್ದರಿಂದ ಸಂಸ್ಥೆಗೆ ಹೊರೆಯಾಗಲಿದೆ ಎಂದು ಯೋಜನೆ ಕೈ ಬಿಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ಪಿಎಂ ಇ-ಬಸ್‌ಗೆ ಅನುಮೋದನೆ ನೀಡಿದೆ. ಅಲ್ಲದೆ, ಅವಶ್ಯ ಮೂಲಸೌಕರ್ಯ ಒದಗಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.

ಹುಬ್ಬಳ್ಳಿ ಮತ್ತು ಬೆಳಗಾವಿ ನಗರಗಳಿಗೆ ತಲಾ 100 ಎಲೆಕ್ಟ್ರಿಕ್ ಬಸ್​ಗಳು ದೊರೆಯಲಿವೆ. ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದಿಸುವ ಕಂಪನಿಗಳನ್ನು ಸರ್ಕಾರವೇ ಗೊತ್ತುಪಡಿಸಲಿದ್ದು, ಕಂಪನಿಗಳು ಗ್ರಾಸ್ ಕಾಸ್ಟ್ ಕಾಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲಿ ಬಸ್‌ ಸೇವೆ ನೀಡಲಿವೆ.

ಏನಿದು ಜಿಸಿಸಿ ಮಾದರಿ?: ಬಸ್ ಸಂಚಾರ ಸೇವೆ, ಡ್ರೈವರ್‌ಗಳು, ಚಾರ್ಜಿಂಗ್ ಸ್ಟೇಷನ್‌ಗಳನ್ನು ಗುತ್ತಿಗೆ ಕಂಪನಿಯೇ ನಿರ್ವಹಿಸಲಿದೆ. ವಿದ್ಯುತ್ ಸಂಪರ್ಕ ಮತ್ತು ಜಾಗವನ್ನು ವಾಕರಸಾ ಸಂಸ್ಥೆ ಒದಗಿಸಲಿದೆ. ಕಿಮೀ ಲೆಕ್ಕದಲ್ಲಿ ಸಂಸ್ಥೆ ಕಂಪನಿಗೆ ಹಣ ಪಾವತಿಸಲಿದೆ. ಕಂಡಕ್ಟರ್​ಗಳನ್ನು ವಾಕರಸಾ ಸಂಸ್ಥೆ ಒದಗಿಸಲಿದೆ.

ಸಬ್ಸಿಡಿ: ಪಿಎಂ ಇ-ಬಸ್ ಸೇವಾ ಯೋಜನೆಯಡಿ ಕೇಂದ್ರ ಸರ್ಕಾರ ಕಿಮೀಗೆ ₹24 ಸಬ್ಸಿಡಿ ನೀಡಲಿದೆ. ಉಳಿದ ಮೊತ್ತವನ್ನು ವಾಕರಸಾ ಸಂಸ್ಥೆ ಭರಿಸಲಿದೆ. ಈ ಹಿಂದೆ ಫೇಮ್ ಯೋಜನೆಯಲ್ಲಿ ವಾಹನ ಒದಗಿಸುವ ಕಂಪನಿಗಳಿಗೆ ₹75-80ದರ ನೀಡಬೇಕಿತ್ತು. ಇದು ಹೊರೆಯಾಗಲಿದೆ ಎಂದು ಸಂಸ್ಥೆಯು ಯೋಜನೆಯನ್ನೇ ಕೈ ಬಿಟ್ಟಿತ್ತು. ಈಗ ಸರ್ಕಾರವೇ ₹24 ಸಬ್ಸಿಡಿ ನೀಡುವುದರಿಂದ ಹೊರೆ ತಗ್ಗಲಿದ್ದು, ಸಂಸ್ಥೆಗೂ ಹೊರೆಯಾಗದು. ಹೀಗಾಗಿ ಪಿಎಂ ಇ-ಬಸ್ ಸೇವಾ ಯೋಜನೆಯಡಿ ಬಸ್ ಸೇವೆ ಪಡೆಯಲಿದ್ದೇವೆ.

ವಿಸ್ತ್ರತ ಯೋಜನಾ ವರದಿ: ಟೆಂಡ‌ರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕಂಪನಿ ಬಸ್​ಗಳನ್ನು ಒದಗಿಸಲಿವೆ. ಹೀಗಾಗಿ, ಹುಬ್ಬಳ್ಳಿ ಗೋಕುಲ್ ರೋಡ್​ ಹಾಗೂ ಬೆಳಗಾವಿ ಬಸ್ ನಿಲ್ದಾಣದ ಹಿಂದುಗಡೆ ಜಾಗ ಗುರುತಿಸಲಾಗಿದೆ. ಮುಂದಿನ ಹಂತದ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ಸಲ್ಲಿಸಲಾಗಿದೆ. ಸರ್ಕಾರ ಅನುಮತಿ‌‌ ನೀಡಿದ ತಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ವಾಕರಸಾ ಸಂಸ್ಥೆ ಎಂಡಿ ಪ್ರಿಯಾಂಗಾ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ