250 ಪಾರ್ಕುಗಳ ಅಭಿವೃದ್ಧಿಗೆ ಪಾಲಿಕೆಯಿಂದ ಕ್ರಮ

KannadaprabhaNewsNetwork |  
Published : Jun 12, 2025, 02:00 AM IST

ಸಾರಾಂಶ

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 250 ಪಾರ್ಕುಗಳ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದ್ದು. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಆ ಮೂಲಕ ನಗರ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಅಶ್ವಿಜ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವ 250 ಪಾರ್ಕುಗಳ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದ್ದು. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಆ ಮೂಲಕ ನಗರ ಹಸಿರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಪಾಲಿಕೆ ಆಯುಕ್ತರಾದ ಅಶ್ವಿಜ ಹೇಳಿದರು.

ನಗರದ ಸಪ್ತಗಿರಿ ಗಾರೆನರಸಯ್ಯಕಟ್ಟೆ ಸಮೀಪ ಮಹಾನಗರಪಾಲಿಕೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿ 100 ಗಿಡಗಳ ನಿರ್ವಹಣೆಯನ್ನು ಒಂದು ಸ್ವ ಸಹಾಯ ಗುಂಪುಗಳಿಗೆ ನೀಡಲು ನಿರ್ಧರಿಸಲಾಗಿದೆ. ಈ ಬಾರಿ ತುಮಕೂರು ಮಹಾನಗರ ಪಾಲಿಕೆಯಿಂದ ಅಮೃತ ಯೋಜನೆಯಡಿ ಸುಮಾರು 60 ಪಾರ್ಕುಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪಾರ್ಕುಗಳಲ್ಲಿ ಗಿಡಗಳ ಜೊತೆಗೆ, ಮಕ್ಕಳ ಆಟಿಕೆ, ವಾರ್ಕಿಂಗ್ ಪಾಥ್ ಸೇರಿದಂತೆ ಹಲವು ಮನರಂಜನಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.ಇಂದು ಕೇಂದ್ರ ಸರಕಾರದ ಎರಡು ಯೋಜನೆಗಳ ಅಡಿಯಲ್ಲಿ ಪರಿಸರ ದಿನವನ್ನುಆಚರಿಸುತ್ತಿದ್ದೇವೆ. ತಾಯಿಯ ಹೆಸರಿನಲ್ಲಿ ಒಂದು ಗಿಡ, ಇಡೀ ಭಾರತದಲ್ಲಿ ನಡೆಯುತ್ತಿದೆ. ವುಮೆನ್ ಫಾರ್‌ ಟ್ರೀಸ್‌ ಎಂಬುದು ಮಹತ್ವದ ಘೋಷಣೆಯಾಗಿದೆ. ಎಲ್ಲೆಲ್ಲಿ ಖಾಲಿ ಜಾಗವಿದೆಯೋ ಅಲ್ಲಿ ಗಿಡಗಳನ್ನು ನೆಟ್ಟು, ಅವುಗಳ ನಿರ್ವಹಣೆಯನ್ನು ಸ್ವ ಸಹಾಯ ಸಂಘಗಳಿಗೆ ನೀಡುವ ಈ ಯೋಜನೆ ಚಾಲ್ತಿಗೆ ಬಂದಿದೆ ಎಂದರು.

ಪ್ರತಿಜ್ಞಾವಿಧಿ ಭೋಧಿಸಿ, ಗಿಡ ನೆಡುವ ಮೂಲಕ ಚಾಲನೆ ನೀಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ಮಾತನಾಡಿ, ಜಿಲ್ಲೆಯಲ್ಲಿ 19 ಸಾವಿರ ಗಿಡಗಳನ್ನು ನಡೆಸಬೇಕಾಗಿದ್ದು ಎಲ್ಲಾ ತಾಲೂಕು ನ್ಯಾಯಾಲಯಗಳ ಸಹಕಾರದೊಂದಿಗೆ ಈ ಗುರಿಯನ್ನು ತಲುಪಲು ನ್ಯಾಯಾಂಗ ಇಲಾಖೆ ಶ್ರಮಿಸುತ್ತಿದೆ.

ಜೂನ್ 5 ರಿಂದಲೇ ಈ ಗುರಿ ತಲುಪಲು ಕಾರ್ಯೋನ್ಮುಖವಾಗಿದ್ದೇವೆ. ಅಭಿವೃದ್ದಿ ಹೆಸರಿನಲ್ಲಿ ಕಾಂಕ್ರಿಟ್ ಕಾಡುಗಳು ನಿರ್ಮಾಣವಾಗಿ, ಹಸಿರು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿರುವುದನ್ನು ಕಾಣಬಹುದು.ಇದರಿಂದ ಮುಕ್ತಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಗಿಡ, ಮರಗಳನ್ನು ನೆಟ್ಟು ಸಂರಕ್ಷಿಸುವುದು. ಹಾಗಾಗಿ ಅನಿವಾರ್ಯವಾಗಿ ಒಂದು ಮರ ಕಡಿದರೆ, ಅದಕ್ಕೆ ಬದಲಾಗಿ ಮತ್ತೊಂದು ಗಿಡವನ್ನು ನೆಟ್ಟು ಮರವಾಗಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ನೀರಿನ ಸೆಲೆಗಳಾದ ಕೆರೆ ಕಟ್ಟೆಗಳನ್ನು ರಕ್ಷಿಸಬೇಕಿದೆ. ಕೆರೆಗಳ ಒತ್ತುವರಿ ತೆರವುಗೊಳಿಸದಿದ್ದರೆ, ಕೆರೆಯ ನೀರು ಸರಾಗವಾಗಿ ಹರಿಯದೆ ನಾಗರಿಕರಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ನಾಗರಿಕರು ಅರ್ಥ ಮಾಡಿಕೊಂಡು ಕೆರೆ, ಕುಂಟೆಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದರು.

ಸರಕಾರದಿಂದಲೇ ಎಲ್ಲವನ್ನು ನಿರೀಕ್ಷೆ ಮಾಡದೆ, ಇಂತಹ ಗಿಡಗಳು ಮರವಾಗಲು ಇಲ್ಲಿನ ನಾಗರಿಕರು ಅವುಗಳಿಗೆ ನೀರು ನೀಡಿ, ತಮ್ಮ ಜವಾಬ್ದಾರಿಯನ್ನು ಮೆರೆಯಬೇಕು. ಆಗ ಮಾತ್ರ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಯೋಗೀಶ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರವಿಚಂದ್ರ, ಉಪಪರಿಸರ ಅಧಿಕಾರಿ ಪನ್ನಗ, ಪಾಲಿಕೆಯ ವ್ಯವಸ್ಥಾಪಕರಾದ ಸುನೀತ, ಪಾಲಿಕೆ ಪರಿಸರ ಎಂಜಿನಿಯರ್ ಪೂರ್ಣಿಮಾ, ಅಧಿಕಾರಿ ಸಂಗಪ್ಪ, ರುದ್ರಮುನಿ, ಪಾಲಿಕೆಯ ಆರೋಗ್ಯ ನಿರೀಕ್ಷಕ ರುದ್ರೇಶ್, ಆನಂದ್, ಜಯಣ್ಣ, ರಂಗಪ್ಪ,ವಿವಿಧಸ್ವ ಸಹಾಯ ಸಂಘಗಳ ಮಹಿಳೆಯರು,ಸಪ್ತಗಿರಿ ಬಡಾವಣೆಯ ನಾಗರಿಕರು,ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ