ಹಾವೇರಿ: ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬುಧವಾರ ಹೋರಿಗಳನ್ನು ಶೃಂಗರಿಸಿ ಓಡಿಸುವ ಮೂಲಕ ರೈತರು ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಜಿಲ್ಲೆಯ ಗ್ರಾಮೀಣ ಭಾಗದ ರೈತರು ಬುಧವಾರ ಬೆಳಗ್ಗೆಯಿಂದಲೇ ತಮ್ಮ ಮನೆಗಳಲ್ಲಿರುವ ಎತ್ತು ಹಾಗೂ ಹೋರಿಗಳ ಮೈತೊಳೆದು, ಬಣ್ಣ ಹಚ್ಚಿ, ವಿವಿಧ ಬಣ್ಣದ ರಿಬ್ಬನ್, ಜೂಲಾ ಕಟ್ಟಿ, ಕೊಂಬಡುಸು ಹಾಕಿ, ಗೆಜ್ಜೆಸರ, ಕಾಲ್ಗೆಜ್ಜೆ, ಒಣಕೊಬ್ಬರಿ, ಚಕ್ಕುಲಿ, ಕೊಡುಬಳಿ ಹಾರ ಹಾಕಿ ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು.
ರಾಣಿಬೆನ್ನೂರು: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ತಾಲೂಕಿನ ಹುಲ್ಲತ್ತಿ ತಾಂಡಾದ ಬಳಿ ನಡೆದಿದೆ.ರಾಮಪ್ಪ ಠಾಖಪ್ಪ ಲಮಾಣಿ(58) ಮೃತಪಟ್ಟ ರೈತ. ರಾಮಪ್ಪ ಹಾಗೂ ಅವರ ಸಹೋದರರ ಜಂಟಿ ಖಾತೆಯಲ್ಲಿ 5.20 ಎಕರೆ ಜಮೀನಿದೆ. ಕೃಷಿಗಾಗಿ ರಾಮಪ್ಪ ಅವರು ರಾಣಿಬೆನ್ನೂರಿನ ಎಡಿಬಿ ಬ್ಯಾಂಕ್‌ನಲ್ಲಿ 2014ನೇ ಸಾಲಿನಲ್ಲಿ ₹1.80 ಲಕ್ಷ ಬೆಳೆ ಸಾಲ ಮಾಡಿದ್ದು, ನಂತರ ಸರ್ಕಾರ ಬೆಳೆ ಸಾಲ ಮನ್ನಾ ಮಾಡಿದಾಗ ₹31 ಸಾವಿರ ಬಾಕಿಯಿತ್ತು. ಇದಲ್ಲದೆ ರಾಮಪ್ಪ ಪುತ್ರನ ಹೆಸರಿನಲ್ಲಿ ರಾಣಿಬೆನ್ನೂರಿನ ಮಣಪ್ಪುರಂ ಬ್ಯಾಂಕಿನಲ್ಲಿ ಮಾಡಿದ ₹5 ಲಕ್ಷ ಹೋಂ ಲೋನ್‌ನಲ್ಲಿ ₹3.80 ಲಕ್ಷ ಬಾಕಿಯಿದೆ. ಬೆಳೆಸಾಲ ಹಾಗೂ ಪುತ್ರ ಮಾಡಿರುವ ಗೃಹ ಸಾಲ ತೀರಿಸುವ ಚಿಂತೆಯಿಂದ ನೊಂದು ಹುಲ್ಲತ್ತಿ ತಾಂಡಾ ಕ್ರಾಸ್ ಬಳಿಯ ತಮ್ಮ ಜಮೀನಿನಲ್ಲಿ ವಿಷ ಸೇವನೆ ಮಾಡಿದ್ದರು. ನಂತರ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.