ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಜಿಲ್ಲೆಯಲ್ಲಿ ಜು. 29ರ ವರೆಗೆ 9,02,947 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು ಶೇ. 100 ಸಾಧನೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಗದಗ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತಂತೆ ಜಿಲ್ಲೆಯಲ್ಲಿ ಜು. 29ರ ವರೆಗೆ 9,02,947 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು ಶೇ. 100 ಸಾಧನೆಯಾಗಿದೆ. 774971 ಎನ್ಯುಮರೇಷನ್ ಫಾರ್ಮ್‌ಗಳನ್ನು ಡಿಜಟಲೀಕರಣಗೊಳಿಸಲಾಗಿದ್ದು, ಶೇ 85.83ರಷ್ಟು ಪ್ರಗತಿಯಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮತದಾರಪಟ್ಟಿ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಕುರಿತು ಜರುಗಿದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪ್ರಗತಿಯಲ್ಲಿದ್ದು ಜಿಲ್ಲೆಯಲ್ಲಿ ಒಟ್ಟು 9,02,947 ಮತದಾರರು ಪಟ್ಟಿಯಲ್ಲಿದ್ದಾರೆ. 967 ಮತಗಟ್ಟೆಗಳಿವೆ. ಭಾರತೀಯ ಚುನಾವಣಾ ಆಯೋಗದ ಆದೇಶದನ್ವಯ ಬಿಎಲ್ಒಗಳು ಅಗಸ್ಟ್ 8ರ ವರೆಗೆ ಮನೆ ಮನೆಗೆ ಭೇಟಿ ನೀಡಿ ಎನ್ಯುಮರೇಷನ್ ಫಾರ್ಮ್ ವಿತರಿಸುವ ಕಾರ್ಯವನ್ನು ವಿಸ್ತರಿಸಲಾಗಿದೆ. ಎಸ್‌ಐಆರ್-2026ರ ಪ್ರಕ್ರಿಯೆ ಬಗ್ಗೆ ಊಹಾಪೋಹಗಳಿಗೆ ಕಿವಿ ಕೊಡದೇ ಚುನಾವಣಾ ಆಯೋಗದಿಂದ ಹೊರಡಿಸಲಾದ ವೇಳಾಪಟ್ಟಿಯಂತೆ ಎಲ್ಲರೂ ಸಂಬಂಧಿಸಿದ ಬಿಎಲ್‌ಒಗಳಿಗೆ ಸಮರ್ಪಕವಾದ ಮಾಹಿತಿ ನೀಡಬೇಕು. ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅತ್ಯಂತ ಪಾರದರ್ಶಕ ಮತ್ತು ನಿಖರ ಹೊಸ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಈ ವಿಶೇಷ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಆಗಸ್ಟ್ 8ರೊಳಗಾಗಿ ಮತಗಟ್ಟೆಗಳ ಪುನರ್ ವಿಂಗಡಣೆ ಕಾರ್ಯ ಜರುಗಲಿದೆ. ಆ. 17ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆ. 17ರಿಂದ ಸೆಪ್ಟೆಂಬರ್ 16ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಆ. 17ರಿಂದ ಅಕ್ಟೋಬರ್ 15ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇವಾರಿಗೊಳಿಸಲಾಗುವುದು. ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ ಎಂದು ತಿಳಿಸಿದರು.
ಈ ವೇಳೆ ಎನ್ಯುಮರೇಶನ್ ಫಾರ್ಮ್‌ಗಳ ವಿತರಣೆ, ಎನ್ಯುಮರೇಶನ್ ಫಾರ್ಮಗಳ ಡಿಜಿಟಲೀಕರಣ, ವಿವಿಧ ಕಾರಣಗಳಿಂದ ಸಂಗ್ರಹಿಸಲು ಸಾಧ್ಯವಾಗದ ಎನ್ಯುಮರೇಶನ್ ಫಾರ್ಮ್‌ಗಳ ವಿವರ ಹಾಗೂ ಮತದಾರರ ನೆರವು ಕೇಂದ್ರ ಕಾರ್ಯನಿರ್ವಹಣೆ ಹಾಗೂ ಬಿ.ಎಲ್.ಓಗಳ ನೆರವು ಕೇಂದ್ರಗಳ ಕಾರ್ಯನಿರ್ವಹಣೆ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಗಂಗಪ್ಪ ಎಂ., ಬಸನಗೌಡ ಕೋಟೂರ, ನಂದಾ ಹಣಬರಟ್ಟಿ, ಎಸ್.ಡಿ. ಪಾಟೀಲ ಹಾಗೂ ಚುನಾವಣಾ ತಹಸೀಲ್ದಾರ್ ಸಂತೋಷ ಹಿರೇಮಠ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.