ಸಿದ್ಧಗಂಗಾ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ: ಗಾನವಿ ರಾಜ್ಯಕ್ಕೆ 6ನೇ ಸ್ಥಾನ

KannadaprabhaNewsNetwork |  
Published : May 10, 2024, 01:30 AM IST
ದಾವಣಗೆರೆ  | Kannada Prabha

ಸಾರಾಂಶ

ಎಸ್ಸೆಸ್ಸೆಲ್ಸಿ 2023- 2024ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿನಿ ಎಚ್‌.ಜಿ.ಗಾನವಿ ರಾಜ್ಯಕ್ಕೆ 6ನೇ ಸ್ಥಾನ ಗಳಿಸಿದ್ದಾರೆ, ವಿಶೇಷಚೇತನ ಮಕ್ಕಳಿಬ್ಬರೂ ವಿಶೇಷ ಸಾಧನೆ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ.

- ಎಚ್.ವಿ. ಗಾನವಿ 625ಕ್ಕೆ 620 ಅಂಕ ಪಡೆದು ಜಿಲ್ಲೆಗೆ ಅಗ್ರಸ್ಥಾನ । ವಿಶೇಷ ಮಕ್ಕಳ ಸಾಧನೆಗೆ ಜಿಲ್ಲೆ ಬೆರಗು

- ಪೂರ್ಣ ಅಂಧೆ ಪಿ.ಯುಕ್ತಿ 593 ಅಂಕ, ಮತ್ತೊಬ್ಬರ ಆಸರೆ ಬೇಕಾದಂಥ ಗೋವರ್ಧನ ನಾಯ್ಕಗೆ 372 ಅಂಕ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಎಸ್ಸೆಸ್ಸೆಲ್ಸಿ 2023- 2024ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಗೆ ಶೇ.100 ಫಲಿತಾಂಶ ಲಭ್ಯವಾಗಿದ್ದು, ವಿದ್ಯಾರ್ಥಿನಿ ಎಚ್‌.ಜಿ.ಗಾನವಿ ರಾಜ್ಯಕ್ಕೆ 6ನೇ ಸ್ಥಾನ ಗಳಿಸಿದ್ದಾರೆ, ವಿಶೇಷಚೇತನ ಮಕ್ಕಳಿಬ್ಬರೂ ವಿಶೇಷ ಸಾಧನೆ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದಾರೆ.

ಶ್ರೀ ಸಿದ್ಧಗಂಗಾ ಶಾಲೆಯಿಂದ ಪರೀಕ್ಷೆಗೆ ಹಾಜರಾದ 306 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಎಚ್.ವಿ. ಗಾನವಿ 625ಕ್ಕೆ 620 ಅಂಕ ಪಡೆದು, ಜಿಲ್ಲೆಗೆ ಅಗ್ರಸ್ಥಾನ ಹಾಗೂ ರಾಜ್ಯಕ್ಕೆ 6ನೇ ಸ್ಥಾನ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡದಲ್ಲಿ 124, ಇಂಗ್ಲೀಷ್ 98, ಹಿಂದಿ 100, ಗಣಿತ 100, ವಿಜ್ಞಾನ 98, ಸಮಾಜ 100 ಸೇರಿದಂತೆ ಶೇ.99.20ರಂತೆ ಒಟ್ಟು 620 ಅಂಕ ಪಡೆದ ಸಾಧಕ ವಿದ್ಯಾರ್ಥಿನಿ ಎನಿಸಿದ್ದಾರೆ.

ಶಾಲೆಯ ಆರ್.ವರುಣ್ 611 ಅಂಕ, ಸನಾ ಅಜೀಂ 610, ಉಮ್ಮೆಹಫ್ಸಾ 607, ಎಂ.ಡಿ.ಚಂದನ್‌, ಎಂ.ಚೇತನ್ ತಲಾ 606, ಬಿ.ಜೆ.ದೀಪ, ಟಿ.ಸನತ್, ಕೆ.ಸಿಂಚನಾ, ಆರ್.ಎಂ.ಸಿರಿ, ಯಜ್ಞಶ್ರೀ ತಲಾ 604 ಅಂಕ ಪಡೆದಿದ್ದಾರೆ.

ಶಾಲೆಯ ಒಟ್ಟು 11 ಮಕ್ಕಳು 600ಕ್ಕಿಂತ ಹೆಚ್ಚು ಅಂಕವನ್ನು, 47 ಮಕ್ಕಳು ಶೇ.90ಕ್ಕಿಂತ ಹೆಚ್ಚು ಅಂಕ, 83 ವಿದ್ಯಾರ್ಥಿಗಳು ಶೇ.85 ಅಂಕಗಳು, 190 ಮಕ್ಕಳು ಶೇ.60ಕ್ಕಿಂತ ಹೆಚ್ಚು ಅಂಕ, 33 ಮಕ್ಕಳು ಶೇ.50ಕ್ಕಿಂತ ಹೆಚ್ಚು ಅಂಕ ಪಡೆದು, ಸಾಧನೆ ಮಾಡಿದ್ದಾರೆ. ಕನ್ನಡದಲ್ಲಿ 125ಕ್ಕೆ 125 ಅಂಕಗಳನ್ನು 12 ಮಕ್ಕಳು, ಹಿಂದಿಯಲ್ಲಿ 28 ಮಕ್ಕಳು 100ಕ್ಕೆ 100 ಅಂಕ, ಗಣಿತದಲ್ಲಿ ಓರ್ವ, ಸಮಾಜದಲ್ಲಿ 4 ಮಕ್ಕಳು 100ಕ್ಕೆ 100 ಅಂಕ ಪಡೆದಿದ್ದಾರೆ.

ಪೂರ್ಣ ಅಂಧತ್ವ ಹೊಂದಿರುವ ವಿದ್ಯಾರ್ಥಿನಿ ಪಿ.ಯುಕ್ತಿ ಅವರು 593 ಅಂಕಗಳನ್ನು, ಕೈ-ಕಾಲುಗಳು ಬೆಳವಣಿಗೆ ಇಲ್ಲದೇ, ಮತ್ತೊಬ್ಬರ ಆಸರೆ ಬೇಕಾದಂತಹ ವಿಶೇಷಚೇತನ ವಿದ್ಯಾರ್ಥಿನಿ ಗೋವರ್ಧನ ನಾಯ್ಕ 372 ಅಂಕ ಪಡೆದು, ಉತ್ತೀರ್ಣ ಆಗಿರುವುದು ಶಾಲೆಯ ಈ ವರ್ಷದ ಸಾಧನೆಗಳಲ್ಲಿಯೇ ವಿಶೇಷ ಸಾಧನೆಯಾಗಿ ಗಮನ ಸೆಳೆದಿದೆ.

ಸಾಧಕ ಮಕ್ಕಳನ್ನು ಶಾಲೆ ಆವರಣದಲ್ಲಿ ಸಾಶಿಇ ಉಪನಿರ್ದೇಶಕ ಜಿ.ಕೊಟ್ರೇಶ, ಶಾಲೆ ಆಡಳಿತ ಮಂಡಳಿ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಸೇರಿದಂತೆ ಗಣ್ಯರು ಸನ್ಮಾನಿಸಿ, ಮುಂದಿನ ಭವಿಷ್ಯ ಕ್ಕೆ ಶುಭಾರೈಸಿದರು.

ಅವಿಸ್ಮರಣೀಯ ಕೊಡುಗೆ:

ಇದೇ ವೇಳೆ ಮಾತನಾಡಿದ ಡಿಡಿಪಿಐ ಕೊಟ್ರೇಶ ಅವರು, ದಾವಣಗೆರೆ ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕೊಡುಗೆ ಅವಿಸ್ಮರಣೀಯವಾಗಿದೆ. ಯಾವಾಗಲೂ ಫಲಿತಾಂಶದಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಗೆ ಉತ್ತಮ ಸ್ಥಾನಮಾನ ತಂದುಕೊಡುವ ಕೆಲಸ ಮಾಡುತ್ತಿದೆ. 100ಕ್ಕೆ 100 ಫಲಿತಾಂಶ, 625ಕ್ಕೆ 620 ಅಂಕ ಪಡೆಯುವುದು ಸುಲಭವಲ್ಲ. ಅದರ ಹಿಂದಿರುವ ಶ್ರಮ, ಶಿಕ್ಷಕರ ಬದ್ಧತೆಯೂ, ವಿದ್ಯಾರ್ಥಿಗಳ ಇಚ್ಛಾಶಕ್ತಿ ಇಂತಹ ಸಾಧನೆಗೆ ಕಾರಣ ಎಂದು ಶ್ಲಾಘಿಸಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿ, ಸಾಧಕ ವಿದ್ಯಾರ್ಥಿನಿ ಎಚ್.ಜಿ. ಗಾನವಿ 600ಕ್ಕಿಂತ ಹೆಚ್ಚು ಅಂಕ ಪಡೆದು, ಇತರೆ 10 ಮಕ್ಕಳ ಸಾಧನೆಯಷ್ಟೇ ಅಲ್ಲ. ಇಡೀ ಶಾಲೆ ಮಕ್ಕಳ ಸಾಧನೆಗೆ ಹೆಮ್ಮೆಪಡುವಂತಿದೆ. ಆಡಳಿತ ಮಂಡಳಿ, ಶಿಕ್ಷಕರ ಪರಿಶ್ರಮವೂ ಮಕ್ಕಳ ಸಾಧನೆಗೆ ಪ್ರೇರಣೆಯಾಗಿದೆ. ವಿಶೇಷ ಮಕ್ಕಳಾದ ಪಿ.ಯುಕ್ತಿ ಹಾಗೂ ಗೋವರ್ಧನ ನಾಯ್ಕ ಸಾಧನೆ ಮಾಡುವವರಿಗೆ ತಮ್ಮ ಆತ್ಮವಿಶ್ವಾಸ, ಸಾಧನೆಯಿಂದ ಪ್ರೇರಣೆಯಾಗಿದ್ದಾರೆ. ಈ ಮಕ್ಕಳ ಪಾಲಕರು, ಶಿಕ್ಷಕರ ಪರಿಶ್ರಮವೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದಕ್ಕೆ ಡಿಡಿಪಿಐ ಕೊಟ್ರೇಶ ಸಹ ಧ್ವನಿಗೂಡಿಸಿದರು.

ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ತಂದ ಎಲ್ಲ 306 ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗಾಗಿ ಮಕ್ಕಳು, ಪಾಲಕರಿಗೆ, ಶಿಕ್ಷಕ-ಶಿಕ್ಷಕಿಯರು, ಸಂಸ್ಥೆ ಸಿಬ್ಬಂದಿಗೆ ಆಡಳಿತ ಮಂಡಳಿ ಮುಖ್ಯಸ್ಥರಾದ ಡಾ.ಜಸ್ಟಿನ್ ಡಿಸೌಜ, ಡಿ.ಎಸ್.ಹೇಮಂತ್, ಡಾ.ಡಿ.ಎಸ್.ಜಯಂತ್ ಸೇರಿದಂತೆ ಸದಸ್ಯರು, ಮುಖ್ಯಶಿಕ್ಷಕರು, ಶಿಕ್ಷಕರು, ಪಾಲಕರು ಅಭಿನಂದಿಸಿದರು.

- - - ಬಾಕ್ಸ್‌-1ಸಾಧಕಿ ಗಾನವಿ ರಾಜ್ಯಕ್ಕೆ 6ನೇ ಸ್ಥಾನ

ದಾವಣಗೆರೆ ಹೊರವಲಯದ ಜೆ.ಎಚ್.ಪಟೇಲ್ ಬಡಾವಣೆಯ ವಾಸಿ, ವ್ಯಾಪಾರಿ ಎಚ್.ಗಿರೀಶ, ಡಿ.ಎಸ್‌. ಜ್ಯೋತಿ ದಂಪತಿ ಪುತ್ರಿಯಾದ ಎಚ್‌.ಜಿ.ಗಾನವಿ ರಾಜ್ಯಕ್ಕೆ 6ನೇ ರ್ಯಾಂಕ್, ದಾವಣಗೆರೆ ಮೊದಲ ಸ್ಥಾನ ಗಳಿಸಿದ್ದಾರೆ. ತನ್ನ ಈ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರ ಪ್ರೋತ್ಸಾಹವೇ ಕಾರಣ ಎಂದಿದ್ದಾರೆ. ನಿತ್ಯವೂ ಬೆಳಗ್ಗೆ 6.30ರಿಂದ 8 ಗಂಟೆವರೆಗೆ ಹಾಗೂ ಸಂಜೆ 5.30ರಿಂದ ರಾತ್ರಿ 8 ಗಂಟೆವರೆಗೆ ಸ್ಟಡಿ ಕ್ಲಾಸ್‌ನಲ್ಲಿ ಡಿ.ಎಸ್. ಹೇಮಂತ ಸರ್, ಹರ್ಷ ಸರ್, ಡಾ. ಡಿ.ಎಸ್‌. ಜಯಂತ್ ಸರ್ ಮಾರ್ಗದರ್ಶನ, ಎಲ್ಲ ಶಿಕ್ಷಕ-ಶಿಕ್ಷಕಿಯರ ಪ್ರೋತ್ಸಾಹದಿಂದ ಈ ಸಾಧನೆ ನನ್ನಿಂದ ಸಾಧ್ಯವಾಗಿದೆ ಎಂದಿದ್ದಾರೆ.

- - -

ಬಾಕ್ಸ್‌-2ಅಂಧ ವಿದ್ಯಾರ್ಥಿನಿ ಪಿ.ಯುಕ್ತಿ ಸಾಧನೆ

ದಾವಣಗೆರೆಯ ಗಾರ್ಮೆಂಟ್ಸ್‌ ಕೆಲಸ ಮಾಡುವ ತಂದೆ ಪ್ರಭಾಕರ್, ಗೃಹಿಣಿ ತಾಯಿ ಅನಿತಾ ಅವರ ಮುದ್ದಿನ ಮಗಳು ಪಿ.ಯುಕ್ತಿ. ಎರಡೂ ಕಣ್ಣು ಕಾಣದ ಯುಕ್ತಿ ಅವರ ಓದಿಗೆ ತಾಯಿ ಅನಿತಾ ಆಸರೆಯಾಗಿ ನಿಂತವರು. ಲ್ಯಾಪ್‌ ಟಾಪ್‌, ಕಂಪ್ಯೂಟರ್‌ನಲ್ಲಿ ಎನ್‌ವಿಡಿಎ ಸಾಫ್ಟ್‌ವೇರ್ ಮೂಲಕ ಯುಕ್ತಿ ಓದಿದ್ದು ಮನನ ಮಾಡಿಕೊಂಡು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು, ವಿಶೇಷಚೇತನರಲ್ಲಿ ಹೊಸ ಉತ್ಸಾಹ ತಂದ ಸಾಧಕಿಯಾಗಿದ್ದಾರೆ. ಶಾಲೆ ಆಡಳಿತ ಮಂಡಳಿ, ಶಿಕ್ಷಕರ ಪ್ರೋತ್ಸಾಹ, ಸಹಕಾರ, ಮಾರ್ಗದರ್ಶನ ತಾನು ಹೆಚ್ಚು ಅಂಕ ಗಳಿಸಲು ಕಾರಣವಾಯಿತು ಎಂದಿದ್ದಾರೆ.

- - - ಬಾಕ್ಸ್‌-3ಗೋವರ್ಧನ ನಾಯ್ಕ ಸಾಧನೆಗೆ ತಾಯಿ ಆನಂದಭಾಷ್ಪ

ದಾವಣಗೆರೆ ವಾಸಿಯಾದ ಭಾವಸಿಂಗ್ ನಾಯ್ಕ, ಶಶಿಕಲಾ ದಂಪತಿ ಪುತ್ರ ಗೋವರ್ಧನ ನಾಯ್ಕ. ನೀರಾವರಿ ಇಲಾಖೆ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿಯಾಗಿ ಕಾರ್ಯನಿರ್ವಹಿಸುವ ಶಶಿಕಲಾ ಅವರ ಪತಿ ಭಾವಸಿಂಗ್ ನಾಯ್ಕ ನಿಧನರಾಗಿದ್ದಾರೆ. ಕುಟುಂಬದ ಜೊತೆಗೆ ವಿಶೇಷ ಮಗನ ಆರೈಕೆ, ಉಪಚಾರ, ಶಿಕ್ಷಣದ ಕಡೆಗೂ ಗಮನಹರಿಸಿ, ತಮ್ಮ ತಪಸ್ಸಿನಲ್ಲಿ ಸಾಧನೆ ಮಾಡಿದಂತಾಗಿದೆ. ಮತ್ತೊಬ್ಬರ ಸಹಾಯ ಅನಿವಾರ್ಯವಾದ, ಕೈ-ಕಾಲುಗಳ ಬೆಳವಣಿಗೆ ಇಲ್ಲದ ವಿಶೇಷಚೇತನ ಮಗ ಗೋವರ್ಧನ ನಾಯ್ಕ 372 ಅಂಕ ಪಡೆದು, ತಾಯಿ ಶಶಿಕಲಾ ಕಣ್ಣಂಚಿನಲ್ಲಿ ಖುಷಿಯ ಕಣ್ಣೀರು ಬರುವಂತಹ ಸಾಧನೆ ಮಾಡಿದ್ದಾನೆ.

- - - -19ಕೆಡಿವಿಜಿ4:

ದಾವಣಗೆರೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಾಧಕ ಮಕ್ಕಳಿಗೆ ಡಿಡಿಪಿಐ ಕೊಟ್ರೇಶ, ಬಿಇಒ ಪುಷ್ಪಲತಾ, ಸಂಸ್ಥೆ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಡಿ.ಎಸ್.ಹೇಮಂತ್, ಡಾ. ಡಿ.ಎಸ್. ಜಯಂತ್ ಆಡಳಿತ ಮಂಡಳಿ, ಶಿಕ್ಷಕ-ಶಿಕ್ಷಕಿಯರು ಸನ್ಮಾನಿಸಿದರು.

- - -

-19ಕೆಡಿವಿಜಿ5:

ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಸಾಧಕ ವಿದ್ಯಾರ್ಥಿನಿ ಎಚ್.ಜಿ. ಗಾನವಿ ರಾಜ್ಯಕ್ಕೆ 6ನೇ ಸ್ಥಾನ, ಜಿಲ್ಲೆಗೆ ಅಗ್ರಸ್ಥಾನ ಪಡೆದಿದ್ದಾರೆ.

- - -

-19ಕೆಡಿವಿಜಿ6, 7, 8, 9, 10, 11, 12, 13, 14, 15: ದಾವಣಗೆರೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಾಧಕ ವಿದ್ಯಾರ್ಥಿನಿಯರು.

- - -

-19ಕೆಡಿವಿಜಿ16:

ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿಶೇಷ ಸಾಧನೆ ಮಾಡಿದ ವಿಶೇಷ ವಿದ್ಯಾರ್ಥಿನಿ ಪಿ.ಯುಕ್ತಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ