ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಗುರುವಾರ ಸಂಜೆಯಿಂದ ಸತತ ಎರಡು ಗಂಟೆಗೂ ಹೆಚ್ಚಿನ ಕಾಲ ಮಳೆ ಸುರಿದ ಪರಿಣಾಮ 20ಕ್ಕೂ ಹೆಚ್ಚಿನ ಮರ ಮತ್ತು ರೆಂಬೆಗಳು ಬಿದ್ದಿವೆ. ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಸಂಚಾರ ವ್ಯವಸ್ಥೆ ಅಸ್ತವ್ಯವಾಯಿತು.ಬಿಸಿಲ ಬೇಗೆಯಿಂದ ಬೇಯುತ್ತಿದ್ದ ಬೆಂಗಳೂರಿಗೆ ಕಳೆದೊಂದು ವಾರದಿಂದ ಮಳೆರಾಯ ತಂಪೆರೆಯುತ್ತಿದ್ದಾನೆ. ಮಂಗಳವಾರ ಹೊರತುಪಡಿಸಿ ಉಳಿದಂತೆ ಸೋಮವಾರದಿಂದ ಗುರುವಾರದವರೆಗೆ ಸಂಜೆ ಮತ್ತು ರಾತ್ರಿ ವೇಳೆಗೆ ಭಾರೀ ಮಳೆ ಸುರಿದಿದೆ.
ಕೆರೆಯಂತಾದ ರಸ್ತೆ, ಕೆಳ ಸೇತುವೆಗಳು:ಮಳೆ ನೀರು ಸರಾಗವಾಗಿ ಚರಂಡಿಗಳಲ್ಲಿ ಹರಿಯದ ಕಾರಣ ಪ್ರಮುಖ ರಸ್ತೆ, ಕೆಳ ಸೇತುವೆ, ಮೇಲ್ಸೇತುವೆಗಳಲ್ಲಿ ನೀರು ನಿಂತಿತ್ತು. ಓಕಳಿಪುರ ಕೆಳಸೇತುವೆ, ಕಾವೇರಿ ಜಂಕ್ಷನ್ ಕೆಳಸೇತುವೆ, ಮೈಸೂರು ರಸ್ತೆ ಮೇಲ್ಸೇತುವೆ, ಹೆಬ್ಬಾಳ ಮೇಲ್ಸೇತುವೆ ಕೆಳಭಾಗ, ರಿಚ್‌ಮಂಡ್ ವೃತ್ತ ಮೇಲ್ಸೇತುವೆ ಬಳಿ, ಶಿವಾನಂದ ವೃತ್ತದ ರೈಲ್ವೆ ಕೆಳಸೇತುವೆ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ರಾತ್ರಿ 7 ಗಂಟೆಯಿಂದ ಮಳೆ ಸುರಿದ ಪರಿಣಾಮ ಕೆಲಸ ಮುಗಿಸಿ ಮನೆಗೆ ತೆರಳುವವರು ಮಳೆಗೆ ಸಿಲುಕಿದರು. ಅನೇಕ ಕಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು.
ಸುರಕ್ಷತಾ ಕ್ರಮ:ಬುಧವಾರ ಸುರಿದ ಮಳೆಗೆ ಪಾಟರಿಟೌನ್‌ನಲ್ಲಿ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ರಸ್ತೆ ಕುಸಿದು ಆತಂಕ ಸೃಷ್ಟಿಯಾಗಿತ್ತು.. ಅದನ್ನು ಗುರುವಾರ ಬೆಳಗ್ಗೆಯೇ ಮುಚ್ಚಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉಳಿದಂತೆ ಬುಧವಾರ ಸುರಿದ ಭಾರೀ ಮಳೆಗೆ 171 ಮರ ಮತ್ತು ರೆಂಬೆಗಳು ಬಿದ್ದಿದ್ದು, ಅವುಗಳಲ್ಲಿ 119 ಮರ ಮತ್ತು ರೆಂಬೆಗಳನ್ನು ತೆರವು ಮಾಡಲಾಗಿದೆ. ಗುರುವಾರ ಒಂದೇ ದಿನ 20ಕ್ಕೂ ಹೆಚ್ಚಿನ ಮರ ಮತ್ತು ರೆಂಬೆಗಳು ಬಿದ್ದಿವೆ. ಪಾಲಿಕೆ ಸಹಾಯವಾಣಿ ಕೇಂದ್ರಕ್ಕೆ 70ಕ್ಕೂ ಹೆಚ್ಚಿನ ಮರ ಮತ್ತು ರೆಂಬೆಗಳು ಬಿದ್ದಿರುವ ದೂರು ದಾಖಲಾಗಿದೆ. ಅವುಗಳಲ್ಲಿ 55 ಮರ ಮತ್ತು ರೆಂಬೆಗಳನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ.ವಲಯವಾರು ಸಹಾಯವಾಣಿ:
ಮುಂಗಾರು ಪೂರ್ವ ಮಳೆ ಭರ್ಜರಿಯಾಗಿ ಬೀಳುತ್ತಿರುವ ಪರಿಣಾಮ ಸಾರ್ವಜನಿಕರಿಂದ ದೂರು ಸ್ವೀಕರಿಸಲು ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಬಿಬಿಎಂಪಿ ವಲಯವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಿದೆ. ಸಹಾಯವಾಣಿ ಸಂಖ್ಯೆ 1533 ಮೂಲಕವೂ ದೂರು ದಾಖಲಿಸುವಂತೆ ಕೋರಲಾಗಿದೆ.ವಲಯ ಸಹಾಯವಾಣಿ ಕೇಂದ್ರಗಳ ಸಂಖ್ಯೆ:ಬೊಮ್ಮನಹಳ್ಳಿ 080 25732447, 25735642, 9480685707
ದಾಸರಹಳ್ಳಿ 080-28394909, 9480685709ಪೂರ್ವ 080 22975803, 9480685702ಮಹದೇವಪುರ 080 28512300, 9480685706
ಆರ್.ಆರ್.ನಗರ 080 28601851, 9480685708ದಕ್ಷಿಣ 080 26566362, 22975703, 9480685704ಪಶ್ಚಿಮ 080 23463366, 23561692, 9480685703ಯಲಹಂಕ 080 23636671, 22975936, 9480685705